Advertisement

ಸಾಫ್ಟ್ವೇರ್‌ ಟು ಸಿನಿಮಾ: ಸಿಹಿಕಹಿ ಪುಷ್ಕರ್‌

12:13 PM Oct 06, 2017 | Team Udayavani |

ಕೇವಲ ಒಂದು ವರ್ಷದ ಹಿಂದೆ ಪುಷ್ಕರ್‌ ಫಿಲಂಸ್‌ನ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿರಲಿಲ್ಲ. ಯಾವಾಗ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಯಶಸ್ವಿಯಾಯಿತೋ ಪುಷ್ಕರ್‌ ಹೆಸರು ಮುನ್ನೆಲೆಗೆ ಬಂತು. ರಕ್ಷಿತ್‌ ಶೆಟ್ಟಿ ಅಭಿನಯದ “ಕಿರಿಕ್‌ ಪಾರ್ಟಿ’ ಬಿಡುಗಡೆಯಾದ ಮೇಲಂತೂ ಅವರಿಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.
ಈಗ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿಝಿ ನಿರ್ಮಾಪಕರೆನಿಸಿಕೊಂಡಿದ್ದಾರೆ. “ಅವನೇ ಶ್ರೀಮನ್ನಾರಾಯಣ’, “ಹಂಬಲ್‌ ಪೊಲಿಟಿಷಿಯನ್‌ ನೋಗರಾಜ್‌’, “ಭೀಮಸೇನ ನಳಮಹಾರಾಜ’, ದಿಗಂತ್‌ ನಾಯಕರಾಗಿರುವ ಮತ್ತೂಂದು ಚಿತ್ರ … ಹೀಗೆ ಸಾಲು ಸಾಲು ಚಿತ್ರಗಳು ಪುಷ್ಕರ್‌ ನಿರ್ಮಾಣದಲ್ಲಿ ಮೂಡಿಬರುತ್ತಿವೆ.

Advertisement

ಪುಷ್ಕರ್‌ ತುಮಕೂರಿನವರು. ಲಂಡನ್‌ನಲ್ಲಿ ಓದಿ, ಚೆನ್ನೈನಲ್ಲಿ ಸಾಫ್ಟ್ವೇರ್‌ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ ಪುಷ್ಕರ್‌ಗೆ ಮತ್ತೂಬ್ಬರ ಕೈ ಕೆಳಗೆ ದುಡಿಯುವ ಆಸಕ್ತಿ ಇರಲಿಲ್ಲ. ಆಗ ಅವರ ತಲೆಯಲ್ಲಿ ಓಡಿದ್ದು ಬಿಝಿನೆಸ್‌. ಸಾಫ್ಟ್ವೇರ್‌
ಇಂಜಿನಿಯರ್‌ ಆಗಿದ್ದುಕೊಂಡೇ ಸಣ್ಣದೊಂದು ಐಟಿ ಕಂಪೆನಿ ಕೂಡಾ ಆಗಲೇ ತೆರೆದಿದ್ದರು. ಆದರೆ, ಅದು ಅಷ್ಟೇನೂ ವಕೌìಟ್‌ ಆಗಲಿಲ್ಲ. ಆಗ ಅವರು ಎಂಟ್ರಿಕೊಟ್ಟಿದ್ದೇ ಕನ್ಸ್‌ಟ್ರಕ್ಷನ್‌ ಫಿಲ್ಡ್‌ಗೆ. “2008 ನಾನು ತುಂಬಾ ಕಷ್ಟಪಟ್ಟ ವರ್ಷ. ಏನೇನೋ ಕನಸುಗಳನ್ನಿಟ್ಟುಕೊಂಡು ಕೆಲಸಗಳಿಗೆ ಕೈ ಹಾಕಿದರೂ ಅದು ಯಶಸ್ಸು ಕಾಣುತ್ತಿರಲಿಲ್ಲ. ಕೊನೆಗೆ ನಾನು 2009ರಲ್ಲಿ ಕನ್ಸ್‌ಟ್ರಕ್ಷನ್‌ಗೆ ಎಂಟ್ರಿಕೊಟ್ಟೆ. ಅದು ಚೆನ್ನಾಗಿ ಕೈ ಹಿಡಿಯಿತು. ನಿಜ ಹೇಳಬೇಕೆಂದರೆ ಸಿನಿಮಾಕ್ಕೆ ಬರಬೇಕು, ಇಷ್ಟೊಂದು ಚಿತ್ರಗಳನ್ನು ನಿರ್ಮಿಸಬೇಕೆಂಬ ಯೋಚನೆ ಇರಲಿಲ್ಲ. ಹೇಗಾದರೂ ಮಾಡಿ ಆ ನೋವಿನಿಂದ ಹೊರಬರಬೇಕು ಮತ್ತು ಯಾವುದಾದರೂ ತುಂಬಾ ಬಿಝಿಯಾಗಿರುವ ಕ್ಷೇತ್ರವೊಂದರಲ್ಲಿ  ಡಗಿಸಿಕೊಳ್ಳಬೇಕೆಂದು ನಿರ್ಧರಿಸಿದಾಗ ಕಣ್ಣ ಮುಂದೆ ಬಂದಿದ್ದು ಚಿತ್ರರಂಗ. ಆ ಸಮಯಕ್ಕೆ ಸರಿಯಾಗಿ ಸಿಕ್ಕವರು ಹೇಮಂತ್‌ ರಾವ್‌’ ಎಂದು
ನೆನಪಿಸಿಕೊಳ್ಳುತ್ತಾರೆ ಪುಷ್ಕರ್‌.

