Advertisement

ಅಂಚೆ ಕಚೇರಿಯಲ್ಲಿ ಸಾಮಾಜಿಕ ಪಿಂಚಣಿ ವ್ಯವಸ್ಥೆ

05:01 PM Apr 21, 2020 | Suhan S |

ಹಾವೇರಿ: ಕೋವಿಡ್‌-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ವಿಶೇಷವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆ ಸನ್ನದ್ಧವಾಗಿದ್ದು, ಗ್ರಾಮೀಣ ಜನತೆ ಹತ್ತಿರದ ಅಂಚೆ ಇಲಾಖೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

Advertisement

ಗ್ರಾಮೀಣ ಜನತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಇತರೆ ಬ್ಯಾಂಕಿನ ವ್ಯವಹಾರಗಳು ಅಂದರೆ ಹಣ ಹಿಂಪಡೆಯುವುದು, ಬ್ಯಾಲೆನ್ಸ್‌ ವಿಚಾರಣೆ, ಖಾತೆ ವ್ಯವಹಾರದ ವಿಚಾರಣೆಯನ್ನು ಹತ್ತಿರದ ಅಂಚೆ ಕಚೇರಿ ವಿಶೇಷವಾಗಿ ಗ್ರಾಮೀಣ ಅಂಚೆ ಕಚೇರಿಗಳ ಪೋಸ್ಟ್‌ ಮಾಸ್ಟರ್‌, ಗ್ರಾಮೀಣ ಅಂಚೆ ಸೇವಕರಿಗೆ ತಿಳಿಸಿದಲ್ಲಿ ಅವರು ತಮ್ಮ ಮನೆಗೆ ಬಂದು ಹಣ ಪೂರೈಸುವರು. ಆಧಾರ್‌ ನಂಬರ್‌, ಖಾತೆ ನಿರ್ವಹಿಸುವ ಬ್ಯಾಂಕಿನ ನಂಬರ್‌, ಮೊಬೈಲ್‌ ನಂಬರ್‌ ಮತ್ತು ಖಾತೆದಾರರ ಬೆರಳಚ್ಚು ನೀಡಬೇಕಾಗುತ್ತದೆ. ಎಲ್ಲ ದಾಖಲೆಗಳ ಪರಿಶೀಲನೆ ಖಚಿತತೆ ಆಧಾರ ಪ್ರಮಾಣಿಕರಿಸಿ ನಂತರ ಸೂಚಿಸಿದ ನಗದನ್ನು (ಗರಿಷ್ಠ 10,000ರೂ.ವರೆಗೆ) ರಾಷ್ಟ್ರೀಕೃತ ಬ್ಯಾಂಕ್‌ನಿಂದ ಹಿಂಪಡೆಯಬಹುದು ಎಂದು ತಿಳಿಸಿದ್ದಾರೆ.

ಸರ್ಕಾರ ಗ್ರಾಮೀಣ ಜನರಿಗೆ ವಿವಿಧ ಯೋಜನೆಗಳನ್ನು ಬ್ಯಾಂಕ್‌ ಮುಖಾಂತರ ನೀಡುತ್ತಿದ್ದು, ಜನರು ಎಟಿಎಂ ಹಾಗೂ ಬ್ಯಾಂಕ್‌ಗಳಿಗೆ ತಿರುಗಾಡದೇ ಗ್ರಾಮೀಣ ಪೋಸ್ಟ್‌ ಆಫೀಸ್‌, ಪೋಸ್ಟ್‌ಮನ್‌ಗೆ ಫೋನ್‌ ಮೂಲಕ ಅಥವಾ ಮೌಖೀಕವಾಗಿ ತಿಳಿಸಿ ಹಣಕಾಸಿನ ವ್ಯವಹಾರ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಅಂಚೆ ಕಚೇರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next