Advertisement

ಸೋಡಿಗದ್ದೆ ದೇವಿ ಜಾತ್ರೆಯ ಎರಡನೇ ದಿನ : ಕೆಲವರಿಗಷ್ಟೇ ಕೆಂಡ ಸೇವೆಗೆ ಅವಕಾಶ

07:34 PM Jan 24, 2022 | Team Udayavani |

ಭಟ್ಕಳ: ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ವಾರ್ಷಿಕ ಹಾಲುಹಬ್ಬ ಜಾತ್ರೆಯ ಎರಡನೇ ದಿನವಾದ ಇಂದು ಸಾಂಕೇತಿಕವಾಗಿ ಕೆಂಡ ಸೇವೆಯನ್ನು ನಡೆಸಿದ್ದು ಊರಿನವರಷ್ಟೇ ಅಲ್ಲದೇ ಬೇರೆ ಬೇರೆ ಊರಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

Advertisement

ಮೊದಲನೇ ದಿನದ ಹಾಲುಹಬ್ಬ ಸೇವೆಗೆ ಜನರೇ ಇಲ್ಲದೇ ಬಣಗುಡುತ್ತಿದ್ದರೆ ಎರಡನೇ ದಿನದ ಕೆಂಡ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಬಂದಿದ್ದರೂ ಸಹ ಕೆಂಡ ಸೇವೆಯನ್ನು ಸಾಂಕೇತಿಕವಾಗಿ ಕೆಲವೇ ಕೆಲವು ಜನರಿಗೆ ಅವಕಾಶ ನೀಡುವ ಮೂಲಕ ಹೆಚ್ಚಿನ ಜನರು ನಿರಾಸೆಯಿಂದ ವಾಪಾಸು ಹೋಗುವಂತಾಯಿತು. ದೂರ ದೂರದಿಂದ ಬಂದಿದ್ದ ಭಕ್ತರು ಕೆಂಡ ಸೇವೆಯನ್ನು ನಡೆಸಲು ಇಚ್ಚಿಸಿದ್ದರೂ ಸಹ ಆಡಳಿತಾಧಿಕಾರಿಗಳು ಅವಕಾಶ ನೀಡದೇ ಇರುವುದರಿಂದ ಕೇವಲ ಕೆಲವರಿಗಷ್ಟೇ ಕೆಂಡ ಸೇವೆಯನ್ನು ಪೂರೈಸಲು ಅವಕಾಶವಾಯಿತು.

ಕಳೆದ ಹಲವಾರು ದಿನಗಳಿಂದ ಸೋಡಿಗದ್ದೆ ಜಾತ್ರೆಯು ನಡೆಯುತ್ತದೆಯೋ ಇಲ್ಲವೇ ಎನ್ನುವ ಗೊಂದಲದಲ್ಲಿದ್ದ ಜನತೆ ಕೋವಿಡ್ ಭಯದಿಂದಾಗಿ ಮೊದಲನೇ ದಿನ ಬಾರದೇ ಮನೆಯಲ್ಲಿಯೇ ಉಳಿದುಕೊಂಡರು. ಆದರೆ ಎರಡನೇ ದಿನ ದೇವರ ದರ್ಶನವನ್ನಾದರೂ ಪಡೆದುಕೊಂಡು ಹೋಗುವ ಇಚ್ಚೆಯಿಂದ ನೂರಾರು ಜನರು ಬಂದಿದ್ದು ಒಮ್ಮೆ ನೂಕು ನುಗ್ಗಲು ಉಂಟಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಡಳಿತ, ಅಭಿವೃದ್ಧಿ ಸಮಿತಿ ಎಲ್ಲರಿಗೂ ತಕ್ಷಣವೇ ದರ್ಶನಕ್ಕೆ ವ್ಯವಸ್ಥೆ ಮಾಡಿ ನೂಕುನುಗ್ಗಲಾಗದಂತೆ ನೋಡಿಕೊಂಡಿರುವುದು ಹಲವರಿಗೆ ನಿರಾಸೆಯಾಗಿದೆ.

ಜಾತ್ರೆಯ ಆರಂಭದ ದಿನ ಯಾವುದೇ ಅಂಗಡಿಗಳು, ಜಾತ್ರಾ ಅಂಗಡಿಗಳನ್ನು ತೆರೆಯಲು ಅವಕಾಶ ನಿರಾಕರಿಸಲಾಗಿತ್ತಾದರೂ ಎರಡನೇ ದಿನ ಕೆಲವು ಊರಿನವರು ಅಲ್ಲಲ್ಲಿ ಅಂಗಡಿಗಳನ್ನು ಹಾಕಿಕೊಂಡಿರುವುದು ಕಂಡು ಬಂತು. ಆದರೂ ಸಹ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ಏರ್ಪಡಿಸಿದ್ದು ಜಾತ್ರೆಯು ಅತ್ಯಂತ ಸೂಕ್ತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಶ್ರಮಿಸುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next