ಗೋಧಿ ಮೂಲಕ ಎಂಟ್ರಿ: 2009ರಿಂದ 2014ರವರೆಗೆ ಪುಷ್ಕರ್‌ ಬಿಝಿನೆಸ್‌ ಚೆನ್ನಾಗಿ ನಡೆಯುವ ಮೂಲಕ ಒಂದಷ್ಟು ಕಾಸು ಕೂಡಾ ಕೂಡಿಟ್ಟುಕೊಂಡಿದ್ದರು. ಜೊತೆಗೆ ಸಿನಿಮಾಕ್ಕೆ ಬರಬೇಕೆಂಬ ಮನಸ್ಸು ಕೂಡಾ ಆಯಿತು. ಆಗ ಸಿಕ್ಕವರು ಹೇಮಂತ್‌ರಾವ್‌. ಮೊದಲೇ ಸ್ನೇಹಿತರಾಗಿದ್ದ ಹೇಮಂತ್‌ ರಾವ್‌ ನಿರ್ಮಾಪಕರಿಗಾಗಿ ಹುಡುಕುತ್ತಿದ್ದರು. ಇತ್ತ ಕಡೆ ಪುಷ್ಕರ್‌ ನಿರ್ಮಾಪಕರಾಗಲು ರೆಡಿಯಾಗಿದ್ದರು. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿ ಮುಗಿಸೋದೆಂದು ನಿರ್ಧರಿಸಿದ ಪುಷ್ಕರ್‌ ಹಾಗೂ ಹೇಮಂತ್‌ ಮೊದಲು ಒಂದು ಟೀಸರ್‌ ಬಿಟ್ಟರು. 

ಟೀಸರ್‌ ಕ್ಲಿಕ್‌ ಆಗುವ ಮೂಲಕ ರಕ್ಷಿತ್‌ ಪರಿಚಯವಾಗಿ ನಾಯಕರಾಗಲು ಒಪ್ಪಿಕೊಂಡರು. “ಕಡಿಮೆ ಬಜೆಟ್‌ನಲ್ಲಿ “ಗೋಧಿ ಬಣ್ಣ’ ಮುಗಿಸಬೇಕೆಂದು ನಿರ್ಧರಿಸಿದ್ದೆವು. ಯಾರಾದರೂ ಹೊಸಬರನ್ನು ಹಾಕಿಕೊಂಡು
ಮಾಡಬೇಕೆಂದಿತ್ತು. ಆದರೆ, ಟೀಸರ್‌ ನೋಡಿ ರಕ್ಷಿತ್‌ ಶೆಟ್ಟಿ ನಮಗೆ ಸಾಥ್‌ ನೀಡಿದರು’ ಎನ್ನುತ್ತಾರೆ ಪುಷ್ಕರ್‌.  ಪುಷ್ಕರ್‌ ಸೆಟ್‌ನಲ್ಲಿ ಒಬ್ಬ ನಿರ್ಮಾಪಕರಾಗಿರೋದಿಲ್ಲವಂತೆ. ಬದಲಾಗಿ ಸಿನಿಮಾ ವಿದ್ಯಾರ್ಥಿಯಾಗಿರುತ್ತಾರಂತೆ. “ನನಗೆ ಸಿನಿಮಾದ ಪ್ರತಿ ವಿಷಯವನ್ನು ಕಲಿಯಬೇಕೆಂಬ ಆಸೆ. ಹಾಗಾಗಿ, ನಾನು ಅಸಿಸ್ಟೆಂಟ್‌ ಡೈರೆಕ್ಟರ್‌ ತರಹ ಕ್ಯಾಮರಾ ಹಿಂದೆಯೇ ಇರುತ್ತೇನೆ. ಎಲ್ಲಾ ವಿಷಯವನ್ನು ತಿಳಿದುಕೊಂಡರೆ ಮುಂದೆ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಲು ಅನುಕೂಲವಾಗುತ್ತದೆ’ ಎನ್ನುವುದು  ಪುಷ್ಕರ್‌ ಮಾತು. 

