Advertisement
ಕಾರ್ಕಳ: ಮಣ್ಣಿನ ಫಲವತ್ತತೆಯನ್ನು ತಿಳಿಯಲು, ಮಣ್ಣನ್ನು ಪರೀಕ್ಷೆಗೊಳಪಡಿಸಿ ರೈತರಿಗೆ ಮಣ್ಣಿನ ಕುರಿತು ಶಿಕ್ಷಣ ನೀಡಿ ಮಣ್ಣು ಆರೋಗ್ಯ ಕಾರ್ಡ್ ನೀಡುವ ಯೋಜನೆಗೆ ಇದೀಗ ತಾಲೂಕಿನಲ್ಲಿ ವೇಗ ಸಿಕ್ಕಿದೆ. ಇದೊಂದು ಪರಿಣಾಮಕಾರಿ ಯೋಜನೆಯಾಗಿದ್ದು, ಕೃಷಿಕರಿಗೊಂದು ಮಣ್ಣಿನ ಫಲವತ್ತತೆಯ ಕುರಿತು ಪಾಠ ಹೇಳುವ ಕ್ರಿಯಾಶೀಲ ಯೋಜನೆ.
ಮಳೆಯಾಶ್ರಿತ ಪ್ರದೇಶದಲ್ಲಿ 10 ಹೆ. ಹಾಗೂ ನೀರಾವರಿ ಪ್ರದೇಶದಲ್ಲಿ 2.5 ಹೆ.ಗ್ರಿಡ್‌ನಲ್ಲಿ ಮಣ್ಣು ಮಾದರಿ ಸಂಗ್ರಹಣೆ ಹಾಗೂ ವಿಶ್ಲೇಷಣೆಗೊಳಪಡಿಸಿ ಗ್ರಿಡ್‌ನ ವ್ಯಾಪ್ತಿಯ ಎಲ್ಲಾ ರೈತರಿಗೆ ಮಣ್ಣು ಪರೀಕ್ಷೆ ಆಧಾರಿತ ಮಣ್ಣು ಪರೀಕ್ಷಾ ಚೀಟಿ ವಿತರಣೆ ಮಾಡಿ ಪೋಷಕಾಂಶಗಳ ಶಿಫಾರಸು ಮಾಡಿ ಬೆಳೆ ಆಧಾರಿತ ಪೋಷಕಾಂಶಗಳ ನಿರ್ವಹಣೆ ಹಾಗೂ ಅಭಿವೃದ್ಧಿ,ಮಣ್ಣು ಪರೀಕ್ಷೆ ಆಧಾರಿತ ವೈವಿಧ್ಯಮಯ ಬೆಳೆ ಪ್ರಾತ್ಯಕ್ಷಕೆಗಳ ಆಯೋಜನೆ ಮಾಡುವ ಮಣ್ಣು ಆರೋಗ್ಯ ಅಭಿಯಾನ ಯೋಜನೆ ತಾಲೂಕಿನಲ್ಲಿ ಆರಂಭಿಕ ಹಂತದಲ್ಲಿದ್ದರೂ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಗತ್ಯ ಕ್ರಮ
ಮಣ್ಣು ನೈಸರ್ಗಿಕ ಪರಿಸರದ ಒಂದು ಪ್ರಮುಖ ಅಂಶ. ಕೃಷಿ ಇಲಾಖೆಯು ಮಣ್ಣು ಅರೋಗ್ಯ ಅಭಿಯಾನದಡಿ 2016-17ನೇ ಸಾಲಿನ ಅಂತ್ಯಕ್ಕೆ ರಾಜ್ಯದ 78.32ಲಕ್ಷ ರೈತ ಹಿಡುವಳಿದಾರರಿಗೆ ಮಣ್ಣು ಪರೀಕ್ಷೆ ಆಧಾರಿತ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ, ಮಣ್ಣಿನಲ್ಲಿನ ನ್ಯೂನತೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮ ಕೈಗೊಂಡಿದೆ.
