Advertisement

ಶಿಕ್ಷಣದಿಂದ ಸಮಾಜ ಪ್ರಗತಿ ಸಾಧ್ಯ: ಬಿರಾದಾರ

03:03 PM Sep 04, 2017 | |

ರಾಯಚೂರು: ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ರಂಗದಲ್ಲೂ ಸಾಧನೆ ಮಾಡಲು ಶಿಕ್ಷಣ ಅಗತ್ಯ. ಕುರುಬ ಸಮಾಜದವರು
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು ಎಂದು ಧಾರವಾಡ ಕೃಷಿ
ವಿವಿ ಉಪ ಕುಲಪತಿ ಡಿ.ಬಿ. ಬಿರಾದಾರ ಹೇಳಿದರು.

Advertisement

ಜಿಲ್ಲಾ ಕುರುಬರ ಸಂಘ ಹಾಗೂ ಕುರಬರ ನೌಕರರ ಸಂಘದ ಆಶ್ರಯದಲ್ಲಿ ನಗರದ ರಂಗಮಂದಿರದಲ್ಲಿ ರವಿವಾರ
ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸಾಧಿಸುವವರಿಗೆ ಸಮಾಜದ ಬೆಂಬಲವಿದೆ ಎನ್ನಲು ಈ ಕಾರ್ಯಕ್ರಮ ಸಾಕ್ಷಿ.
ಸರ್ಕಾರಿ ಶಾಲೆಗಳು ಕೀಳೆಂಬ ಭಾವನೆ ಸಲ್ಲದು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿ ಉನ್ನತ ಶಿಕ್ಷಣ ಪಡೆದ ಸಾಕಷ್ಟು ಮಹನೀಯರಿದ್ದಾರೆ. ಕುರುಬ ಸಮಾಜ ಕೂಡ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಸಮಾಜದ ಪ್ರಗತಿಗೆ ಪೂರಕವಾಗಿ ಸಮಾಜದ ಪ್ರತಿಯೊಬ್ಬರು ಉದಾರ ಮನೋಭಾವ ಹೊಂದಬೇಕು. ಅಂದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುವಲ್ಲಿ ಸಂದೇಹವಿಲ್ಲ ಎಂದರು. 

ಚಿದಾನಂದ ಗುರುವಿನ ವಿಶೇಷ ಉಪನ್ಯಾಸ ನೀಡಿ, ಸಮಾಜದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ದೃಢ ಸಂಕಲ್ಪದಿಂದ ಶ್ರಮಿಸಿದರೆ, ಗುರಿ ತಲುಪುವುದು ಖಚಿತ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಹೊಣೆ ಪಾಲಕರ ಮೇಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಶ್ರಮ ವಹಿಸಿದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ
ಗೌರವಿಸಲಾಯಿತು. ಸಮಾಜಕ್ಕೆ ಭೂದಾನ ಮಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ
ಕೆ.ಪಂಪಾಪತಿ ಅವರನ್ನು ಸನ್ಮಾನಿಸಲಾಯಿತು. 

Advertisement

ತಿಂಥಿಣಿ ಬ್ರಿಡ್ಜ್ ಕಾಗಿನೆಲೆ ಗುರುಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಗಬ್ಬೂರಿನ ಸಿದ್ಧಯ್ಯತಾತ ಗುರುವಿನ, ಸಿಂಧನೂರಿನ ಶ್ರೀ ನಂಜುಂಡಯ್ಯ ಗುರುವಿನ, ಮಟಮಾರಿಯ ಶ್ರೀ ಶಿವಾನಂದ ಮಠದ ಜ್ಞಾನಾನಂದ ಸ್ವಾಮೀಜಿ, ಪಂಚಮುಖೀ ಗಾಣಧಾಳದ ಶ್ರೀ ಲಕ್ಷ್ಮಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸುವರ್ಣಮುಖ ಸಂಸ್ಕೃತಿ ಧಾಮದ ಡಾ| ಅಮೇರಿಕ ಎಂ.ನಾಗರಾಜ, ವೈದ್ಯಕೀಯ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಜಿ.ಚಂದ್ರಶೇಖರ, ಜಿಲ್ಲಾ ಸಹಕಾರಿ ಬ್ಯಾಂಕ್‌ ಸ್ಥಾಪಕ ಸಿ.ಎನ್‌ ರಾಜು ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next