ಒಂದು ಕಿರುಚಿತ್ರ ಸಿನಿಮಾಗೆ ಸ್ಪೂರ್ತಿಯಾಗುತ್ತೆ ಅನ್ನುವುದು ಎಲ್ಲರಿಗೂ ಗೊತ್ತು. ಅಂಥದ್ದೊಂದು ಕಿರುಚಿತ್ರ ಮಾಡಿ, ಅದರ ಪ್ರೇರಣೆಯಿಂದ ಹೀಗೊಂದು ಸಾಫ್ಟ್ವೇರ್ ಇಂಜಿನಿಯರ್ ತಂಡ ಸೇರಿಕೊಂಡು “ಆವಾಹಯಾಮಿ’ ಎಂಬ ಚಿತ್ರ ಮಾಡಿದೆ. ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಹೊರತುಪಡಿಸಿದರೆ, ಉಳಿದೆಲ್ಲರಿಗೂ ಇದು ಮೊದಲ ಅನುಭವ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕ ಗಿರೀಶ್ ಕುಮಾರ್.
“ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಹಾರರ್ ಚಿತ್ರ ಅನ್ನೋದು ಗೊತ್ತಾಗುತ್ತೆ. ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆ. ಅವೆಲ್ಲಕ್ಕಿಂತ ಸ್ವಲ್ಪ ಹೊಸ ಪ್ರಯತ್ನದ ಮೂಲಕ ಇಲ್ಲಿ ಹೇಳುವ ಮತ್ತು ತೋರಿಸುವ ಪ್ರಯತ್ನ ಮಾಡಿದ್ದೇವೆ. ಸಾಮಾನ್ಯವಾಗಿ ಹಾರರ್ ಚಿತ್ರಗಳಲ್ಲಿ ಗ್ರಾಫಿಕ್ಸ್ ಬಳಕೆ ಹೆಚ್ಚು. ಅದರೊಂದಿಗೆ ಇಲ್ಲಿ ನೈಜತೆಗೆ ಒತ್ತು ಕೊಡಲಾಗಿದೆ. ಇಲ್ಲಿ ಹಾರರ್‌ನೊಂದಿಗೆ ಹೆಣ್ಣು ಭ್ರೂಣ ಹತ್ಯೆ ಕುರಿತು ಒಂದು ಸಂದೇಶವೂ ಇದೆ. ಒಂದು ತಪ್ಪು ಮಾಡಿದಾಗ, ಆನಂತರ ಪಡುವ ಪಶ್ಚಾತ್ತಾಪ ಚಿತ್ರದ ಹೈಲೈಟ್. ಆ ತಪ್ಪಿನ ಅರಿವು ಏನೆಂಬುದು ಸಿನಿಮಾದೊಳಗಿನ ಸಾರ’ ಎನ್ನುತ್ತಾರೆ ನಿರ್ದೇಶಕರು.
ವಿಜಯ್‌ರಾಜ್ ಚಿತ್ರದ ಹೀರೋ. ಅವರೇ ಹೇಳುವಂತೆ, “ಇಲ್ಲಿ ನಾನು ಹೀರೋ ಅಲ್ಲ. ಕಥೆಯೇ ಹೀರೋ. ಎಲ್ಲರೂ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ನನಗೆ ಇಲ್ಲಿ ಸಾಕಷ್ಟು ಕಲಿಯೋಕೂ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ವಿಜಯ್‌ರಾಜ್. ಇನ್ನು, ಅಕ್ಷತಾ ಕೂಡ ಸಾಫ್ಟ್ವೇರ್ ಇಂಜಿನಿಯರ್. “ಟೆಕ್ನಿಕಲಿ ಸ್ಟ್ರಾಂಗ್ ಇರುವ ವಿಷಯ ಇಲ್ಲಿತ್ತು. ಎಲ್ಲರೂ ಎಂಜಿನಿಯರ್ ಇದ್ದುದರಿಂದ ಅದಿಲ್ಲಿ ಸಾಧ್ಯವಾಗಿದೆ. ಈಗ ಸಿನಿಮಾ ಟ್ರೇಲರ್ ನೋಡಿದಾಗಲೇ ಖುಷಿಯಾಗುತ್ತಿದೆ. ಹೊಸಬರು ಇಷ್ಟೊಂದು ಚೆನ್ನಾಗಿ ಮಾಡಿದ್ದೇವಾ ಅನಿಸುತ್ತಿದೆ’ ಅಂದರು ಅಕ್ಷತಾ.
ಹಿನ್ನೆಲೆ ಸಂಗೀತ ನೀಡಿರುವ ಗೌತಮ್ ಶ್ರೀವತ್ಸ, “ಹೊಸಬರ ಹೊಸ ಪ್ರಯತ್ನವಿದು. ಇಲ್ಲಿ ಗಿರೀಶ್ ಮತ್ತು ತಂಡ ಸಾಕಷ್ಟು ಶ್ರಮಪಟ್ಟು ಸಿನಿಮಾ ಮಾಡಿದೆ. ಇಲ್ಲಿ ಹಣಕಾಸು ಒಂದೇ ಮುಖ್ಯ ಆಗೋದಿಲ್ಲ. ಎಲ್ಲರು ರಾತ್ರಿ-ಹಗಲು ಕೆಲಸ ಮಾಡಿದ್ದಾರೆ. ಇಲ್ಲಿ ಒಂದೇ ಹಾಡು ಇದೆ. ಹಿನ್ನೆಲೆ ಸಂಗೀತ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಲಿದೆ’ ಅಂದರು ಗೌತಮ್ ಶ್ರೀವತ್ಸ.
ಕ್ಯಾಮೆರಾಮೆನ್ ಕಿರಣ್ ಕೆ.ನಾಯರ್ ಅವರು, ತಮಿಳಿನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಕಿರಣ್, ಈ ಕೆಲಸ ಮಾಡುವಾಗ, ರಜೆ ಹೆಚ್ಚು ಹಾಕಿದರಂತೆ. ಕೊನೆಗೆ ಅವರ ಕೆಲಸವೇ ಹೋಯ್ತಂತೆ. ಆದರೆ, ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದ್ದುದರಿಂದ ಚೆನ್ನಾಗಿ ಕೆಲಸ ಮಾಡುವ ಆಸೆಯಿಂದ ಹೊಸ ಲೈಟಿಂಗ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರಂತೆ.