Advertisement

ಸಮಾಜವಾದಿ ಭಾರತ ಭಗತ್‌ ಸಿಂಗ್‌ ಕನಸು

09:10 PM Mar 24, 2021 | Team Udayavani |

ದಾವಣಗೆರೆ: ವಿದ್ಯಾರ್ಥಿ ಹಾಗೂ ಯುವ ಸಮೂಹ ಭಗತ್‌ ಸಿಂಗ್‌ರವರ ತತ್ವಾದರ್ಶವನ್ನು ಅಳವಡಿಸಿಕೊಳ್ಳ ಬೇಕು ಎಂದು ಅಖೀಲ ಭಾರತ ಯುವಜನ ಫೆಡರೇಷನ್‌(ಎಐವೈಎಫ್‌) ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಕರೆ ನೀಡಿದರು.

Advertisement

ಮಂಗಳವಾರ ರೈಲ್ವೆ ನಿಲ್ದಾಣ ಮುಂದಿನ ಭಗತ್‌ ಸಿಂಗ್‌ ಪ್ರತಿಮೆ ಬಳಿ ನಡೆದ ಬಲಿದಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕ್ರಾಂತಿಕಾರಿ ಭಗತ್‌ ಸಿಂಗ್‌ ಮತ್ತು ಅವರ ಸಂಗಡಿಗರಾದ ಸುಖದೇವ್‌, ರಾಜಗುರು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿ 90 ವರ್ಷ ಕಳೆದಿದೆ. ಅವರೆಲ್ಲರೂ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಕೆಲವೇ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂತಹ ವಿರಳಾತಿ ವಿರಳರ ಸಾಲಿನಲ್ಲಿ, ಭಗತ್‌ ಸಿಂಗ್‌, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ. ತಲೆಮಾರಿನಿಂದ ತಲೆಮಾರಿಗೆ ಬೆಳಕು ನೀಡುತ್ತಾ, ನಿತ್ಯ ಸ್ಫೂರ್ತಿಯಾಗುತ್ತಾ ನಮ್ಮ ನಡುವೆಯೇ ಇದ್ದಾರೆ ಎಂದು ತಿಳಿಸಿದರು.

ಭಗತ್‌ ಸಿಂಗ್‌ ತಮ್ಮ 24ನೇ ವಯಸ್ಸಿನಲ್ಲೇ ನಗು ನಗುತ್ತಾ ನೇಣುಗಂಬಕ್ಕೇರಿದರು. ಅವರು ಓದಿದ್ದು, ರಚಿಸಿದ ಸಾಹಿತ್ಯ, ಬೌದ್ಧಿಕ ಮಟ್ಟ, ಆಲೋಚನಾ ಕ್ರಮ, ಪ್ರಕಟವಾಗದೇ ಉಳಿದ ಜೈಲಿನ ದಿನಚರಿಗಳನ್ನು ನೋಡಿದರೆ ಅಚ್ಚರಿ ಉಂಟಾಗುತ್ತದೆ. ಭಗತ್‌ ಸಿಂಗ್‌ ಗಲ್ಲಿಗೇರಿದ ಆರೇಳು ದಶಕಗಳ ನಂತರ ಅವರು ಬರೆದ ಲೇಖನಗಳು, ಪತ್ರಗಳು, ದಿನಚರಿಯ ಪುಟಗಳು ಒಂದೊಂದಾಗಿ ಹೊರ ಬರುತ್ತಿವೆ. ಭಗತ್‌ ಸಿಂಗ್‌ ಕನಸು ಕೇವಲ ಸ್ವತಂತ್ರ ಭಾರತ ಮಾತ್ರವಲ್ಲ, ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಹಂಬಲಿಸಿದ್ದರು ಎಂದು ಸ್ಮರಿಸಿದರು.

ಭಗತ್‌ ಸಿಂಗ್‌ ಕೋಮುವಾದ ಮತ್ತು ಜಾತಿವಾದಗಳನ್ನು ಕಟುವಾಗಿ ವಿರೋ ಧಿಸುತ್ತಿದ್ದರು. ಗಲ್ಲಿಗೇರಿದ ದಿನ ಅವರನ್ನು ಭೇಟಿಯಾಗಲು ಬಂದ ಜೈಲರ್‌ ಗಮನಕ್ಕೆ ಭಗತ್‌ ಸಿಂಗ್‌ ಲೆನಿನ್‌ ಪುಸ್ತಕ ಓದುತ್ತಿರುವುದು ಕಂಡು ಬಂತು. ಗಲ್ಲಿಗೇರಿಸುವ ಸಮಯವಾಯಿತು ಎಂದು ಹೇಳಿದಾಗ ಕೊಂಚ ತಡೆಯಿರಿ, ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಭೇಟಿಯಾಗುತ್ತಿದ್ದಾನೆ ಎಂದು ಲೆನಿನ್‌ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ನೇಣುಗಂಬದತ್ತ ಸಾಗಿದಂತಹ ಮಹಾನ್‌ ಕ್ರಾಂತಿಕಾರಿ ಭಗತ್‌ ಎಂದು ಬಣ್ಣಿಸಿದರು. ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಎ. ತಿಪ್ಪೇಶಿ, ಜೀವನ ನಿಟುವಳ್ಳಿ , ಫಜಲುಲ್ಲಾ, ಗದಿಗೇಶ್‌ ಪಾಳೇದ್‌, ಇರ್ಫಾನ್‌, ಎಚ್‌.ಎಂ. ಮಂಜುನಾಥ್‌ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next