Advertisement

ಸಾಹೋರೆ ಸುಯೋಧನ…

11:10 AM Jan 05, 2018 | |

ನೂರಾರು ಕುದುರೆಗಳು, ಅತ್ತಿಂದಿತ್ತ ಓಡಾಡುವ ಸೈನಿಕರು, ಕಹಳೆ ಹಿಡಿದು ಊದುವ ದ್ವಾರಪಾಲಕರು, ಹೂ ರಾಶಿ ಹಿಡಿದು ನಲಿದಾಡುವ ಲಲನೆಯರು, ಆಸ್ಥಾನ ನರ್ತಕಿಯರು, ಕಲಾವಿದರು, ಅಲ್ಲೊಂದು ಗಾಂಭೀರ್ಯ ನಡೆಯ ಆನೆ, ಆ ಆನೆ ಮೇಲೊಬ್ಬ ರಾಜಾಧಿರಾಜ, ಆ ರಾಜನ ಸುತ್ತ ಮತ್ತದೇ ಸೈನ್ಯದ ಉತ್ಸಾಹ … 

Advertisement

– ಇದೆಲ್ಲಾ ಕಂಡು ಬಂದದ್ದು “ಕುರುಕ್ಷೇತ್ರ’ದಲ್ಲಿ! ಅಲ್ಲಲ್ಲ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರದ ಹಾಡೊಂದರ ಅಪರೂಪದ ದೃಶ್ಯವದು. ಅಲ್ಲಿ ರಾಜನೊಬ್ಬನ ದರ್ಬಾರನ್ನು ಕಣ್ಣಾರೆ ಕಂಡ ಅನುಭವ. ಹಿಂದೆಂದೂ ಕಾಣದ ಸುಯೋಧನನ ವೈಭವ. ಅದೇ ಮೊದಲ ಬಾರಿಗೆ ಚಿತ್ರತಂಡ ದೂರದ ಹೈದರಾಬಾದ್‌ಗೆ ಪತ್ರಕರ್ತರನ್ನು ಕರೆದೊಯ್ದಿತ್ತು. ಅಂದು ಮಟ ಮಟ ಮಧ್ಯಾಹ್ನ. ನೆತ್ತಿ ಸುಡುವಂತಹ ಬಿಸಿಲು. ಆ ಬಿಸಿಲ ನಡುವೆ ವಿಶಾಲವಾದ ಮೈದಾನ. “ಸಾಹೋರೆ ಸಾಹೋ, ಆಜಾನುಬಾಹೋ ರಾಜಾಧಿರಾಜ ಸುಯೋಧನ’ ಎಂಬ ಹಾಡು ಕೇಳಿಬರುತ್ತಿತ್ತು. ಆ ಹಾಡಿಗೆ ನೂರಾರು ಕುದುರೆಗಳೊಂದಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕುತ್ತಿದ್ದರು. ಆನೆ ಮೇಲೆ ದುರ್ಯೋಧನ ಪಾತ್ರಧಾರಿ ದರ್ಶನ್‌ ಕುಳಿತು ಎಂಟ್ರಿಕೊಡುತ್ತಿದ್ದರು. ಆ ದೃಶ್ಯ ಓಕೆ ಆಗುತ್ತಿದ್ದಂತೆಯೇ ನೃತ್ಯ ನಿರ್ದೇಶಕ ಗಣೇಶ್‌ ಬ್ರೇಕ್‌ ಕೊಟ್ಟರು. ಚಿತ್ರತಂಡ ಮಾತಿಗೆ ಕುಳಿತುಕೊಂಡಿತು.

