ಸಾಮಾಜಿಕ ಜಾಲತಾಣ ಇಂದು ಜನರ ಬದುಕಿನ ಒಂದು ಭಾಗವಾಗಿದೆ. ಸಾಮಾಜಿಕ ಜಾಲತಾಣದ ಹಲವಾರು ಕೆಡುಕು ಒಳಿತುಗಳನ್ನು ನಾವು ಕಾಣಬಹುದಾಗಿದೆ. ಈ ಜಾಲತಾಣ ಜಗತ್ತಿನ ಮೂಲೆ-ಮೂಲೆಗಳ ವಿಚಾರಗಳನ್ನು ಅಂಗೈಯಲ್ಲಿ ನೋಡಲು ಸಾಧ್ಯವಾಗುವ ಒಂದು ಜಾಲಬಂಧ.
ಎಲ್ಲ ಮಾಹಿತಿ ವಿಚಾರಗಳನ್ನು ಒಳಗೊಂಡ ಈ ಮಾಧ್ಯಮಗಳು ಜನರಿಗೆ ಅತೀವ ಆಕರ್ಷಣೆ ಮತ್ತು ಆಸಕ್ತಿಯನ್ನು ಭರಿಸುತ್ತವೆ. ತಮ್ಮ ಪ್ರಾತಿನಿತ್ಯದ ಚಟುವಟಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಕಾತುರ. ಇದರ ಪರಿಣಾಮವಾಗಿ ತಮ್ಮ ನಿಯಂತ್ರಣವನ್ನು ತಾವೇ ಇದರ ಕೈಗೆ ಒಪ್ಪಿಸುತ್ತಾರೆ. ಸಾಮಾಜಿಕ ಜಾಲತಾಣವು ಯಾವುದೇ ಒಬ್ಬ ವ್ಯಕ್ತಿಯನ್ನು ಅಟ್ಟಕ್ಕೇರಿಸಲೂಬಹುದು, ಪಾತಾಳಕ್ಕೂ ತಳ್ಳಬಹುದು.
ಇನ್ನೂ ಈಗಿನ ವಿಡಿಯೋ, ರೀಲ್ಸ್ ಗಳಿಗೂ ಜನರು ಬೇಗ ಆಕರ್ಷಿತರಾಗುತ್ತಿದ್ದಾರೆ. ದುರಂತವೇನೆಂದರೆ, ಈಗಿನ ಜನರಿಗೆ ಗಂಟೆಗಟ್ಟಲೆಯ ವಿಡಿಯೋಗಳನ್ನು ನೋಡುವಷ್ಟು ತಾಳ್ಮೆ, ಸಹನೆ ಇರದ ಕಾರಣ ಒಂದೆರಡು ನಿಮಿಷಗಳ ವಿಡಿಯೋ ಗಳನ್ನೇ ನಿಜವೆಂದು ಅಂದುಕೊಳ್ಳುತ್ತಾರೆ.ಇಂತಹ ಸೂಕ್ಷ್ಮ ವಿಚಾರಗಳು ಜನರ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತವೆ. ಸಾಮಾಜಿಕ ಜಾಲತಾಣ ಹೇಗೆಂದರೆ ಜನರು ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಮೊದಲು ಮಾಧ್ಯಮಗಳು ಅರ್ಥಮಾಡಿಕೊಳ್ಳುತ್ತವೆ. ಉದಾಹರಣೆಗೆ ಇನ್ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನಮಗೆ ಆಸಕ್ತಿಯಿರುವ ವಿಚಾರಗಳು ಯಾವುದೆಂದು ಅದೇ ತಿಳಿಸುತ್ತವೆ. ಇದು ಸಾಮಾಜಿಕ ಜಾಲತಾಣ ಜನರ ಮನಸ್ಸನ್ನು ಅರ್ಥಮಾಡಿಕೊಂಡ ರೀತಿ.
