Advertisement
ಪಡಿತರ ಧಾನ್ಯಗಳ ಗುಣಮುಟ್ಟದ ಕೊರತೆ, ಅಕ್ರಮ ದಾಸ್ತಾನು ಹಾಗೂ ವಿತರಣೆ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು, ಇಲಾಖೆ ಕಾರ್ಯದರ್ಶಿ ಸಾವಿತ್ರಿ, ಆಯುಕ್ತ ಕುಮಾರ್ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳ ಜತೆಗೆ ಯಶವಂತಪುರದ ಎರಡು ಗೋದಾಮುಗಳಿಗೆ ಶನಿವಾರ ಧಿಡೀರ್ ಭೇಟಿ ನೀಡಿದ್ದರು.
Related Articles
Advertisement
ಹಾಸ್ಟಲ್‌ಗೆ ವಿತರಿಸಬೇಕಿದ್ದ ಗೋಧಿ ಪತ್ತೆ: “ವಿಜಯನಗರ-2′ ಗೋದಾಮಿಗೆ ಹೋದಾಗ ಅಲ್ಲಿ ಪರಿಶಿಷ್ಟ ಹಾಸ್ಟಲ್‌ಗೆ ವಿತರಿಸಬೇಕಿದ್ದ 103 ಕ್ವಿಂಟಾಲ್ ಹಳೇ ಗೋಧಿ ದಾಸ್ತಾನು ಪತ್ತೆಯಾಯಿತು. ಒಂದು ವರ್ಷದಿಂದ ದಾಸ್ತಾನು ಗೋದಾಮಿನಲ್ಲೇ ಇದ್ದಿದ್ದರಿಂದ ಆ ಚೀಲಗಳು ಸಂಪೂರ್ಣ ಧೂಳು ಹಿಡಿದಿದ್ದವು.
ಚೀಲದೊಳಗಿನ ಗೋಧಿಯನ್ನು ಹುಳ ತಿನ್ನುತ್ತಿದ್ದವು. ಆ ಗೋಧಿಯನ್ನು ಸಚಿವ ಕೈಯಲ್ಲಿ ಹಿಡಿದು ಅಧಿಕಾರಿಗಳಿಗೆ ತೋರಿಸಿ, ವಿದ್ಯಾರ್ಥಿಗಳಿಗೆ ಕೊಡಬೇಕಾದ ಆಹಾರವನ್ನು ಹುಳು ಹಿಡಿಸಿ ಹಾಳು ಮಾಡಿದ್ದೀರಿ. ಇದುವೇನಾ ನಿಮ್ಮ ನಿರ್ವಹಣೆ? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಆ ಗೋಧಿಯನ್ನು ವಲಯ ಆಹಾರ ಅಧಿಕಾರಿಗೆ ನೀಡಿ ಗುಣಮಟ್ಟ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದರು.
ಬಳಿಕ ವಲಯ ಅಧಿಕಾರಿಗಳನ್ನು ಹಾಗೂ ಗೋದಾಮು ವ್ಯವಸ್ಥಾಪಕರುಗಳಿಗೆ ಗೋದಾಮು ಸ್ವತ್ಛತೆ ಕಾಪಾಡುವಂತೆ ಹಾಗೂ ಇಲಿ ಕಾಟಕ್ಕೆ ಅಗತ್ಯ ಔಷಧ ಸಿಂಪಡಿಸುವಂತೆ ಸೂಚಿಸಿದರು. ಮುಂದಿನ ಬಾರಿ ಭೇಟಿ ನೀಡಿದಾಗ ಇದೇ ರೀತಿ ಅವ್ಯವಸ್ಥೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಗರದ ಮಹಾಲಕ್ಷ್ಮೀ ಬಡಾವಣೆಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ಸಮರ್ಪಕ ವಿತರಣೆ, ಬಿಪಿಎಲ… ಕಾರ್ಡುಗಳ ಹಂಚಿಕೆ, ಧಾನ್ಯಗಳ ಗುಣಮಟ್ಟದ ಬಗ್ಗೆ ಪರಿಶೀಲನೆಯನ್ನು ಸಚಿವ ಜಮೀರ್ ಅಹಮದ್ ಖಾನ್ ನಡೆಸಿದರು. ಕೆಲ ಗ್ರಾಹಕರಿಂದ ಪರಿತರ ವಿತರಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದರು.
