ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಓಲಾ, ಉಬರ್ ಚಾಲಕರು, ಇ- ಕಾಮರ್ಸ್ ಸಂಸ್ಥೆಗಳ ಉತ್ಪನ್ನ ವಿತರಕರು, ಆ್ಯಪ್ ಆಧಾರಿತ ತಿಂಡಿ- ತಿನಿಸು, ಆಹಾರ ವಿತರ ಕರ ದೊಡ್ಡ ಕಾರ್ಮಿಕ ವರ್ಗವೊಂದು ರೂಪುಗೊಂಡಿದ್ದು, ಈ ವರ್ಗಕ್ಕೆ ಉದ್ಯೋಗ ಭದ್ರತೆ ಇಲ್ಲ. ಈ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಉಪ ಕಾರ್ಮಿಕ ಆಯುಕ್ತರಿಂದ ವರದಿ ಪಡೆದು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಕಾರ್ಮಿಕ ಸಂಘಟನೆಗಳು, ಉದ್ದಿಮೆದಾರರು, ಓಲಾ- ಉಬರ್, ಆ್ಯಪ್ ಆಧಾರಿತ ತಿಂಡಿ- ತಿನಿಸು ಆಹಾರ ವಿತರಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಓಲಾ- ಉಬರ್, ತಿಂಡಿ- ತಿನಿಸು ಆಹಾರ ವಿತರಕ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಸಂಸ್ಥೆ ಹಾಗೂ ಸಂಘಟನೆಗಳು ಹಲವು ಸಮಸ್ಯೆ, ಲೋಪಗಳ ಜತೆಗೆ ವಸ್ತುಸ್ಥಿತಿಯನ್ನೂ ತಿಳಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಎರಡೂ ವರ್ಗದವರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅಭಿಪ್ರಾಯ, ಸಲಹೆ ಸಂಗ್ರಹಿಸಿ ಮಾರ್ಗಸೂಚಿ ಬಗ್ಗೆ ವರದಿಯೊಂದನ್ನು ತಿಂಗಳಲ್ಲಿ ಸಲ್ಲಿಸುವಂತೆ ಉಪ ಕಾರ್ಮಿಕ ಆಯುಕ್ತರಿಗೆ ಸೂಚಿಸಲಾಗಿದೆ. ಆ ವರದಿ ಪಡೆದು ಸಾಮಾಜಿಕ ಭದ್ರತೆ ಕಲ್ಪಿಸುವ ನಟ್ಟಿನಲ್ಲಿ ಮಾರ್ಗ ಸೂಚಿ ರೂಪಿಸಲಾಗುವುದು ಎಂದು ಹೇಳಿದರು. ಕೆಲ ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಎಲ್ಲೆಂದರಲ್ಲಿ ಇಳಿಸಿ ಹೋಗುವುದು. ಇತರೆ ಕೆಲ ಘಟನಾವಳಿಗಳಿಂದ ಮಹಿಳೆಯರು ಕ್ಯಾಬ್ ಬಳಸಲು ಹಿಂದೇಟು ಹಾಕುವ, ಭಯ ಪಡುವ ಸ್ಥಿತಿ ನಿರ್ಮಾಣವಾದಂತಾಗಿದೆ. ಈ ಬಗ್ಗೆಯೂ ಪರಿಶೀಲಿಸಿ ಸೂಕ್ತ ನಿಯಂತ್ರಣ ಮಾರ್ಗ ಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ತ್ರಿಪಕ್ಷೀಯ ಪದ್ಧತಿ ಮರು ಜಾರಿ: 9 ರಾಷ್ಟ್ರೀಯ ಸಂಘಟನೆಗಳು ಹಾಗೂ ಗಾರ್ಮೆಂಟ್ಸ್, ಕಟ್ಟಡ ನಿರ್ಮಾಣ ಸೇರಿ ಮೂರು ಕ್ಷೇತ್ರಗಳ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು “ಮಾಲೀಕ, ಕಾರ್ಮಿಕ ಹಾಗೂ ಸರ್ಕಾರ’ವನ್ನು ಒಳಗೊಂಡ ತ್ರಿಪಕ್ಷೀಯ ಪದ್ಧತಿಯನ್ನು ಮರು ಜಾರಿಗೊಳಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಮಿಕ ಸಂಘಟನೆಗಳಿಗೂ ಸರ್ಕಾರದಿಂದ ಮಾನ್ಯತೆ ನೀಡುವ ವ್ಯವಸ್ಥೆ ತರಬೇಕು ಎಂಬ ಮನವಿಗೂ ಸ್ಪಂದಿಸ ಲಾಗಿದ್ದು, ಮಾನ್ಯನೆ ಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಉದ್ದಿಮೆದಾರರ ಸಭೆಯಲ್ಲಿ ಕಂಪೆನಿಗಳಲ್ಲಿ ರಾತ್ರಿಪಾಳಿಯಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸಲು ಹಾಗೂ ಯಂತ್ರೋಪಕರಣಗಳ ನಿರ್ವ ಹಣೆಯಲ್ಲಿ ತೊಡಿಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಅದರಲ್ಲೂ ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ ನಿರ್ಧರಿಸ ಲಾಗುವುದು ಎಂದರು. ಸಭೆಯಲ್ಲಿ ಬಾಷ್, ಟಯೋಟ, ಅಕ್ಸೆಂಚರ್, ಶೋಭಾ ಡೆವಲಪರ್, ಕ್ರೆಡಾಯ್, ಎಫ್ಕೆಸಿಸಿಐ, ಸಿಐಐ, ನ್ಯಾಸ್ಕಾಂ ಇತರೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಉಪಸ್ಥಿತರಿದ್ದರು.
2 ಕೋಟಿ ಅಸಂಘಟಿತ ಕಾರ್ಮಿಕರು: 2011ರ ಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 2 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ ಎಂಬ ಮಾಹಿತಿ ಇದೆ. ಇಷ್ಟು ದೊಡ್ಡ ಕಾರ್ಮಿಕ ಸಮೂಹಕ್ಕೆ ರಕ್ಷಣೆ ನೀಡುವ ಜತೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ನವೆಂಬರ್ ಎರಡನೇ ವಾರದಲ್ಲಿ ಗಾರ್ಮೆಂಟ್ಸ್ ಕ್ಷೇತ್ರ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಆರ್ಥಿಕ ಹಿಂಜರಿಕೆ ಲಕ್ಷಣದಿಂದಾಗಿ ತೊಂದರೆಯಾಗುತ್ತಿರುವ ಎಂಎಸ್‌ಎಂಇ ವಲಯದ ಸಂಘಟನೆಗಳು ಗಮನ ಸೆಳೆದಿದ್ದು, ಸರ್ಕಾರದಿಂದ ಸ್ಪಂದನೆ ಸಿಗಬೇಕು ಎಂದು ಮನವಿ ಮಾಡಿವೆ. ಈ ಬಗ್ಗೆ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಿ ಸಾಧ್ಯವಾದರೆ ಒಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಲು ಚಿಂತಿಸಲಾಗುವುದು.
-ಎಸ್.ಸುರೇಶ್ ಕುಮಾರ್, ಸಚಿವ