ಇಷ್ಟಲ್ಲದೇ ರಾಜಕೀಯವಾಗಿ, ಸಾಮಾಜಿಕವಾಗಿ ನೋಡುವುದಾದರೆ, ತಮ್ಮ ಸ್ವಾರ್ಥ ಉದ್ದೇಶಕ್ಕೆ ಇದನ್ನು ಅಸ್ತ್ರವಾಗಿ ಬಳಸುವವರೇ ಹೆಚ್ಚು ಎಂಬುದೇ ಒಂದು ದುರಂತ. ಸಾಮಾಜಿಕ ಜಾಲತಾಣದಿಂದ ಉಂಟಾದ ಪ್ರೇಮ – ಪ್ರಣಯಗಳ ಅಂತ್ಯದಲ್ಲಾದ ಮೋಸ, ಅನ್ಯಾಯಗಳಂತಹ ಅನಾಹುತಗಳು ಕಣ್ಣೆದುರಿಗೆ ಬರುತ್ತವೆ. ಟೆಲಿಕಾಂ ಕಂಪೆನಿಗಳ ಲಾಭವನ್ನು ತಪ್ಪಿಸುವ ಒಳನೋಟದ ಉದ್ದೇಶದಿಂದ ದಿನದ ಡೇಟಾ ಖಾಲಿಯಾಗುವರೆಗೂ ಮಲಗದ ವ್ಯಕ್ತಿಗಳೇ ಹೆಚ್ಚು.
ಆದರೆ ಇವೆಲ್ಲದರ ಮಧ್ಯೆ ಅವುಗಳ ಒಳಿತುಗಳನ್ನು ನಾವು ಹುಡುಕುವುದಾದರೆ, ಪ್ರಾರಂಭದಲ್ಲೇ ಹೇಳುವಂತೆ ಸಾಮಾಜಿಕ ಜಾಲತಾಣ ಜಗತ್ತನ್ನೇ ಅಂಗೈಯಲ್ಲಿ ಇಟ್ಟುಕೊಂಡಂತೆ. ಇದರಿಂದ ಅಪಾರವಾದ ಜ್ಞಾನವನ್ನು ಪಡೆದುಕೊಳ್ಳಬಹುದು ಆದರೆ, ಮಾಹಿತಿ ಸ್ವೀಕರಿಸುವ ರೀತಿ ಸರಿಯಾಗಿದ್ದರೆ ಮಾತ್ರ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕೂಡ ಒಂದು ನಿಮಿಷದಲ್ಲಿ ನಮ್ಮ ಗೆಳೆಯರನ್ನಾಗಿಸುವ ಶಕ್ತಿ ಸಾಮಾಜಿಕ ಜಾಲತಾಣಕ್ಕೆ ಇವೆಯಾದರೂ ನಮ್ಮ ವಿವೇಚನೆ ಕಾರ್ಯಗತವಾಗಿದ್ದರೆ ಮಾತ್ರ ನಮ್ಮ ಆಯ್ಕೆ ಉತ್ತಮವಾಗಿರಲು ಸಾಧ್ಯ.
ಯಾವುದೇ ಒಂದು ವಿಚಾರವನ್ನಾದರೂ ನಾವು ಕಣ್ಣಾರೆ ಕಂಡರೂ, ಕಿವಿಯಾರೇ ಕೇಳಿದರು ಸಹ ಅವುಗಳನ್ನು ನಂಬುವ ಮೊದಲು ನಮ್ಮ ವಿವೇಚನೆಯ ತರ್ಕಕ್ಕೆ ಒಪ್ಪಿಸಬೇಕು.
ಈ ಆಧುನಿಕ ಜಗತ್ತಿನಲ್ಲಿ ನಾವು ಹೊಂದಿಕೊಳ್ಳಬೇಕಾದರೆ ಸಾಮಾಜಿಕ ಜಾಲತಾಣದೊಂದಿಗೆ ನಾವು ಹೊಂದಿಕೊಳ್ಳಲೇಬೇಕು ಆದರೆ, ಅವುಗಳನ್ನು ಸಮತೋಲನದಲ್ಲಿ ನಿಭಾಯಿಸಬೇಕು. ಆಧುನಿಕತೆ ನಮ್ಮ ಬದುಕಿನ ಭಾಗವಾಗಬೇಕೇ ಹೊರತು, ಆಧುನಿಕತೆಯೇ ಬದುಕಾಗಬಾರದು. ನಮ್ಮ ವಿವೇಚನೆ ನಮ್ಮ ಜತೆಗಿದ್ದರೆ ನಮ್ಮ ನಿಯಂತ್ರಣ ನಮ್ಮಲ್ಲಿಯೇ ಇರುತ್ತದೆ. ಹೀಗೆ, ಸಾಮಾಜಿಕ ಜಾಲತಾಣ ಜನರ ಮೇಲೆ ಪ್ರಭಾವ ಬೀರುತ್ತವೆ.
ನಿಕ್ಷಿತಾ, ಮರಿಕೆ
ಸ.ಪ.ದ. ಮಹಿಳಾ ಕಾಲೇಜು
ಪುತ್ತೂರು