ಹಳೇ ಸ್ಟಾಕ್ ಇರಿಸುವಂತಿಲ್ಲ: ಪಡಿತರ ಧಾನ್ಯಗಳನ್ನು ಸಂಗ್ರಹಿಸುವ ಯಾವುದೇ ಗೋದಾಮುಗಳಲ್ಲಿ ಹಳೇ ದಸ್ತಾನು ಇರಿಸುವಂತಿಲ್ಲ. ಈ ಕುರಿತು ಸಂಬಂಧಪಟ್ಟ ಉಪನಿರ್ದೇಶಕರು ಹಾಗೂ ಆಹಾರ ಅಧಿಕಾರಿಗಳು ಪ್ರತಿ 10 ದಿನಳಿಗೊಮ್ಮೆ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು.
ತಮ್ಮ ವ್ಯಾಪ್ತಿಯ ಪಡಿತರ ವಿತರಣಾ ಕೇಂದ್ರಗಳಿಗೆ ಅಗತ್ಯವಿರುವಷ್ಟೇ ಪಡಿತರ ತರಿಸಿಕೊಳ್ಳಬೇಕು. ಹೆಚ್ಚುವರಿಯಾದರೆ ಆ ಕುರಿತು ಇಲಾಖೆ ನಿರ್ದೇಶಕರಿಗೆ ಕಡ್ಡಾಯವಾಗಿ ಪತ್ರ ಬರೆದು ತಿಳಿಸಬೇಕು. ಆಗ ಹೆಚ್ಚುವರಿ ದಸ್ತಾನನ್ನು ಕೊರತೆ ಇರುವ ವಲಯಗಳಿಗೆ ಹಂಚಿಕೆ ಮಾಡಲು ಸಹಾಯವಾಗುತ್ತದೆ ಎಂದು ಸಚಿವರು ಗೋದಾಮು ಉಸ್ತುವಾರಿ ಅಧಿಕಾರಿಗಳಿಗೆ ತಿಳಿಸಿದರು.
ಮಣ್ಣುಪಾಲಾಗಿರುವ ಅನ್ನಭಾಗ್ಯ ಉಪ್ಪು: ಅನ್ನಭಾಗ್ಯ ಯೋಜನೆಯಡಿ ಈ ಹಿಂದೆ ಉಪ್ಪು ವಿತರಿಸಲಾಗುತ್ತಿತ್ತು. ಆದರೆ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾದ ನಂತರ ಉಪ್ಪು ವಿತರಣೆ ನಿಲ್ಲಿಸಲಾಗಿತ್ತು. ಆದರೆ, ಆ ವೇಳೆ ಬಂದಿದ್ದ ಉಪ್ಪಿನ ದಾಸ್ತಾನಿನ ಪೈಕಿ 180ರಿಂದ 200 ಕೆ.ಜಿ ಉಪ್ಪು ಗೋದಾಮಿನಲ್ಲೇ ಉಳಿದಿರುವುದು ಪರಿಶೀಲನೆ ವೇಳೆ ಪತ್ತೆಯಾಯಿತು.
ಈ ಕುರಿತು ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಈಗಾಗಲೇ ಹಳೇ ಉಪ್ಪು ತೆಗೆದುಕೊಂಡು ಹೋಗಲು ಟೆಂಡರ್ ಆಗಿದೆ. ಆದರೆ ಟೆಂಡರ್ ಪಡೆದವರು ಬಾರದ ಹಿನ್ನೆಲೆ ಉಪ್ಪು ಇಲ್ಲೇ ಉಳಿದಿದೆ ಎಂದರು. ಇದೇ ರೀತಿ ರಾಜ್ಯದ ಎಲ್ಲಾ ಪಡಿತರ ಗೋದಾಮುಗಳಲ್ಲಿ ಉಳಿದಿರುವ, ಹಳೆಯ ಸ್ಟಾಕ್ ಬಗ್ಗೆ ಮಾಹಿತಿ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪಡಿತರ ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಪಡಿತರ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಬೆಂಗಳೂರಿನ ಗೋದಾಮುಗಳಿಗೆ ಭೇಟಿ ನೀಡಿತ್ತಿದ್ದು, ಬೆಳಗಾವಿ ಅಧಿವೇಶನದ ನಂತರ ರಾಜ್ಯಾದ್ಯಂತ ಪರಿಶೀಲನೆ ನಡೆಸಲಾಗುವುದು. ಯಶವಂತಪುರದ ವಿಜಯನಗರ ಗೋದಾಮು ಅವ್ಯವಸ್ಥೆ ಸಂಬಂಧ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚಿಸಿದ್ದು, ತಪ್ಪು ಸಾಬೀತಾದರೆ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು.-ಜಮೀರ್ ಅಹಮದ್ ಖಾನ್