ಕೆ.ಆರ್.ಪೇಟೆ: ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ದಲಿತ ಕುಟುಂಬವೊಂದಕ್ಕೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಬದುಕಲು ಅಗತ್ಯವಾಗಿ ಬೇಕಾದ ಕುಡಿಯುವ ನೀರು, ಬೀದಿದೀಪ, ರಸ್ತೆ ವ್ಯವಸ್ಥೆಯನ್ನು ಬಂದ್ ಮಾಡಿದ್ದಾರೆ.
ಗ್ರಾಮದ ಕೆಲವು ಜನರ ಒತ್ತಡದಿಂದ ಮೂಲಸೌಕರ್ಯಗಳನ್ನು ಒದಗಿಸದೇ ಅಮಾನವೀಯವಾಗಿ ನಡೆದು ಕೊಳ್ಳುತ್ತಿರುವ ತೆಂಡೇಕೆರೆ ಗ್ರಾಪಂ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ನಮಗೆ ಬದುಕಲು ಅಗತ್ಯ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ತೆಂಡೇಕೆರೆ ಗ್ರಾಮದ ದಲಿತ ಕುಟುಂಬವೊಂದರ ಸದಸ್ಯರು ರಾಜ್ಯ ಎಸ್ಸಿ-ಎಸ್ಟಿ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ತಮಗಾಗುತ್ತಿರುವ ಸಮಸ್ಯೆಗಳು ಹಾಗೂ ನೋವನ್ನು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ನೀಡಿದ ದೂರಿನ ಪ್ರತಿ ಬಿಡುಗಡೆಗೊಳಿಸಿ ಮಾತನಾಡಿದ ತೆಂಡೇಕೆರೆ ಗ್ರಾಮದ ಸಿ.ರಾಮಸ್ವಾಮಿ, ಪರಿಶಿಷ್ಟ ಜಾತಿಗೆ ಸೇರಿದ ನಾವು ಗ್ರಾಮದಲ್ಲಿ ನಮ್ಮ ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಆದರೆ, ಅಕ್ಕಪಕ್ಕದವರು ವಿನಾಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.
ನಮ್ಮ ಮನೆಗೆ ಹೋಗಲು ಇರುವ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಕಲ್ಲುದಿಂಡುಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಹಾಕಿದ್ದಾರೆ. ಇದರಿಂದ ಮನೆಗೆ ಹೋಗಲು ತೀವ್ರ ತೊಂದರೆಯಾಗುತ್ತದೆ. ಜೊತೆಗೆ ನಮ್ಮ ಮನೆಗೆ ಜೆಜೆಎಂ ವತಿಯಿಂದ ಹಾಕಲಾಗಿದ್ದ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಹರಿಸಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.
ಭಾರತಿ ರಾಮಸ್ವಾಮಿ, ಮಕ್ಕಳಾದ ಆರ್.ಅಮುದಾವೇಣಿ, ಆರ್. ಪದ್ಮಾವತಿ ಇದ್ದರು.