Advertisement

ಮನೆ-ಮನೆಗೂ ಮಣ್ಣಿನ ಗಣಪ ಅಭಿಯಾನ: ಮಡಿವಾಳ

05:49 PM Aug 18, 2021 | Team Udayavani |

ಕಲಬುರಗಿ: ಪರಿಸರ ಸ್ನೇಹಿ ಗಣಪತಿ ಮೂರ್ತಿ ಮಾರಾಟ ಮತ್ತು ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಸ್ವಗ್ರಾಮ ಸಂಸ್ಥೆ ವತಿಯಿಂದ ಪ್ರಸಕ್ತ ವರ್ಷ ಅತ್ಯಂತ ಕಡಿಮೆ ದರದಲ್ಲಿ ಮಣ್ಣಿನ ಮೂರ್ತಿ ನೀಡಲಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಸಂಗಮೇಶ ಮಡಿವಾಳ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ “ಮನೆ-ಮನೆಗೂ ಮಣ್ಣಿನ ಗಣಪ’ ಎಂಬ ಅಭಿಯಾನ ನಡೆಸುತ್ತಿದ್ದು, ಈ ಬಾರಿ ಕಲಬುರಗಿ ನಗರದಲ್ಲೇ ಅಂದಾಜು 10 ಸಾವಿರ ಮಣ್ಣಿನ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ಇವುಗಳ ಬೆಲೆ ಕೇವಲ 40ರೂ.ದಿಂದ ಆರಂಭವಾಗಲಿವೆ ಎಂದರು.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಬಳಕೆಯಿಂದ ಮಣ್ಣು, ಗಾಳಿ, ಜಲ ಮಾಲಿನ್ಯ ಉಂಟಾಗುತ್ತದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಮಣ್ಣಿನ ಮೂರ್ತಿಗಳ ಮಾರಾಟ ಮತ್ತು ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಇಷ್ಟು ವರ್ಷಗಳಿಂದ ಬೆಳಗಾವಿಯಿಂದ ತರಿಸಿದ ಮೂರ್ತಿಗಳನ್ನು ಮನೆ-ಮನೆಗೆ ತಲುಪಿಸಿದ್ದೇವೆ. ಆದರೆ, ಈ ಮೂರ್ತಿಗಳ ಬೆಲೆ ಜಾಸ್ತಿ ಎಂದು ಬಹಳಷ್ಟು ಜನ ಖರೀದಿ ಮಾಡುತ್ತಿರಲಿಲ್ಲ ಎಂದರು.

ಪರಿಸರಕ್ಕೆ ಹಾನಿ ಮಾಡದಂತ ಗಣೇಶನ ಮೂರ್ತಿಗಳನ್ನು ಇಲ್ಲಿಯೇ ತಯಾರಿಸಲಾಗುತ್ತಿದೆ. ಬೆಳಗಾವಿಯಿಂದ ಮಣ್ಣು ತರಿಸಿ ನಾವೇ ಸಿದ್ಧಪಡಿಸುತ್ತಿದ್ದೇವೆ. ಇದರಿಂದ ಕಳೆದ ಜನವರಿಯಿಂದ 30 ಮಹಿಳೆಯರು ಉದ್ಯೋಗ ಪಡೆದಿದ್ದಾರೆ. ಮೂರ್ತಿಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾದರೆ ಇನ್ನು ಹಲವು ಮಹಿಳೆಯರಿಗೆ ವರ್ಷಪೂರ್ತಿ ಕೆಲಸ ಕೊಡಲು ಸಾಧ್ಯವಿದೆ. ಇದು ಸ್ಥಳೀಯ ಉದ್ಯೋಗ ಸೃಷ್ಟಿಗೂ ಪೂರಕವಾಗಲಿದೆ ಎಂದು ಹೇಳಿದರು.

ಜೇಡಿ ಮಣ್ಣಿನಿಂದ ತಯಾರಿಸಿದ ಈ ಗಣೇಶನ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಕೈಜೋಡಿಸಬೇಕು. ಹೆಚ್ಚೆಚ್ಚು ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸುವ ರೂಢಿ ಜನರಿಗೂ ಬರಬೇಕು. ಮೂರ್ತಿ ಬೇಕಾದವರು ನಗರದ ಸೂಪರ್‌ ಮಾರ್ಕೆಟ್‌ನ ಹುಮನಾಬಾದ್‌ ಬೇಸ್‌ ಸಮೀಪದ ಸುಭಾಷ ಚಂದ್ರ ಬೋಸ್‌ ಪ್ರತಿಮೆ ಹಿಂಭಾಗದಲ್ಲಿರುವ ಸಂಸ್ಥೆ ಕಚೇರಿ ಅಥವಾ ಮೊ.ಸಂ. 76769 22891ಕ್ಕೆ ಸಂಪರ್ಕಿಸಬಹುದು ಎಂದರು.ಮಣ್ಣಿನ ಗಣೇಶ ಮೂರ್ತಿ ತಯಾರಕರಾದ ಸರಸ್ವತಿ ಸಾರವೆ, ಕಲಾವತಿ ಮಠಪತಿ, ಈರಮ್ಮ ವಿಶ್ವಕರ್ಮ, ಸವಿತಾ ಚಂದ್ರಕಾಂತ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next