ಮೊದಲು ಮಾತು ಶುರುಮಾಡಿದ್ದು ನಿರ್ಮಾಪಕ ಮುನಿರತ್ನ. “ಕನ್ನಡದಲ್ಲಿ “ಮಯೂರ’, “ಭಕ್ತ ಪ್ರಹ್ಲಾದ’, “ಹುಲಿಯ ಹಾಲಿನ ಮೇವು’ ಸೇರಿದಂತೆ ಹಲವು ಪೌರಾಣಿಕ, ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇವೆ. 75 ವರ್ಷಗಳ ಇತಿಹಾಸದಲ್ಲಿ ಮಹಾಭಾರತದ “ಕುರುಕ್ಷೇತ್ರ’ ಸಂಬಂಧಿಸಿದಂತೆ ಚಿತ್ರ ಬಂದಿರಲಿಲ್ಲ. ಮೊದಲ ಸಲ ಮಾಡಿದ್ದೇವೆ. ಪರಭಾಷಿಗರು ಇತ್ತ ಕಡೆ ನೋಡುವಂತಹ ಚಿತ್ರ ಇದಾಗಲಿದೆ. ನಾವು ಯಾರಿಗೇನು ಕಮ್ಮಿ ಇಲ್ಲವೆಂಬಂತೆ ಪೌರಾಣಿಕ ಚಿತ್ರ ಮಾಡಿದ್ದೇವೆ. ಕನ್ನಡಿಗರೇ ಇರಬೇಕು ಎಂಬ ಕಾರಣಕ್ಕೆ ನಮ್ಮವರನ್ನೇ ಆಯ್ಕೆ ಮಾಡಿ “ಕುರುಕ್ಷೇತ್ರ’ ಮಾಡಿದ್ದೇನೆ. ಇಂತಹ ಚಿತ್ರಗಳಿಗೆ ತಾಂತ್ರಿಕ ಅಂಶ ಮುಖ್ಯ. ಹಾಗಾಗಿ ಚೆನ್ನೈ, ಹೈದರಾಬಾದ್‌, ಬೆಂಗಳೂರು, ಮುಂಬೈನ ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಬೇರೆ ಭಾಷೆಯ ನಿರ್ದೇಶಕ, ನಿರ್ಮಾಪಕರು ಸೆಟ್‌ಗೆ ಬಂದಿದ್ದರು. ಅವರೆಲ್ಲ ಇಂತಹ ಚಿತ್ರ ಮಾಡೋಕೆ ಸಾಧ್ಯನಾ, ವ್ಯಾಪಾರ ಆಗುತ್ತಾ ಅಂದಿದ್ದರು. ನಾವು ಬೆಳೆದಿದ್ದೇವೆ ಅಂತ ತೋರಿಸೋಕೆ “ಕುರಕ್ಷೇತ್ರ’ ಸಾಕ್ಷಿ’ ಅಂದರು ಮುನಿರತ್ನ.

“ಮಹಾಭಾರತದಲ್ಲಿ ಕೃಷ್ಣ, ಬೃಹನ್ನಳೆ, ಅರ್ಜುನ, ಕರ್ಣ, ಅಭಿಮನ್ಯು ಕುರಿತಾಗಿಯೂ ಚಿತ್ರ ಮಾಡಬಹುದಿತ್ತು. ಆದರೆ, ದುಯೋರ್ಧನ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಕಾರಣವಿದೆ. ಇಲ್ಲಿ ದುರ್ಯೋಧನ, ಭೀಮನ ಗದಾಯುದ್ಧ ಪ್ರಸಂಗ ಹೈಲೈಟ್‌. ನಾನು ಏನೋ ಮಾಡೋಕೆ ಈ ಚಿತ್ರ ಮಾಡಿಲ್ಲ. ಒಂದು ದಾಖಲೆಯಾಗಿ ಉಳಿಯಬೇಕು, ಬೇರೆಯವರಿಗೂ ನಾವು ಇದನ್ನೆಲ್ಲಾ ಮಾಡಬಲ್ಲೆವು ಅಂತ ಗೊತ್ತಾಗಬೇಕು ಅದಕ್ಕಾಗಿ ಮಾಡಿದ್ದೇವೆ. ಇದು 2ಡಿ, 3ಡಿನಲ್ಲಿ ತಯಾರಾಗುತ್ತಿದೆ. ಜನವರಿ 5 ಕ್ಕೆ ಚಿತ್ರೀಕರಣ ಮುಗಿಸಿ, ಫೆಬ್ರವರಿ 10ಕ್ಕೆ ಚಿತ್ರದ ಮೊದಲ ಪ್ರತಿ ಪಡೆದು, ಮಾರ್ಚ್‌ 2 ಕ್ಕೆ ಸೆನ್ಸಾರ್‌ಗೆ ಕಳಿಸಿ, ಮಾ.9 ರಂದು ಬಿಡುಗಡೆ ಮಾಡುವ ಯೋಚನೆ ಇದೆ. ಇಂತಹ ಚಿತ್ರಕ್ಕೆ ಹಣ ಇದ್ದರೆ ಸಾಲದು, ಎಲ್ಲರ ಸಹಕಾರ, ಪ್ರೋತ್ಸಾಹ ಬೇಕು. ಎಲ್ಲಾ ಕಲಾವಿದರು, ತಂತ್ರಜ್ಞರ ಸಹಕಾರದಿಂದ ಯಶಸ್ವಿಯಾಗಿ ಚಿತ್ರ ಮಾಡಲು ಸಾಧ್ಯವಾಗಿದೆ’ ಅಂದರು ಮುನಿರತ್ನ.

