Advertisement

4-5 ತಿಂಗಳಿನಿಂದ ಸಿಗುತ್ತಿಲ್ಲ ಸಾಮಾಜಿಕ ಭದ್ರತಾ ಪಿಂಚಣಿ; ಅನೇಕ ಫಲಾನುಭವಿಗಳ ಖಾತೆಯೇ ಸ್ಥಗಿತ

12:04 AM Sep 09, 2020 | mahesh |

ಕುಂದಾಪುರ: ಸಾಮಾಜಿಕ ಭದ್ರತಾ ಯೋಜನೆ ಸಹಿತ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಕಳೆದ 4-5 ತಿಂಗಳಿನಿಂದ ಹಣ ಸಿಗುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯಾದ್ಯಂತ ಈ ಸಮಸ್ಯೆ ಯಿದ್ದು, ಸಾವಿರಾರು ಮಂದಿ ಸಂಕಷ್ಟಪಡುವಂತಾಗಿದೆ. ಈ ಬಗ್ಗೆ ವಿಚಾರಿಸಲು ಬಂದ ಫಲಾನುಭವಿಗಳಿಗೆ ತಮ್ಮ ಖಾತೆಯೇ ಕೆ-2 (ಖಜಾನೆ -2) ತಂತ್ರಾಂಶದಲ್ಲಿ ಸ್ಥಗಿತಗೊಂಡಿರುವ ಆತಂಕಕಾರಿ ಸಂಗತಿ ತಿಳಿದು ಬಂದಿದೆ. ವಿವಿಧ 9 ಪಿಂಚಣಿ ಯೋಜನೆಗಳಡಿ ಉಡುಪಿಯಲ್ಲಿ 1,29,479ಕ್ಕೂ ಹೆಚ್ಚು ಮತ್ತು ದ.ಕ.ದಲ್ಲಿ 1,47,950ಕ್ಕೂ ಅಧಿಕ ಮಂದಿ ಫಲಾನುಭವಿಗಳಿದ್ದಾರೆ.

Advertisement

ಫಲಾನುಭವಿಗಳು ತಾಲೂಕು ಕಚೇರಿಯಲ್ಲಿ ಕೇಳಿದರೆ ಸೂಕ್ತ ದಾಖಲೆ ಸಲ್ಲಿಸಿಲ್ಲ, ಬ್ಯಾಂಕ್‌ ಖಾತೆ ಸರಿಯಿಲ್ಲ, ವಿಳಾಸ ಸರಿಯಿಲ್ಲ, ವಿಳಂಬವಾಗ ಬಹುದು ಎನ್ನುವ ಕಾರಣ ನೀಡುತ್ತಾರೆ. ಮತ್ತೆ ಕೆಲವರದು ಖಾತೆ ಸ್ಥಗಿತಗೊಂಡಿದೆ ಎನ್ನುವುದಾಗಿ ಕೆ-2 ತಂತ್ರಾಂಶದಲ್ಲಿ ಕಾಣುತ್ತಿದೆ. ಜನವರಿಯಲ್ಲಿ ಕೆ-1 (ಖಜಾನೆ-1)ರಿಂದ ಕೆ-2ಕ್ಕೆ ಫಲಾನುಭವಿಗಳ ದಾಖಲೆ ವರ್ಗಾಯಿಸಲಾಗಿತ್ತು. ಆ ಬಳಿಕ ಈ ತರಹದ ಪ್ರಕರಣಗಳು ಕಾಣಿಸಿಕೊಂಡಿವೆ.

ಸರಕಾರಕ್ಕೆ ಆರ್ಥಿಕ ಸಂಕಷ್ಟವೇ?
ಆರ್ಥಿಕ ಸಂಕಷ್ಟಗಳಿಂದ ಸರಕಾರದ ಖಜಾನೆ ಖಾಲಿ ಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಆರೋಪವನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.