ಪಾಟ್ನೆರ್‌ಶಿಪ್‌ನಲ್ಲಿ ನಂಬಿಕೆ: ನೀವು ಒಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿರಬಹುದು. ಅದೇನೆಂದರೆ ಪುಷ್ಕರ್‌ ಫಿಲಂಸ್‌ನ ಸಿನಿಮಾಕ್ಕೆ ರಕ್ಷಿತ್‌  ಶೆಟ್ಟಿಯವರ ಪರಂವಾ ಸ್ಟುಡಿಯೋ ಕೂಡಾ ಕೈ ಜೋಡಿಸುತ್ತಿದೆ. ಪುಷ್ಕರ್‌ಗೆ ಈ ಬಗ್ಗೆ ಖುಷಿ ಇದೆ. “ರಕ್ಷಿತ್‌ ಅವರ ದೊಡ್ಡಗುಣ, ನಾವಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದೇವೆ. “ಕಿರಿಕ್‌ ಪಾರ್ಟಿ’ಯಲ್ಲಿ ಶೇರ್‌ ತೆಗೆದುಕೊಳ್ಳುವ ಮೂಲಕ ನಮ್ಮ ಜೊತೆಯಾಟ ಆರಂಭವಾಗಿದೆ.

Advertisement

ರಕ್ಷಿತ್‌ ಕೂಡಾ ಸಿನಿಮಾವನ್ನು ತುಂಬಾ ಪ್ರೀತಿಸುವವರು. ಒಳ್ಳೆಯ ಸಿನಿಮಾ ಕೊಡಬೇಕೆಂಬ ಉದ್ದೇಶ ಹೊಂದಿರುವವರು. ನನಗೂ ಅದೇ ತರಹದ ಆಸೆ ಇದೆ. ನಮ್ಮಿಬ್ಬರ ಯೋಚನೆ ಕೂಡಾ ಒಂದೇ. ಇಬ್ಬರೂ ಸಮಾನ ಮನಸ್ಕರು. ನಾನಂತೂ ಪಾಟ್ನೆರ್‌ಶಿಪ್‌ನಿಂದ ಖುಷಿಯಾಗಿದ್ದೇನೆ. ಮುಂದೆಯೂ ಒಳ್ಳೆಯ ಸಿನಿಮಾ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ಪುಷ್ಕರ್‌. ಪುಷ್ಕರ್‌ ಅವರ ಬಳಿ ಸಾಕಷ್ಟು ಕಥೆಗಳು ಬರುತ್ತವೆ. ಹಾಗೆ ಬಂದ ಕಥೆಗಳನ್ನು ಕೇಳಲೆಂದೇ ಒಂದು ತಂಡವಿದೆಯಂತೆ. ಆ ತಂಡ ಕಥೆ ಕೇಳಿ ಇಷ್ಟಪಟ್ಟ ನಂತರ ಅದನ್ನು ಸಿನಿಮಾ ಮಾಡುವ
ಬಗ್ಗೆ ನಿರ್ಧರಿಸುತ್ತಾರಂತೆ. “ನಮ್ಮ ಬಳಿ ಸ್ಟಾರ್‌ಗಳಿಗೆ 10-15 ಕೋಟಿ ಹಾಕಿ ಸಿನಿಮಾ ಮಾಡುವಷ್ಟು ದುಡ್ಡಿಲ್ಲ. ಅದರ ಬದಲು ಹೊಸ ಪ್ರತಿಭೆಗಳಿಗೆ  ಅವಕಾಶ ಕೊಡಬೇಕೆಂಬ ಆಸೆ ಇದೆ. ನನಗೆ ವರ್ಷಕ್ಕೆ ಮೀಡಿಯಂ ಬಜೆಟ್‌ನ 10 ಸಿನಿಮಾ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ.

ಮುಂದಿನ ವರ್ಷ ಬಾಲಿವುಡ್‌ಲ್ಲೂ ಸಿನಿಮಾ ಮಾಡುವ ಬಗ್ಗೆ ಪುಷ್ಕರ್‌ ಯೋಚಿಸುತ್ತಿದ್ದಾರೆ. ಈ ನಡುವೆಯೇ ಅವರ ನಿರ್ದೇಶನಕ್ಕೆ ಪೂರ್ವತಯಾರಿ  ನಡೆಯುತ್ತಿದೆ.

ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next