ನಿರ್ದೇಶಕ ನಾಗಣ್ಣ ಅವರಿಗೆ ಈ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟವಂತೆ. ಇಲ್ಲಿ ನಾನೊಬ್ಬನೇ ಅಲ್ಲ, ಎಲ್ಲರೂ ಸೇರಿದ್ದರಿಂದ ಚಿತ್ರವಾಗಿದೆ. ಎಲ್ಲರೂ ಶ್ರದ್ಧೆ, ಶ್ರಮವಹಿಸಿ ಕೆಲಸ ಮಾಡಿದ್ದಾರೆ. ದರ್ಶನ್‌ ಸೇರಿದಂತೆ ಎಲ್ಲರ ಸಹಕಾರ, ಪ್ರೋತ್ಸಾಹ ಬಗ್ಗೆ ಹೇಳಿಕೊಂಡರು ನಾಗಣ್ಣ.

Advertisement

ಭೀಮನ ಪಾತ್ರ ನಿರ್ವಹಿಸಿದ ದಾನಿಶ್‌ಅಖ್ತರ್‌ಗೆ ಇದು ಲೈಫ್ಟೈಮ್‌ ಸಿನಿಮಾವಂತೆ. ಇಂಗ್ಲೀಷ್‌ನಲ್ಲಿ ಡೈಲಾಗ್‌ ಬರೆದುಕೊಂಡು ಹೇಳಿರುವ ದಾನಿಶ್‌ಗೆ, ದರ್ಶನ್‌ ಜತೆ ಕೆಲಸ ಮಾಡಿದ್ದು ಮರೆಯದ ಅನುಭವವಂತೆ. ಅವರ ಜತೆ ಗದಾಯುದ್ಧ ದೃಶ್ಯದಲ್ಲಿ ನಟಿಸುವಾಗ ಭಯ ಆಗುತ್ತಿತ್ತಂತೆ. ಪ್ರತಿಯೊಂದನ್ನು ದರ್ಶನ್‌ ಅವರು ಗೈಡ್‌ ಮಾಡುತ್ತಿದ್ದನ್ನು ಮೆಲುಕುಹಾಕಿದರು ದಾನಿಶ್‌.

ಮೇಘನಾರಾಜ್‌ ಇಲ್ಲಿ ಭಾನುಮತಿ ಪಾತ್ರ ನಿರ್ವಹಿಸಿದ್ದಾರೆ. “ನನಗೆ ಇಂತಹ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತು. ಅದು ಈಡೇರಿದೆ. ದರ್ಶನ್‌ ಜೊತೆ ಮೊದಲ ಚಿತ್ರವಿದು. ನನ್ನ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು ಅಂದುಕೊಳ್ಳುತ್ತೇನೆ’ ಅಂದರು ಅವರು. ಛಾಯಾಗ್ರಾಹಕ ಜಯನ್‌ ವಿನ್ಸೆಂಟ್‌ 30 ವರ್ಷಗಳ ಬಳಿಕ ಕನ್ನಡಕ್ಕೆ ಬಂದಿದ್ದಾರೆ. 1988 ರಲ್ಲಿ “ನ್ಯೂಡೆಲ್ಲಿ’ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದರು. ಈ ಚಿತ್ರದಲ್ಲಿ ಪ್ರತಿ ದಿನ ಆರೇಳು ಕ್ಯಾಮೆರಾ ಕೆಲಸ ಮಾಡುತ್ತಿದ್ದವಂತೆ. ಹೊಸ ಬಗೆಯಕ್ಯಾಮೆರಾಗಳು ಇಲ್ಲಿ ಬಳಕೆ ಮಾಡಿದ್ದಾಗಿ ಹೇಳಿಕೊಂಡರು ಜಯನ್‌ ವಿನ್ಸೆಂಟ್‌.

ಚೇತನ್‌ ಇಲ್ಲಿ ದುಶ್ಯಾಸನ ಪಾತ್ರ ಮಾಡಿದ್ದಾರೆ. ಇಂತಹ ಚಿತ್ರ ಮಾಡಿದ್ದು ಖುಷಿಯಾಗಿದೆ ಅಂತ ಹೇಳಿದರು ಚೇತನ್‌. ಕಲಾ ನಿರ್ದೇಶಕ ಕಿರಣ್‌, ಜಯಶ್ರೀದೇವಿ, ಗ್ರಾಫಿಕ್ಸ್‌ ಮುಖ್ಯಸ್ಥ ದುರ್ಗಪ್ರಸಾದ್‌ ಇತರರು “ಕುರುಕ್ಷೇತ್ರ’ ಕುರಿತು ಮಾತಾಡಿದರು.

ವಿಭ

Advertisement

Udayavani is now on Telegram. Click here to join our channel and stay updated with the latest news.

Next