ಪಾವಗಡ: ರೋಟರಿ ಸಂಸ್ಥೆಯಿಂದ ಸಾಮಾಜಿಕ ಸೇವೆ ಹಮ್ಮಿಕೊಂಡು ಬಡವರಿಗೆ ನೆರವಾಗಲಿದೆ ಎಂದು ನೂತನ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಎಚ್.ನಂದೀಶ್‌ಬಾಬು ತಿಳಿಸಿದರು.
ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೋಟರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಸಸಿ ನೆಡುವ, ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮ, ಶಾಲಾ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮಾಜಿ ಅಧ್ಯಕ್ಷ, ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮ ರೋಟರಿ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡುವೆಂಕಟೇಶ್ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ರೋಟರಿ ಸಂಸ್ಥೆ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ. ತಾಲೂಕು ಬರಮುಕ್ತ ವಾಗಿರಬೇಕಾದರೆ ರೋಟರಿ ಸಂಸ್ಥೆ ತಾಲೂಕಿನಾದ್ಯಂತ ಗಿಡಮರ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪ್ರತಿಭಾ ಪುರಸ್ಕಾರ, ಕಟ್ಟಡ ಕಾರ್ಮಿಕರಿಗೆ ವಿಮಾ ಸೌಲಭ್ಯ, ಕ್ರೀಡಾಕೂಟ ಹಾಗೂ ಎರಡು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಸುಮಾರು 40 ಯೋಜನೆ ಯಶ್ವಸಿಯಾಗಿ ಪೂರೈಸಿರುವುದಾಗಿ ನಿರ್ಗಮಿತ ರೋಟರಿ ಅಧ್ಯಕ್ಷ ಮಹಮ್ಮದ್ ಇಮ್ರಾನ್ ಹೇಳಿದರು. ರೋಟರಿಯನ್‌ಗಳಾದ ಬಿ.ಎಲ್.ನಾಗೇಂದ್ರ ಪ್ರಸಾದ್, ಎನ್.ಎಸ್.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ವಿಶ್ವನಾಥ್, ಕಮಲ್ಬಾಬು, ಗೋರ್ತಿ ನಾಗರಾಜು, ಲೋಕೇಶ್ ಕನ್ನಮೇಡಿ, ಪ್ರಭಾಕರ್, ಮಾಜಿ ಪುರಸಭೆ ಅಧ್ಯಕ್ಷೆ ಸುವÞ ಅನಿಲ್ ಮಾತನಾಡಿದರು. ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ರೋಟರಿ ಉಪಾಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ಶ್ರವಣ್‌ರೆಡ್ಡಿ ಇತರರಿದ್ದರು.