ವಿಜಯಪುರ: ಆಸ್ಸಾಂ ರಾಜ್ಯದಲ್ಲಿ ಸಿಆರ್ ಪಿಎಫ್ ಪಡೆಯ ಎಸೈ ಆಗಿದ್ದ ವಿಜಯಪುರ ಜಿಲ್ಲೆಯ ಯೋಧ ಭೀಮಪ್ಪ ಕೋಲಕಾರ ಹೃದಯಾಘಾತದಿಂದ ನವೆಂಬರ್ 30 ರಂದು ಮೃತಪಟ್ಟಿದ್ದು, ಮೃತರ ಶವ ಗುರುವಾರ ತವರಿಗೆ ಆಗಮಿಸಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆರವೇರಿಸಲಾಯಿತು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದವರಾಗಿದ್ದ ಭೀಮಪ್ಪ ಮ. ಕೋಲ್ಕಾರ ಅವರು ಸಿ.ಆರ್.ಪಿ.ಎಫ್‍ನಲ್ಲಿ ಸೇವೆಗೆ ಸೇರಿದ್ದು, ಸದ್ಯ ಆಸ್ಸಾಂನ ಜೈಸಾಗರ, ಶಿವಸಾಗರನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವೆಂಬರ್ 30 ರಂದು ಕರ್ತವ್ಯದಲ್ಲಿದ್ದಾಗಲೇ ಮಧ್ಯಾಹ್ನ 3-30 ಕ್ಕೆ ಹೃದಯಾಘಾತವಾಗಿ, ಯೋಧ ಭೀಮಪ್ಪ ಕೋಲಕಾರ ಮೃತಪಟ್ಟಿದ್ದಾರೆ.
ಮೃತ ಯೋಧ ಭೀಮಪ್ಪ ಅವರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ವಿಜಯಪುರ ನಗರದಲ್ಲಿ ಗುರುವಾರ ಮದ್ಯಾಹ್ನ 12 ಗಂಟೆಗೆ ಜರುಗಿತು. ಜಿಲ್ಲಾಡಳಿತ, ಪೋಲಿಸ ಇಲಾಖೆ ಹಾಗೂ ಯಲಹಂಕ ಸಿ.ಆರ್.ಪಿ.ಎಫ್ ಗ್ರೂಪ್ ಸೆಂಟರ್‍ನಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು.
ಯೋಧ ಭೀಮಪ್ಪ ಅವರ ಪಾರ್ಥೀವ ಶರೀರ ನಗರಕ್ಕೆ ಆಗಮಿಸುತ್ತಲೇ ಸ್ಥಳಕ್ಕೆ ತೆರಳಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ವಿಜಯಪುರ ತಹಶೀಲ್ದಾರ ಸಿದ್ದು ಭೋಸಗಿ, ಆರ್.ಎಸ್.ಐ ಎಸ್.ಜಿ ಸಂಬರಗಿ, ಮಹಿಳಾ ಪಿ.ಎಸ್.ಐ ಚೌರ, ಪಿ.ಎಸ್.ಐ ಮುಶಾಪುರಿ ಅಂತಿಮ ಗೌರವ ಸಲ್ಲಿಸಿ, ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು