Advertisement
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಗಳಲ್ಲಿ ಕೆಲಸ ಸುಗಮವಾಗಿ ನಡೆಯುವಂತೆ ನೋಡಿಕೊಂಡು ಕಲ್ಯಾಣ ಕಾರ್ಯಕ್ರಮಗಳನ್ನು ಎಲ್ಲಾ ವರ್ಗಗಳಿಗೂ ತಲುಪುವಂತೆ ಮಾಡುವುದರ ಜತೆಗೆ ಇದೇ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ನೇಮಕಾತಿ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಪರ್ವದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಇಲಾಖೆಗಳ ವಸತಿ ಶಾಲೆಗಳನ್ನು ನಡೆಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ 13,205, ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 3841, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 5296 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಭರ್ತಿ ಮಾಡಲಾಗುತ್ತಿರುವ 5296 ಹುದ್ದೆಗಳ ಪೈಕಿ ಬಹುತೇಕವು ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವತ್ಛತಾ ಸಿಬ್ಬಂದಿ ಆಗಿದ್ದು, ಈ ಹುದ್ದೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಿ ನೇಮಕಾತಿಗೆ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ತಾತ್ಕಾಲಿಕ ನೌಕರರಿಗೆ ತೊಂದರೆ ಮಾಡುವುದಿಲ್ಲ:ಹೊಸದಾಗಿ ಹುದ್ದೆಗಳನ್ನು ಭರ್ತಿ ಮಾಡಿದರೂ ಆ ಹುದ್ದೆಗಳಲ್ಲಿ ಅನೇಕ ವರ್ಷಗಳಿಂದ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ತೊಂದರೆ ಮಾಡುವುದಿಲ್ಲ. ಈಗ ನೇಮಕವಾಗುತ್ತಿರುವ ಹುದ್ದೆಗಳ ಪೈಕಿ ಸಾಕಷ್ಟು ಹುದ್ದೆಗಳು ಹೊಸದಾಗಿ ಸೃಜನೆಯಾಗುವಂತಹದ್ದು. ಅನೇಕ ವರ್ಷಗಳಿಂದ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವವರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂದು ಅವರು ಭರವಸೆ ನೀಡಿದರು. ಅಡುಗೆಯವರು, ಅಡುಗೆ ಸಹಾಯಕರಿಗೂ ಎಸ್ಸೆಸ್ಸೆಲ್ಸಿ ವಿದಾರ್ಹತೆ ನಿಗದಿಪಡಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಸಚಿವರು, ಸರ್ಕಾರಿ ನೇಮಕಾತಿಯಲ್ಲಿ ಡಿ ದರ್ಜೆ ನೌಕರರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಕಡ್ಡಾಯಗೊಳಿಸಿದ್ದು, ಈ ಹುದ್ದೆಗಳು ಡಿ ದರ್ಜೆ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ, ಅಡುಗೆಯವರು ಮತ್ತು ಸಹಾಯಕರನ್ನು ನೇಮಕ ಮಾಡಿಕೊಳ್ಳುವಾಗ ಅವರಿಗೆ ಆ ಕೆಲಸ ಬರುತ್ತದೆಯೇ ಎಂಬುದನ್ನು ತಿಳಿದುಕೊಂಡೇ ನೇಮಕ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.