ಹಾವೇರಿ: ಸಮಾಜ ಸೇವೆ ಮಾಡುವುದರಿಂದ ಮನುಷ್ಯನಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಗುದ್ಲೇಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿ ಸ್ವೀಕರಿಸಿದ ಬೆಳಕು ಅಕಾಡೆಮಿ ಸಂಸ್ಥಾಪಕಿ ಅಶ್ವಿನಿ ಅಂಗಡಿ ಅಭಿಪ್ರಾಯಿಸಿದರು.
ತಾಲೂಕಿನ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಗುದ್ಲೇಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಹಿರಿಯ ಗಾಂಧಿ ವಾದಿ ಕರ್ನಾಟಕ ಉಕ್ಕಿನ ಮನುಷ್ಯ ಗುದ್ಲೇಪ್ಪ ಹಳ್ಳಿಕೇರಿಯವರ 113ನೇ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ತಿ ಇದ್ದರೆ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯರಿಗೆ ಮೋಸ ಮಾಡಿ ಆಸ್ತಿ ತೆಗೆದುಕೊಂಡು ಮನೆಯಿಂದ ಹೊರ ಹಾಕಿದ ಹಲವಾರು ಘಟನೆಗಳನ್ನು ನಾವು ಕಂಡಿದ್ದೇವೆ ಮತ್ತು ನೋಡಿದ್ದೇವೆ ಆದರೆ ವಿದ್ಯೆಯನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ವಿದ್ಯೆಯನ್ನು ಸಂಪಾದಿಸಬೇಕು ಎಂದರು.
ಪ್ರಾಧ್ಯಾಪಕ ರಂಜಾನ್ ದರ್ಗಾ ಮಾತನಾಡಿ, ಇವತ್ತು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು. ಜನನಾಯಕರು ಮತ್ತು ಮುಖಂಡರು ಅತ್ಯಾಚಾರ ಪ್ರಕರಣಗಳಲ್ಲಿ ಕಂಡು ಬರುತ್ತಿರುವುದು ವಿಷಾದನೀಯ ಎಂದರು.
ಧಾರವಾಡ ರಾಷ್ಟ್ರೋತ್ಥಾನ ಕೇಂದ್ರದ ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ಮತ್ತು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗುದ್ಲೇಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ| ದೀನಬಂದು ಹಳ್ಳಿಕೇರಿ ಮಾತನಾಡಿದರು. ಗುರುಕುಲದ ಪ್ರಧಾನ ಗುರುಗಳಾದ ಆರ್.ಎಸ್. ಪಾಟೀಲ, ಗೋಪಣ್ಣ ಕುಲಕರ್ಣಿ, ಬಿ.ಜಿ. ಗೌರಿಮನಿ, ವಿ.ಯು. ಚಕ್ಕಿ, ಜೆ.ಎಂ. ಮಠದ, ತಾಪಂ ಸದಸ್ಯ ಎಂ.ಎಂ. ವಗ್ಗಣ್ಣನವರ, ತೋಟಪ್ಪ ಹಳ್ಳಿಕೇರಿ, ದಯಾನಂದ ಕಲಕೋಟಿ, ವೀರಣ್ಣ ಅರಳಿ, ರಾಜೇಂದ್ರ ಹಳ್ಳಿಕೇರಿ, ಎಚ್.ಆರ್. ಯಡಳ್ಳಿ, ಬಿ.ಎಸ್. ಯಾಗವಲ್ಲ ಸೇರಿದಂತೆ ಇತರರಿದ್ದರು.