ಅಜೆಕಾರು : ಕಾರ್ಕಳ ಹೆಬ್ರಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮರ್ಣೆ ಪಂಚಾಯತ್ ವ್ಯಾಪ್ತಿಯ ಎಣ್ಣೆಹೊಳೆ ಪೇಟೆಯ ರಸ್ತೆಯಂಚಿನ ತೋಡು ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯ, ಸೇರಿದಂತೆ ಕಸಕಡ್ಡಿಗಳಿಂದ ತುಂಬಿ ಹೋಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ನಿರ್ಮಿಸಲಾದ ತೋಡುಗಳು ತ್ಯಾಜ್ಯ ಗುಂಡಿಗಳಂತೆ ಕಾಣುತ್ತವೆ.
ಮಳೆಗಾಲ ಈಗಾಗಲೇ ಪ್ರಾರಂಭವಾಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಕಳೆದ ವರ್ಷ ಎಣ್ಣೆಹೊಳೆ ಪೇಟೆಯ ಸ್ವಲ್ಪ ಭಾಗದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಉಳಿದ ಭಾಗ ಹಾಗೆ ಇರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಜತೆಗೆ ಎಣ್ಣೆಹೊಳೆ ಶಾಲೆಯಿಂದ ಪೇಟೆವರೆಗಿನ ರಸ್ತೆಯಂಚಿನ ತೋಡು ಗಿಡಗಳಿಂದ ಆವೃತಗೊಂಡಿದೆ.
ಮಳೆಗಾಲ ಆರಮಭವಾಗುತ್ತಿದ್ದರೂಹೂಳೆತ್ತುವ ಕಾರ್ಯ ನಡೆದಿಲ್ಲ. ಇದರಿಂದ ನೀರು ಚರಂಡಿಯಲ್ಲಿ ಹರಿಯುವ ಬದಲು ರಸ್ತೆಯಲ್ಲಿಯೇ ಹರಿದು ರಸ್ತೆ ತಂಬ ಹೊಂಡ ಗುಂಡಿಗಳು ನಿರ್ಮಾಣವಾಗಿ ಅನಂತರ ಸಂಚಾರಕ್ಕೆ ಸಂಕಷ್ಟಪಡಬೇಕಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಅಲ್ಲದೆ ತೋಡಿನಲ್ಲಿ ನೀರು ಸರಾಗವಾಗಿ ಹರಿಯದೇ ಇರುವುದರಿಂದ ನೀರು ನಿಂತು ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಕಾಡುತ್ತಿದೆ. ಜತೆಗೆ ಸರಕಾರಿ ಪ್ರಾಥಮಿಕ ಶಾಲೆಯು ಬಳಿಯಲ್ಲಿಯೇ ಇರುವುದರಿಂದ ಮಕ್ಕಳು ಶಾಲೆಗೆ ಹಾಗೂ ಮನೆಗೆ ತೆರಳುವ ಸಂದರ್ಭ ಸಂಕಷ್ಟ ಪಡಬೇಕಾಗಿದೆ.
ಆದುದರಿಂದ ಕೂಡಲೇ ತೋಡಿನ ಹೂಳನ್ನೆತ್ತಿ ನೀರು ಹರಿಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೀರು ಹರಿಯಲು ಜಾಗವಿಲ್ಲ
ಎಣ್ಣೆಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ಲದೆ ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಹಿಂದೆ ಹೀಗೆ ಆಗಿ ರಸ್ತೆಯ ಡಾಮಾರೆಲ್ಲಾ ಕಿತ್ತು ಹೋಗಿ ಸಂಚಾರ ನಡೆಸುವುದೂ ಅಸಾಧ್ಯವಾಗಿತ್ತು. ಘಟನೆ ಮತ್ತೆ ಮರಕಳಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು.
-ಮಹಮ್ಮದ್ ಮೀರಾ,
ಭಾರತ್ ನಿರ್ಮಾಣ್ ಸ್ವಯಂ ಸೇವಕರ