Advertisement

ಪೋಡಿ ಮುಕ್ತ ಅಭಿಯಾನಕ್ಕೆ ಸಾಫ್ಟ್ ವೇರ್‌ ಬಲ

03:24 PM Jul 05, 2023 | Team Udayavani |

ಚಿಕ್ಕಬಳ್ಳಾಪುರ: ಬಹು ಮಾಲೀಕತ್ವದಲ್ಲಿ ಇರುವ ಪಹಣಿಗಳನ್ನು ಏಕ ಮಾಲೀಕತ್ವಕ್ಕೆ ವರ್ಗಾಯಿಸುವ ಮಹತ್ವಕಾಂಕ್ಷಿ ಪೋಡಿ ಇಂಡೀಕರಣಕ್ಕೆ ರಾಜ್ಯದ ಭೂ ಮಾಪನ ಇಲಾಖೆ ಹೈಟೆಕ್‌ ಸ್ಪರ್ಶ ನೀಡಿದ್ದು, ಪೋಡಿ ಇಂಡೀಕರಣಕ್ಕೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿ ಹೊಸ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದೆ.

Advertisement

ಹೀಗಾಗಿ ಇನ್ನು ಮುಂದೆ ಸರ್ಕಾರಿ ಜಮೀನುಗಳಲ್ಲಿ ಮಂಜೂರಾದ ಜಮೀನುಗಳ ಪೋಡಿ ಇಂಡೀಕರಣಕ್ಕೆ ಭೂ ಮಾಪನ ಇಲಾಖೆಗೆ ಅರ್ಜಿ ಸಲ್ಲಿಸಲು ಸುತ್ತಾಡುವುದರ ಬದಲು ಸಾರ್ವಜನಿಕರು ಆನ್‌ ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ ತ್ವರಿತ ಸೇವೆ ಪಡೆಯಬಹುದಾಗಿದೆ.

ಜನಸ್ನೇಹಿ: ಇತ್ತೀಚೆಗೆ ಜಮೀನುಗಳ ಪೋಡಿ ಇಂಡೀಕರಣ ಮಾಡಲು ಭೂಮಿ ತಂತ್ರಾಂಶದಲ್ಲಿ ಅವಕಾಶ ಕೋರಿ ಹಲವಾರು ಪತ್ರಗಳು ಸ್ವೀಕೃತವಾಗಿದ್ದರ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ ಎಚ್ಚೆತ್ತುಕೊಂಡು ಸರ್ಕಾರಿ ಜಮೀನಿನಲ್ಲಿ ಮಂಜೂರಾದ ಜಮೀನುಗಳ ಪೋಡಿ ಇಂಡೀಕರಣ ಮಾಡಲು ನೂತನ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಮಾಡಿ ರೈತರು, ಸಾರ್ವಜನಿಕರು ಅರ್ಜಿ ಸಲ್ಲಿಕೆಗೆ ಆನ್‌ಲೈನ್‌ ಮೂಲಕವೇ ಅವಕಾಶ ಕಲ್ಪಿಸಿ ಭೂ ಮಾಪನ ಇಲಾಖೆ ಆಯುಕ್ತರು ಮಹತ್ವದ ಆದೇಶ ಹೊರಡಿಸಿದಾರೆ.

ಮಾಹಿತಿ ನೀಡಿ: ಸರ್ಕಾರಿ ಜಮೀನಿ ನಲ್ಲಿ ಮಂಜೂರಾದ ಜಮೀನುಗಳಿಗೆ ಸಂಬಂಧಿಸಿದಂತೆ ನಿಯಮಾನಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು ಸದರಿ ಕಾರ್ಯ ವಿಧಾನ ಅನುಸರಿಸಿ ಕಾನೂನು ರೀತ್ಯಾ ಪೋಡಿ ಇಂಡೀಕರಣ ಮಾಡುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಡಿಡಿಎಲ್‌ಆರ್‌ (ಜಿಲ್ಲಾ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು), ಡಿಎಲ್‌ ಆರ್‌, ಉಪ ವಿಭಾಗಾಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳಿಗೆ ಸೂಚಿಸುವಂತೆ ಹಾಗೂ ಸದರಿ ತಂತ್ರಾಂಶದ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶ ಇರುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ, ರಾಜ್ಯದ ಎಲ್ಲಾ ಜಿಲ್ಲಾ ಭೂಮಿ ಸಮಾಲೋಚಕರಿಗೆ ಸೂಚಿಸಿದ್ದಾರೆ.

ತಂತ್ರಾಂಶ ಕಾರ್ಯನಿರ್ವಹಿಸುವುದು ಹೇಗೆ?: ಅರ್ಜಿದಾರರು ತಮ್ಮ ಮೊಬೈಲ್‌ ನಂಬರ್‌ ದಾಖಲಿಸಿ ಓಟಿಪಿ ಮೂಲಕ ಲಾಗಿನ್‌ ಆಗಬೇಕು, ತಂತ್ರಾಂಶದಲ್ಲಿ ಲಾಗಿನ್‌ ಆದ ನಂತರ ಅರ್ಜಿದಾರ ತನ್ನ ಆಧಾರ್‌ ಇಕೆವೈಸಿ ನೀಡಬೇಕು, ನಂತರ ಮೂಲ ಸರ್ವೆ ನಂಬರ್‌ನ್ನು ಭೂಮಿಯಿಂದ ಆಯ್ಕೆ ಮಾಡಬೇಕು. ಪೋಡಿ ಪಕ್ರಿಯೆಗೆ ಒಳಪಡುವ ಹಕ್ಕುದಾರರನ್ನು ಆಯ್ಕೆ ಮಾಡಬೇಕು. ಈ ಹಂತದಲ್ಲಿ ಆಧಾರ್‌ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರು ಹೊಂದಾಣಿಕೆ ಆಗಬೇಕು, ನಂತರ ಹೊಸ ಸರ್ವೆ ನಂಬರ್‌ ದಾಖಲಿಸಬೇಕು, ಡಿಡಿಎಲ್‌ಆರ್‌ ಆದೇಶ ಸಂಖ್ಯೆ ಮತ್ತು ದಿನಾಂಕ ದಾಖಲಿಸಬೇಕು, ಹೊಸ ಸರ್ವೆ ನಂಬರ್‌ಗೆ ಸಂಬಂಧಿಸಿದ ಟಿಪ್ಪಣಿ ಹಾಗೂ ಪಕ್ಕಾ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು, 2018 ಜನವರಿ 1 ರೊಳಗೆ ಡಿಡಿಎಲ್‌ಆರ್‌ ಹೊರಡಿಸಿರುವ ಆದೇಶಗಳಿಗೆ ಕಡ್ಡಾಯವಾಗಿ ಹೊಸ ಸರ್ವೆ ನಂಬರ್‌ ವಿವರ ಹಾಗೂ ಆಕಾರ ಬಂದ್‌ ಡೇಟಾಬೇಸ್‌ನಲ್ಲಿ ಲಭ್ಯವಿರಬೇಕು. ನಂತರ ಅರ್ಜಿಯನ್ನು ಉಳಿಸಿ ಮುಂದಿನ ಹಂತಕ್ಕೆ ಸಲ್ಲಿಸಬೇಕು, ನಂತರ ಅರ್ಜಿಯ ಮೋಜಿಣಿ ತಂತ್ರಾಂಶದಲ್ಲಿ ತಾಲೂಕು ಅಪರೇಟರ್‌ ಲಾಗಿನ್‌ನಲ್ಲಿ ಲಭ್ಯವಿರುತ್ತದೆ. ತಾಲೂಕು ಅಪರೇಟರ್‌ ಅನುಮೋದನೆ ನಂತರ ಸೂಪರ್‌ವೈಸರ್‌ ಲಾಗಿನ್‌ನಲ್ಲಿ ಲಭ್ಯವಿರುತ್ತದೆ. ಸೂಪರ್‌ ವೈಸರ್‌ ಅನುಮೋದನೆ ಬಳಿಕ ಎಡಿಎಲ್‌ಆರ್‌ ಅನುಮೋದನೆ ಕೊಟ್ಟು ನಂತರ ಡಿಡಿಎಲ್‌ಆರ್‌ ಅನುಮೋದನೆಯೊಂದಿಗೆ ಅರ್ಜಿಯು ಪಹಣಿ ಇಂಡೀಕರಣಕ್ಕಾಗಿ ಭೂಮಿಗೆ ರವಾನೆ ಆಗಲಿದೆ.