ಆಗ ಬರುತ್ತಿತ್ತು, ಈಗಿಲ್ಲ…
ಕುಂದಾಪುರದ ವೃದ್ಧ ಫಲಾನುಭವಿಯೊಬ್ಬರು ಹೇಳುವಂತೆ ಫೆಬ್ರವರಿವರೆಗೆ ಪ್ರತೀ ತಿಂಗಳ 10ಕ್ಕೆ ಪಿಂಚಣಿ ಅವರ ಖಾತೆಗೆ ಜಮೆಯಾಗುತ್ತಿತ್ತು. ಕಳೆದ 6 ತಿಂಗಳಿನಿಂದ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ವಿಳಾಸ ಸರಿಯಿಲ್ಲ, ಬ್ಯಾಂಕ್‌ ಖಾತೆ ಮತ್ತು ಆಧಾರ್‌ ತಾಳೆಯಾಗುತ್ತಿಲ್ಲ ಎನ್ನುತ್ತಾರೆ. ಆದರೆ ಫೆಬ್ರವರಿಯ ವರೆಗೆ ಅದೇ ದಾಖಲೆ, ಅದೇ ವಿಳಾಸ ಹೊಂದಿದ್ದ ನನ್ನ ಖಾತೆಗೆ ಹಣ ಜಮೆಯಾದದ್ದು ಹೇಗೆ ಎನ್ನುವುದು ಈ ಫ‌ಲಾನುಭವಿಯ ಪ್ರಶ್ನೆ.

ಸಮಸ್ಯೆಗಳೇನು?
ಅನೇಕ ಫಲಾನುಭವಿಗಳ ಬ್ಯಾಂಕ್‌/ ಅಂಚೆ ಖಾತೆ ಸಂಖ್ಯೆ ಸಂಗ್ರಹಿಸಿ ಕೆ-2 ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಿ, ಅದರ ಪ್ರತಿಯನ್ನು ಅಪ್‌ಲೋಡ್‌ ಮಾಡಿ ದರೂ ಖಾತೆ ಸಂಖ್ಯೆ ಸರಿಯಾಗಿಲ್ಲ ಎಂದು ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಅವರ ಖಾತೆ ಈಗ ತಾತ್ಕಾಲಿಕವಾಗಿ ಸ್ಥಗಿತ ಪಟ್ಟಿಯಲ್ಲಿ ಕಾಣುತ್ತಿದೆ. ಸರಿಯಾದ ಖಾತೆ ಸಂಖ್ಯೆ ನಮೂದಿಸಿದ್ದರೂ ಇದೇ ಸಮಸ್ಯೆ. ಖಾತೆಗೆ ಹಣ ಜಮೆಯಾಗಿದೆ ಎಂದು ತೋರಿಸಿದರೂ ಪಿಂಚಣಿ ಸಿಗದಿರುವ ಪ್ರಕರಣಗಳಿವೆ. ಕೆಲವರ ಪಿಂಚಣಿ ಸ್ಥಿತಿಯು ಅನುಮೋದನೆಗೆ ಬಾಕಿ ಇದೆ ಎಂದು ತೋರಿಸುತ್ತದೆ. ಆದರೆ ಇದು ತಂತ್ರಾಂಶದಲ್ಲಿ ಕಾಣಿಸದೆ ಐಡಿ ನಂಬರ್‌ ಹಾಕಿ ಪರಿಶೀಲಿಸಿದಾಗ ಕಾಣುತ್ತದೆ.

Advertisement

ಸಂಬಂಧಪಟ್ಟ ಅಧಿಕಾರಿಗಳಿಂದ ವಿಸ್ತೃತವಾದ ವಿವರ
ಪಡೆದು, ಮೇಲಧಿಕಾರಿಗಳಿಗೆ ಕಳುಹಿಸ ಲಾಗಿದೆ. ಈ ವೇಳೆ ಕೆಲವರ ಹೆಸರಲ್ಲಿ 2-3 ಖಾತೆಗಳಿದ್ದುದು ಬೆಳಕಿಗೆ ಬಂದಿದೆ. ಅದಕ್ಕಾಗಿ ಕೆಲವರ ಖಾತೆ ಸ್ಥಗಿತಗೊಂಡಿರಬಹುದು. ಈ ಸಮಸ್ಯೆ ತಿಂಗಳೊಳಗೆ ಪರಿಹಾರವಾಗಲಿದೆ.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

ಕೆ-2 ತಂತ್ರಾಂಶದಲ್ಲಿ
ಅಪ್‌ಲೋಡ್‌ ಮಾಡಿದ ಬಳಿಕ ಫಲಾನುಭವಿಗಳಿಗೆ ತಾಂತ್ರಿಕ ಸಮಸ್ಯೆಗಳಾಗಿದ್ದರೆ ತಹಶೀಲ್ದಾರ್‌ಗೆ ಪರಿಹರಿಸಲು ಸೂಚನೆ ನೀಡಿದ್ದೇನೆ. ಆಧಾರ್‌ ಲಿಂಕ್‌ ಆಗದಿದ್ದರೆ ಹಣ ಪಾವತಿ ಕಷ್ಟ. ಈ ತರಹ ಏನೇ ಸಮಸ್ಯೆಯಿದ್ದರೂ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next