Related Articles
ದೇಶದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿ ಮಣ್ಣು ಮಾದರಿಗಳನ್ನು ಸಂಗ್ರಹಿಸಲು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕೆ ಕೇಂದ್ರದವರ ನೆರವಿನೊಂದಿಗೆ ಅಭಿವೃದ್ಧಿ ಮಾಡಿಸಿರುವ ಜಿಐಎಸ್-ಜಿಪಿಎಸ್ ಆಧಾರಿತ ‘ಸಾಯಿಲ್ ಕಲೆಕ್ಟರ್ ಅಪ್ಲಿಕೇಷನ್’ ಬಳಸಿ ಗ್ರಾಮಗಳ ಡಿಜಿಟೈಸ್ಡ್ ಕೆಡಸ್ಟ್ರಲ್ ನಕ್ಷೆಗಳಲ್ಲಿ ಗ್ರಿಡ್‌ಗಳನ್ನು ಗುರುತಿಸಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ.ಇಲಾಖೆಯ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುತ್ತಿದೆ.
Advertisement
ತಾಲೂಕಿನ ಪ್ರಗತಿ ಹೇಗಿದೆ?ಕಾರ್ಕಳದಲ್ಲಿ ಸುಮಾರು 30,073 ಹಾಗೂ ಅಜೆಕಾರು ವ್ಯಾಪ್ತಿಯಲ್ಲಿ 30,072ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಈ ವರ್ಷ ಹೊಂದಲಾಗಿದ್ದು, ಕಾರ್ಕಳ ವ್ಯಾಪ್ತಿಯಲ್ಲಿ ಈಗಾಗಲೇ ಆ.4 ರ ಮೊದಲು ಸುಮಾರು 770 ಹಾಗೂ ಅಜೆಕಾರು ವ್ಯಾಪ್ತಿಯಲ್ಲಿ 446 ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ.ಒಟ್ಟು 58,929 ಕಾರ್ಡ್‌ಗಳನ್ನು ವಿತರಿಸಲು ಬಾಕಿ ಇದ್ದು ಮುಂದಿನ ದಿನಗಳಲ್ಲಿ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಇಲಾಖೆ ಶ್ರಮ ವಹಿಸುತ್ತಿದೆ. ಏನು ಪ್ರಯೋಜನ?
ಮಣ್ಣು ಆರೋಗ್ಯ ಸುಧಾರಣೆ ಹಾಗೂ ಬೆಳೆ ಉತ್ಪಾದನಾ ವೆಚ್ಚದಲ್ಲಿ ಕಡಿತ ಸಮತೋಲಿತ ಪೋಷಕಾಂಶಗಳ ನಿರ್ವಹಣೆಯಿಂದ ಇಳುವರಿ ಹಾಗೂ ಆದಾಯದಲ್ಲಿ ನಿಶ್ಚಿತ ಹೆಚ್ಚಳ ಕಾಣಲು ಮಣ್ಣು ಪರೀಕ್ಷೆ ಸಹಾಯ ಮಾಡುತ್ತದೆ. ಇದೀಗ ಮಳೆಗಾಲ ಶುರುವಾಗಿರುವುದರಿಂದ ಮಣ್ಣು ಆರೋಗ್ಯ ಪರೀಕ್ಷೆ ಯೋಜನೆಗೆ ಅಷ್ಟೊಂದು ವೇಗ ಕೊಡಲಾಗುತ್ತಿಲ್ಲ. ಮಳೆಗಾಲ ಮುಗಿದ ಕೂಡಲೇ ಈ ಯೋಜನೆಯನ್ನು ತಾಲೂಕಿನಾದ್ಯಂತ ವೇಗವಾಗಿ ಅನುಷ್ಠಾನಗೊಳಿಸುವ ಉದ್ದೇಶ ಇಲಾಖೆಗಿದೆ. ಈಗಾಗಲೇ ಈ ಕುರಿತು ಮಾಹಿತಿಗಳನ್ನು ರೈತರಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ನೀಡಲಾಗುವುದು.
– ಜಯರಾಜ್ ಪ್ರಕಾಶ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕಾರ್ಕಳ – ಪ್ರಸಾದ್ ಶೆಣೈ ಕಾರ್ಕಳ