ಸಾಮಾಜಿಕ ಜಾಲತಾಣ ಯಾರು ಉಪಯೋಗಿಸುತ್ತಿಲ್ಲ ಹೇಳಿ..? ಸಾಮಾಜಿಕ ಮಾಧ್ಯಮ ಅಂದಾಕ್ಷಣ ಲೈಕ್, ಕಮೆಂಟ್, ಶೇರ್‌ಗಳ ಮಾತೇ ಬರುತ್ತದೆ. ಆದರೆ ಅದರ ಹೊರತಾಗಿಯೂ ಬೇರೆ ಏನನ್ನೋ ಹುಡುಕುವ, ಅಲ್ಲಿಂದಲೇ ಜ್ಞಾನ ಸಂಪಾದಿಸುವ ಮಾರ್ಗವೊಂದಿದೆ.
ಹೌದು ಬೇರೆ ಯಾವ ದೇಶದಲ್ಲಿ ಏನಾಯಿತು? ಅಪರೂಪದ ಸಂಗತಿಗಳು, ನೀವು ಯಾವ ವಿಷಯವನ್ನು ಹೆಚ್ಚಾಗಿ ಶೋಧಿಸಿರುತ್ತೀರೋ ಅದೇ ಪದೇ ಪದೇ ನಿಮ್ಮ ವಾಲ್ಗಳಲ್ಲಿ ಬಂದು ಮಾಹಿತಿಗಳು ಕಾಣ ಸಿಗುತ್ತದೆ. ಇದಕ್ಕೂ ಶಿಕ್ಷಣಕ್ಕೂ ಏನು ಸಂಬಂಧವೆಂದು ಪ್ರಶ್ನಿಸಿದರೆ ಅದಕ್ಕೆ ಉತ್ತರವಿದೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕ ಪಠ್ಯೇತರ ಚಟುವಟಿಕೆಗಳು, ವಿಭಿನ್ನ ತಂತ್ರಜ್ಞಾನಗಳು, ಹೊಸ ಮಾದರಿಯ ಅನ್ವೇಷಣೆಗಳು, ಸಾಧಕರ ಮಾಹಿತಿಗಳು, ನೀವು ಎಂದಿಗೂ ನೋಡಿರದಂತಹ ಕ್ರೀಯಾಶೀಲ ವೀಡಿಯೋಗಳು ಇವೆಲ್ಲಾ ಬಂದು ಬೀಳುವುದು ನೀವು ತೋರಿಸುವ ಆಯ್ಕೆಯ ಆಸಕ್ತಿಯ ಮೇಲೆ. ನೀವು ಉತ್ತಮ ಫೋಟೋಗ್ರಾಫರ್ ಆಗಿದ್ದರೆ, ನೀವೊಬ್ಬ ಚಲನಚಿತ್ರ ನಿರ್ದೇಶಕನಾಗಲು ಬಯಸುವುದಾದರೆ ಈ ಸಾಮಾಜಿಕ ಜಾಲತಾಣ ಅದನ್ನು ನೋಡುವಂತೆ ಪ್ರೇರೇಪಿಸುತ್ತದೆ. ಲಕ್ಷ ಲಕ್ಷ ರೂ. ಕೊಟ್ಟು ಕೋರ್ಸ್ ಮಾಡಲಾಗದವರಿಗೆ ಇವತ್ತು ಸಾಮಾಜಿಕ ಜಾಲತಾಣಗಳಲ್ಲೇ ಕಲಿಯಬಹುದು. ಉದಾಹರಣೆಗೆ ಇವತ್ತು ರಾಜ್ ಬಿ.ಶೆಟ್ಟಿ ಯಂತಹ ನಿರ್ದೇಶಕರು ಹುಟ್ಟಿದ್ದು ಇದೇ ಸಾಮಾಜಿಕ ಜಾಲತಾಣಗಳಿಂದ ಬರುವ ಮಾಹಿತಿಗಳನ್ನೇ ಪಡೆದು. ಬೇರೆ ಬೇರೆ ಕ್ಷೇತ್ರಗಳಲ್ಲಿ ಇದೇ ರೀತಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮೇಲೆ ಬಂದ ಜನರಿದ್ದಾರೆ.
ಸಾಮಾಜಿಕ ಜಾಲತಾಣಗಳು ಸಕರಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಅದು ನಾವು ಬಳಸುವ ಮತ್ತು ನಮ್ಮ ಆಸಕ್ತಿ ಆಧಾರದ ಮೇಲೆ ನಿಂತಿದೆ. ಕಲಿಕೆಗೆ ಒಂದು ಉತ್ತಮ ಮಾಧ್ಯಮವಾಗಿಯೂ ಸಾಮಾಜಿಕ ಜಾಲತಾಣ ಕೆಲಸ ಮಾಡುವುದಕ್ಕೆ ಅದೆಷ್ಟೋ ಉದಾಹರಣೆಗಳಿವೆ.
ವಿಶ್ವಾಸ್ ಅಡ್ಯಾರ್