Advertisement

ಮಣ್ಣು ಕುಸಿದು ಬಾವಿ ಕಾಮಗಾರಿ ನಿರತ ಓರ್ವ ಸಾವು

10:53 AM Dec 07, 2018 | Team Udayavani |

ಕುಂದಾಪುರ: ಬಾವಿ ಕೆಲಸದ ಸಂದರ್ಭ ಮೇಲ್ಭಾಗದ ಮಣ್ಣು ಕುಸಿದು ಅಯ್ಯಪ್ಪ ಮಾಲಾಧಾರಿ ಒಬ್ಬರು ಮೃತಪಟ್ಟು, ಮೂವರು ಪವಾಡ ಸದೃಶವಾಗಿ  ಪಾರಾದ ಘಟನೆ ಆಲೂರು ಗ್ರಾ.ಪಂ. ವ್ಯಾಪ್ತಿಯ ಹಳ್ಳಿ ಎಂಬಲ್ಲಿ ಗುರುವಾರ ಸಂಭವಿಸಿದೆ. 

Advertisement

ಆಲೂರು ಗ್ರಾಮದ ಬಸವನ ಜೆಡ್ಡು ನಿವಾಸಿ ಗೋಪಾಲ ಮೊಗವೀರ (32) ಮೃತಪಟ್ಟವರು. ಅಪಾಯದಿಂದ ಪಾರಾಗಿರುವ  ಮೂವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸತೀಶ್‌ ಹೆಗ್ಡೆ ಅವರ ತೋಟದ ಬೃಹತ್‌ ಬಾವಿಯಲ್ಲಿ ಹಲವು ದಿನಗಳಿಂದ  6-7 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಬಾವಿ ಕೆಲಸಕ್ಕೆಂದು ಅದರಲ್ಲಿದ್ದ ನೀರನ್ನು ಖಾಲಿ ಮಾಡಿ  ಮೇಲೆ ಹಾಕಲಾಗಿತ್ತು. ನೀರಿನ ತೇವಾಂಶಕ್ಕೆ ಬಾವಿಯ ಒಂದು ಬದಿಯ ಮಣ್ಣು ಕುಸಿದಿದೆ. ಆಗ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್‌, ಚಂದ್ರ ಪೂಜಾರಿ (40) ಹಾಗೂ ಶೇಖರ ಪೂಜಾರಿ (38) ಅವರ ಮೇಲೆ ಮಣ್ಣು ಬಿದ್ದಿದೆ.

ಮೇಲ್ಭಾಗದಲ್ಲಿ ನಿಂತಿದ್ದ ಮಾಲಕ ಸತೀಶ್‌ ಹೆಗ್ಡೆ ಕೂಡ ಕೆಳಕ್ಕೆ ಬಿದ್ದಿದ್ದಾರೆ. ಬಾಬು ದೇವಾಡಿಗ, ಗುತ್ತಿಗೆದಾರ ನಂಜಪ್ಪ ಪೂಜಾರಿ ಬಾವಿಯ ಮೇಲಿದ್ದರು. ಈ ಪೈಕಿ ಗೋಪಾಲ ಅವರು ಮಣ್ಣಿನಡಿ ಹುದುಗಿ ಹೋಗಿದ್ದರಿಂದ ಸಾವನ್ನಪ್ಪಿದ್ದಾರೆ. 

ಗಾಯಾಳುಗಳನ್ನು ಆ್ಯಂಬುಲೆನ್ಸ್‌ ಮೂಲಕ  ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಸರು, ಮಣ್ಣು-ಕಲ್ಲುಗಳ ನಡುವೆ ಗೋಪಾಲ  ಸಿಲುಕಿಕೊಂಡಿದ್ದು, ಸುಮಾರು 3 ಗಂಟೆಗೂ ಹೆಚ್ಚು ಕಾಲ 1 ಹಿಟಾಚಿ, 2 ಜೆಸಿಬಿ  ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಲಾಯಿತು.  

Advertisement

ಸ್ಫೋಟ ಕಾರಣವೇ ?
ಕಾಮಗಾರಿ ಸಂದರ್ಭದಲ್ಲಿ ಸ್ಫೋಟಕ ಬಳಿಸಿದ್ದಾರೆ ಮತ್ತು ದುರಂತಕ್ಕೆ ಇದುವೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಘಟನೆ ಸಂಭವಿಸಿದ ಸ್ಥಳದಲ್ಲಿ ಆಲೂರು ಸುತ್ತಮುತ್ತಲಿನ  ನೂರಾರು ಮಂದಿ ಜಮಾಯಿಸಿದ್ದರು.  ಗಂಗೊಳ್ಳಿ ಎಸ್‌ಐ ವಾಸಪ್ಪ ನಾಯ್ಕ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಬಡ ಕುಟುಂಬಕ್ಕೆ ಆಘಾತ
ಆಲೂರಿನ ಬಸವನಜೆಡ್ಡುವಿನ ದಿ| ರಾಮ ಮೊಗವೀರ ಹಾಗೂ ಮುತ್ತು ದಂಪತಿಯ 6 ಮಂದಿ ಮಕ್ಕಳಲ್ಲಿ (ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು) ಓರ್ವರಾಗಿದ್ದ ಗೋಪಾಲ ಅವಿವಾಹಿತರಾಗಿದ್ದು,  4-5 ವರ್ಷಗಳಿಂದ ಬಾವಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳ ಹಿಂದೆ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಬಡ ಕುಟುಂಬದ ಈ ಮನೆಯ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದರು. ಗೋಪಾಲ ಸಾತ್ವಿಕರಾಗಿದ್ದರು.


ಈಡೇರದ ಶಬರಿಮಲೆ ಯಾತ್ರೆ ಕನಸು 
ಗೋಪಾಲ ಅವರು ಡಿ. 5ರಂದು ಅಯ್ಯಪ್ಪ ಮಾಲೆ ಧರಿಸಿದ್ದರು. ಮಾಲೆ ಧರಿಸುವುದು ಅವರ ಹಲವು ವರ್ಷಗಳ ಬಯಕೆಯಾಗಿತ್ತು ಮತ್ತು ಇದೇ ಮೊದಲ ಬಾರಿಗೆ ಮಾಲೆ ಧರಿಸಿದ್ದರು. ಅವರ ಶಬರಿಮಲೆ ಯಾತ್ರೆ ಕನಸು ಈಡೇರಲೇ ಇಲ್ಲ  ಎಂದು ಸಂಬಂಧಿಕರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next