Advertisement

ಹೆಚ್ಚು ರಸಗೊಬ್ಬರ ಬಳಕೆಯಿಂದ ಮಣ್ಣಿನ ಫ‌ಲವತ್ತತೆ ಕ್ಷೀಣ

09:41 PM Oct 22, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಯತೇತ್ಛವಾಗಿ ರಸಗೊಬ್ಬರಗಳ ಬಳಕೆಯನ್ನು ಮಿತಿ ಮೀರಿ ಬಳಸುತ್ತಿರುವ ಪರಿಣಾಮ ಮಣ್ಣಿನ ಫ‌ಲವತ್ತತೆ ಕ್ಷೀಣಿಸುತ್ತಿದೆ. ಆದ್ದರಿಂದ ವಿವಿಧ ಗೊಬ್ಬರಗಳ ಸಮಗ್ರ ಬಳಕೆ ಬಗ್ಗೆ ರೈತರು ಜಾಗೃತರಾಗದಿದ್ದರೆ ಭವಿಷ್ಯದ ದಿನಗಳಲ್ಲಿ ಕೃಷಿ ಮಾಡುವುದು ಕಷ್ಟಕರವಾಗಲಿದೆ ಎಂದು ಜಿಲ್ಲೆಯ ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಎಚ್ಚರಿಸಿದರು.

Advertisement

ಜಿಲ್ಲೆಯ ಕುರುಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಕೃಷಿ ಸಹಕಾರ ಹಾಗೂ ರೈತರ ಕಲ್ಯಾಣ ಸಚಿವಾಲಯ ಹಾಗೂ ಮಂಗಳೂರು ಕೆಮಿಕಲ್ಸ್‌ ಮತ್ತು ಫ‌ರ್ಟಿಲೈಸರ್ ಸಂಯುಕ್ತಾಶ್ರಯದಲ್ಲಿ ಗೊಬ್ಬರ ಬಳಕೆ ಕುರಿತು ರೈತರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಗದರ್ಶನ ಅಗತ್ಯ: ರೈತರು ಅಧಿಕ ಹಾಗೂ ಸುಸ್ಥಿರ ಇಳುವರಿ ಪಡೆಯಬೇಕಾದರೆ ಭೂಮಿಗೆ ಸಮತೋಲನ ಗೊಬ್ಬರಗಳ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡಬೇಕಾಗಿದೆ. ಯಾವುದೇ ಬೆಳೆಗೆ ರಸಗೊಬ್ಬರ ಬಳಕೆಗೂ ಮೊದಲು ಕೃಷಿ ತಜ್ಞರ ಸಲಹೆ, ಮಾರ್ಗದರ್ಶನ ಅನುಸರಿಸುವುದು ಬಹಳ ಮುಖ್ಯ ಎಂದರು. ಕೃಷಿ ಭೂಮಿಯ ಫ‌ಲವತ್ತತೆ ಒಮ್ಮೆ ಕ್ಷೀಣಿಸಿದರೆ ಸುಧಾರಿಸಲು ವರ್ಷಗಳು ಕಳೆಯುತ್ತದೆ. ರೈತರು ರಸಗೊಬ್ಬರ ಬಳಕೆ ಮಿತಿಯಲ್ಲಿರಬೇಕು. ಸಾವಯುವ ಗೊಬ್ಬರ ಬಳಕೆ ಅಭ್ಯಾಸ ಮಾಡಿಕೊಳ್ಳಬೇಕೆಂದರು.

ಸಾವಯವ ಗೊಬ್ಬರ ತಯಾರಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಷ್ಮೆಕೃಷಿ ಮಹಾವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಪಿ.ವೆಂಕಟರವಣ ಮಾತನಾಡಿ, ಕೇವಲ ರಸಾಯನಿಕ ರಸಗೊಬ್ಬಗಳಿಂದ ಮಾತ್ರ ಹೆಚ್ಚು ಇಳುವರಿ ಪಡೆಯಬಹುದು ಎಂಬ ಭ್ರಮೆಯಿಂದ ರೈತರು ಹೊರ ಬರಬೇಕು. ರೈತರು ತಮ್ಮ ಜಮೀನಿನಲ್ಲಿ ದೊರಕುವ ತ್ಯಾಜ್ಯ ವಸ್ತುಗಳಿಂದ ಸಾವಯವ ಗೊಬ್ಬರವನ್ನು ತಯಾರು ಮಾಡಿ, ಜಮೀನಿನಲ್ಲಿ ಬಳಸಬೇಕು. ಜೈವಿಕ ಗೊಬ್ಬರಗಳ ಬಳಕೆಗೆ ಒತ್ತು ನೀಡಿ ಉತ್ತಮ ಇಳುವರಿ ಪಡೆಯಬಹುದು. ಇದರಿಂದ ರೈತರಿಗೆ ಹಣ ಉಳಿತಾಯದ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಬಹುದು ಎಂದರು.

ಸುಸ್ಥಿರ ಇಳುವರಿ ನಿರೀಕ್ಷೆ: ತಾಂತ್ರಿಕ ಸಮಾವೇಶದಲ್ಲಿ ಮಣ್ಣು ವಿಜ್ಞಾನಿ ಡಾ.ಬಿ.ಗಾಯತ್ರಿ ಮಾತನಾಡಿ, ರಸಗೊಬ್ಬರ ಒಂದನ್ನೇ ಬಳಸಿದಾಗ ಮಣ್ಣಿನ ಆಮ್ಲಿಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಭೂಮಿಗೆ ಸೇರಿಸಿದ ಗೊಬ್ಬರಗಳ ಸಮರ್ಪಕ ಬಳಕೆಯಾಗದೆ ಇಳುವರಿ ಕುಂಠಿತಗೊಳ್ಳುತ್ತದೆ. ರೈತರು ಜಮೀನಿನಲ್ಲಿ ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಬೆಳೆಗಳಿಗನುಗುಣವಾಗಿ ಬಳಕೆ ಮಾಡುವುದರಿಂದ ಮಣ್ಣಿನ ಫ‌ಲವತ್ತತೆ ಹೆಚ್ಚಾಗಿ ಉತ್ಪಾದಕತೆ ಹೆಚ್ಚುತ್ತದೆ. ಇದರಿಂದ ಉತ್ತಮ ಸುಸ್ಥಿರ ಇಳುವರಿ ನಿರೀಕ್ಷಿಸಬಹುದು ಎಂದರು.

Advertisement

ರೈತರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸೂಕ್ಷ್ಮನೀರಾವರಿ ಪದ್ಧತಿಗಳ ಅಳವಡಿಕೆ, ಮಳೆನೀರು ಕೊಯ್ಲ ಹಾಗೂ ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಕೆಮಿಕಲ್ಸ್‌ ಮತ್ತು ಫ‌ರ್ಟಿಲೈಸರ್ನ ಪ್ರದೀಪ್‌, ಸಹಾಯಕ ಕೃಷಿ ನಿರ್ದೇಶಕ ಎಸ್‌.ಶ್ರೀನಿವಾಸ್‌, ಕೃಷಿ ವಿಜ್ಞಾನಿ ತನ್ವೀರ್‌ ಅಹಮದ್‌, ಡಾ. ವಿನೋದ ಕೆ.ಎಸ್‌. ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರೈತ ಮತ್ತು ರೈತ ಮಹಿಳೆಯರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ರೈತರಿಗೆ ಮಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಅರಿವು: ಕಾರ್ಯಕ್ರಮದಲ್ಲಿ ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ವಿಶ್ವನಾಥ್‌ ಹಾಗೂ ಡಾ.ಸಿ.ಎನ್‌.ನಳಿನಾ, ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರೈತರಿಗೆ ಹಲವು ಉಪಯುಕ್ತ ಮಾಹಿತಿ ನೀಡಿದರು. ವಿಶೇಷವಾಗಿ ದ್ವಿದಳ ಧಾನ್ಯಗಳನ್ನು ಮುಖ್ಯ ಬೆಳೆಯಾಗಿ ಬೆಳೆದು ಮಿಶ್ರ ಬೆಳೆಯಾಗಿ ಬೆಳೆದು ಪೋಷಕಾಂಶಗಳನ್ನು ಒದಗಿಸಬೇಕು.

ದೀರ್ಘಾವದಿ ಬೆಳೆಗಳಲ್ಲಿ ಹೆಚ್ಚಿನ ಅಂತರವಿರುವುದರಿಂದ ಕೆಲವು ದ್ವಿದಳ ಧಾನ್ಯಗಳನ್ನು ಅಂತರ ಬೆಳೆಗಳಾಗಿ ಬೆಳೆಯಬೇಕು. ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ವಿವಿಧ ಮೂಲಗಳಾದ ರಸಾಯನಿಕ, ಸಾವಯವ ಮತ್ತು ಜೀವಾಣು ಗೊಬ್ಬರಗಳನ್ನು ಬಳಸಬೇಕು. ಇದರಿಂದ ಪೋಷಕಾಂಶದ ಪ್ರಮಾಣ ಮತ್ತು ಸಸ್ಯಗಳ ಬೇಡಿಕೆ ಪ್ರಮಾಣದ ಅಂತರವನ್ನು ಕಡಿಮೆ ಮಾಡಬಹುದು. ಇದರಿಂದ ಮಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next