Advertisement

ಕೊಳಚೆ ನೀರಿನಿಂದ ಮುಕ್ತಿಗೆ ಸೋಕ್‌ಫಿಟ್‌

09:35 PM Jan 04, 2021 | Team Udayavani |

ಬಂಟ್ವಾಳ: ಸ್ವಚ್ಛತೆಯ ದೃಷ್ಟಿಯಿಂದ ಸರಕಾರ ಹಲವು ರೀತಿಯಲ್ಲಿ ಅನುದಾನ ನೀಡುತ್ತಿದ್ದು, ಇದೀಗ ಕೊಳಚೆ ನೀರು ಪರಿಸರವನ್ನು ಸೇರುತ್ತಿದೆ ಎಂದು ದ್ರವ ತ್ಯಾಜ್ಯ ಗುಂಡಿ (ಸೋಕ್‌ಫಿಟ್‌)ಗಳ ಮೂಲಕ ನೀರು ಶುದ್ಧಗೊಂಡು ಭೂಮಿ ಸೇರುವಂತೆ ಮಾಡುತ್ತಿದೆ. ಈ ಬಾರಿ ಸೋಕ್‌ಫಿಟ್‌ಗಳ ರಚನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದ್ದು, ಬಂಟ್ವಾಳದಲ್ಲಿ 357 ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ದ್ರವ ತ್ಯಾಜ್ಯ ಗುಂಡಿಗಳನ್ನು ರಚನೆ ಮಾಡಲಾಗುತ್ತಿದ್ದು, ಅದಕ್ಕಾಗಿ ನಿರ್ದಿಷ್ಟ ಮೊತ್ತದ ಅನುದಾನವನ್ನು ನೀಡುತ್ತಿದೆ. ಗುಂಡಿಗಳ ರಚನೆ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದರೂ, ಈ ಬಾರಿ ಅದನ್ನು ಅಭಿಯಾನದ ರೀತಿಯಲ್ಲಿ ಪ್ರಚುರ ಪಡಿಸಲಾಗಿತ್ತು.

ಸಾಕಷ್ಟು ಭಾಗಗಳಲ್ಲಿ ಕೊಳಚೆ ನೀರನ್ನು ಎಲ್ಲೆಲ್ಲಿಗೋ ಬಿಡುವ ಪರಿಸ್ಥಿತಿ ಇದ್ದು, ಕೆಲವೆಡೆ ಮನೆಯ ಸುತ್ತ ಎಲ್ಲಿಗೂ ಬಿಡಲು ಜಾಗವಿಲ್ಲದೆ ನೇರವಾಗಿ ರಸ್ತೆಗೆ ಬಿಡುತ್ತಿದ್ದಾರೆ. ಇದು ಸ್ವಚ್ಛತೆಗೆ ಧಕ್ಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ದ್ರವ ತ್ಯಾಜ್ಯ ಗುಂಡಿ ರಚನೆಗೆ ಪ್ರೇರೇಪಣೆ ನೀಡುತ್ತಿದೆ.

ಏಳು ಅಡಿಗಳಷ್ಟು ಆಳದ ಹೊಂಡ
ಒಟ್ಟು 7 ಅಡಿ ಆಳದ ಹೊಂಡ ಮಾಡಿಕೊಂಡು ಅದಕ್ಕೆ ತಳಭಾಗದಲ್ಲಿ ಸುಮಾರು 4 ಅಡಿಗಳಷ್ಟು ಜಲ್ಲಿ ಅಥವಾ ಮುರ ಕಲ್ಲನ್ನು ತುಂಬಿಸಲಾಗುತ್ತದೆ. ನೀರು ಶುದ್ಧಗೊಂಡು ಭೂಮಿಯನ್ನು ಸೇರಬೇಕು ಎಂಬ ದೃಷ್ಟಿಯಿಂದ ತಳ ಭಾಗದಲ್ಲಿ ಒಂದು ಲೇಯರ್‌ ಜಲ್ಲಿ ಅಥವಾ ಮುರ ಕಲ್ಲು ಹುಡಿ ಹಾಕಿದ ಬಳಿಕ ಒಂದು ಲೇಯರ್‌ ಇದ್ದಿಲನ್ನು ತುಂಬಿಸಲಾಗುತ್ತದೆ. ಬಳಿಕ ಅದಕ್ಕೆ ಮರಳನ್ನು ತುಂಬಿಸಲಾಗುತ್ತದೆ. ಜತೆಗೆ ನೈಲಾನ್‌ ಮೆಸ್‌ ಕೂಡ ಅಳವಡಿಸಲಾಗುತ್ತದೆ.

ಚರಂಡಿಗೆ ಬಿಡುವ ಕಡೆಯಿಂದ ಬೇಡಿಕೆ
ಗ್ರಾಮೀಣ ಭಾಗಗಳಲ್ಲಿ ತೆಂಗಿನಗಿಡ ಸೇರಿದಂತೆ ಇತರ ಗಿಡಗಳಿರುವವರು ನೇರವಾಗಿ ಅವುಗಳಿಗೆ ಬಿಡುತ್ತಾರೆ. ಆದರೆ ಜಾಗವಿಲ್ಲದೆ ಚರಂಡಿ ಬಿಡುವ ಪರಿಸ್ಥಿತಿ ಇದ್ದ ಪ್ರದೇಶದಿಂದ ಸೋಕ್‌ಫಿಟ್‌ಗಳಿಗೆ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ಒಟ್ಟು 580 ಸೋಕ್‌ಫಿಟ್‌ಗಳಿಗೆ ಬೇಡಿಕೆ ಇದ್ದು, ಸಾಕಷ್ಟು ಕಡೆ ಕಾಮಗಾರಿ ನಡೆಯುತ್ತಿದೆ.
-ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ,  ಬಂಟ್ವಾಳ ತಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next