Advertisement

ಏಕ ಮಾಲೀಕತ್ವದ ಪಹಣಿ ಇದ್ದರೆ ಅನುಕೂಲ: ಈ ಹಿಂದೆ ಜಿಲ್ಲೆಯಲ್ಲಿ ಪೋಡಿ ಮುಕ್ತ ಅಭಿಯಾನವನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲಾಡಳಿತ ನಾಲ್ಕೈದು ವರ್ಷಗಳ ಹಿಂದೆ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಗುಡಿಬಂಡೆಯನ್ನು ರಾಜ್ಯದಲ್ಲಿ ಮೊದಲ ಪೋಡಿ ಮುಕ್ತ ತಾಲೂಕು ಎಂಬ ಘೋಷಣೆ ಕೂಡ ಹೊರ ಬಿದ್ದಿತ್ತು. ಆದರೆ, ಚುನಾವಣೆ ಮತ್ತಿತರ ಕಾರಣಗಳಿಂದ ಜಿಲ್ಲಾಡಳಿತ ಪೋಡಿ ಮುಕ್ತ ಅಭಿಯಾನಕ್ಕೆ ಅಷ್ಟೊಂದು ಕಾಳಜಿ ವಹಿಸಿಲ್ಲ. ಜಿಲ್ಲೆಯಲ್ಲಿ ದಶಕಗಳಿಂದಲೂ ಬಹು ಮಾಲೀಕತ್ವದ ಪಹಣಿಗಳೇ ಅಧಿಕವಾಗಿದ್ದು, ಇದರಿಂದ ಪೋಡಿ ಇಂಡೀಕರಣ ಸಾಧ್ಯವಾಗದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಗಂಗಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರದ ಸಾಲ, ಸೌಲಭ್ಯಗಳು ರೈತರಿಗೆ ದಕ್ಕುತ್ತಿಲ್ಲ. ಪೋಡಿ ಇಂಡೀಕರಣ ಆಗಿ ರೈತರಿಗೆ ಏಕ ಮಾಲೀಕತ್ವದ ಪಹಣಿ ಇದ್ದರೆ ರೈತರಿಗೆ ಸಾಕಷ್ಟು ನೆರವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ? : ಸಾರ್ವಜನಿಕರು ತಮ್ಮ ಪೋಡಿ ಇಂಡೀಕರಣಕ್ಕೆ ಅರ್ಜಿಯನ್ನು ತಂತ್ರಾಂಶದ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಅಥವಾ ಸಾರ್ವಜನಿಕರು https://lamdrecords.karnataka.gov.in/service145/  ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಭೂ ಮಾಪನ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಪೋಡಿ ಇಂಡೀಕರಣಕ್ಕೆ ಹೊಸ ಸಾಫ್ಟ್ವೇರ್‌ ಸಿದ್ಧಪಡಿಸಲಾಗಿದೆ. ಈ ಹಿಂದೆ ಪೋಡಿ ಆಗಿ ಇಂಡೀಕರಣ ಆಗದೇ ಇದ್ದ ಪಕ್ಷದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಸಲ್ಲಿಸಲು ಹೊಸದಾಗಿ ತಂತ್ರಾಂಶವನ್ನು ಅಭಿವೃದ್ದಿಗೊಳಿಸಿದೆ. ಅದರ ಸಾಧಕ ಭಾದಕಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. – ಸಂಜಯ್‌, ಉಪನಿರ್ದೇಶಕರು, ಜಿಲ್ಲಾ ಭೂದಾಖಲೆಗಳ ಇಲಾಖೆ (ಡಿಡಿಎಲ್‌ಆರ್‌) ಚಿಕ್ಕಬಳ್ಳಾಪುರ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next