Advertisement
ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ಏನೇ ಆರೋಪಗಳಿರಲಿ ಇದೀಗ ಕೇರಳ- ಕೊಡಗು ಜಲಪ್ರಳಯ ಸಂದರ್ಭದಲ್ಲಿ ಅವುಗಳಿಂದಾದ ಪ್ರಯೋಜನ ಗಮನಾರ್ಹ. ಯಾವುದೇ ಮನೆ, ದ್ವೀಪ, ನಡುಗಡ್ಡೆ, ಬೆಟ್ಟ, ಬಯಲಲ್ಲಿ ಸಿಕ್ಕಿಹಾಕಿಕೊಂಡ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು, ಸಿಕ್ಕಿ ಹಾಕಿಕೊಂಡ ಜಾಗವನ್ನು ಜಿಲ್ಲಾಡಳಿತಕ್ಕೋ ಇತರ ರಿಗೋ ಸಂದೇಶ ಕಳಿಸಿ ಪಾರಾದ ನೂರಾರು ಉದಾಹರಣೆಗಳಿವೆ. ತೆಂಗಮಾರು, ಪಾಲ್ಗಾಟ್ ಮುಂತಾದ ಕಡೆ ಸಿಕ್ಕಿಹಾಕಿಕೊಂಡ ನತದೃಷ್ಟರು ನೇರವಾಗಿ ಕೇರಳದ ಚಾನೆಲ್‌ಗಳಿಗೆ ವಾಟ್ಸ್‌ಆ್ಯಪ್ ಮೂಲಕ ದೃಶ್ಯ ಸಂದೇಶ ಕಳುಹಿಸಿದಾಗ ಅದನ್ನು ಮನೋರಮಾ, ಮಾತೃಭೂಮಿಗಳಂಥ ವಾಹಿನಿಗಳು ಸ್ಥಳೀಯ ಎಸಿ, ಡಿಸಿಗಳಿಗೆ ತಿಳಿಸಿ ಆಡಳಿತಾಂಗ ಆ ಜಾಗಕ್ಕೆ ಹೆಲಿಕಾಪ್ಟರ್ ಕಳಿಸಿ ಸಿಕ್ಕಿಹಾಕಿಕೊಂಡವರನ್ನು ಪಾರು ಮಾಡಿದ್ದೂ ಆಗಿದೆ. ರೇಂಜ್ ಇರುವ ಕಡೆ ಮೊಬೈಲ್‌ನಲ್ಲಿ ಚಾರ್ಜ್ ಇರುವಷ್ಟು ಹೊತ್ತು ಇದು ಸಾಧ್ಯವಾಗಿದೆ. ಮೊಬೈಲ್ ವ್ಯಾಪ್ತಿ ಮೀರಿ ನಿರ್ಜನವಾಗಿ ಉಳಿ ಯುವ ಅಂಥ ಜಾಗಗಳು ಕೊಡಗು-ಕೇರಳದಲ್ಲಿಲ್ಲ ಎನ್ನಲಾಗದು. ಆದರೆ ಅಂಥ ವ್ಯಾಪ್ತಿ ಸೀಮಿತ.
Related Articles
Advertisement
ಜೋಡುಪಾಲದ ಗೃಹಿಣಿಯೊಬ್ಬರು ಜಲಕಂಟಕದಿಂದ ಹೇಗೋ ಪಾರಾಗಿ ಸುಳ್ಯದ ಗಂಜಿ ಕೇಂದ್ರವೊಂದರಲ್ಲಿದ್ದಾರೆ. ಅವರ ಒಬ್ಬಳೇ ಮಗಳು ಬೆಂಗಳೂರಲ್ಲಿ. ಆಕೆ ಉದ್ಯೋಗದಲ್ಲಿ ರುವುದು ಯಾವ ಕಂಪೆನಿಯಲ್ಲಿ? ಆಕೆಯ ಪಿ.ಜಿ. ಎಲ್ಲಿ? ಮೊಬೈಲ್ ನಂಬರ್ ಯಾವುದು ಒಂದೂ ತಾಯಿಗೆ ಗೊತ್ತಿಲ್ಲ. ಅಮ್ಮನಿಗೆ ಗೊತ್ತಿರಲಿ ಎಂದು ಮಗಳು ಗೋಡೆಯ ಮೇಲೆ ಬರೆದಿಟ್ಟು ಹೋಗಿದ್ದಾಳೆ. ಆ ಮನೆ, ಗೋಡೆ, ಕಪಾಟಿನಲ್ಲಿರುವ ಈ ಅಮ್ಮನ ಮೊಬೈಲ್ ಉಳಿದಿದೆಯಾ ಗೊತ್ತಿಲ್ಲ. ಯಾರೋ ಸ್ನೇಹಿತರು ಅಮ್ಮನಿಂದ ಮಗಳ ಹೆಸರು ಕೇಳಿ ಪತ್ತೆ ಮಾಡಿ ಎಂದು ಬೆಂಗಳೂರಿನ ನಾಗರಿಕರಿಗೆ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಹಾಕಿದ್ದಾರೆ.
ವ್ಯಾಪ್ತಿ ತಪ್ಪಿದ, ಸಂಬಂಧ – ಊರು ತಪ್ಪಿ ಕಳೆದು ಹೋದ ಎಷ್ಟೋ ಕುಟುಂಬಿಕರು, ಊರವರು ಬರೀ ಜಾಲತಾಣಗಳ ಮೂಲಕ ಬದುಕಿರುವ, ನೆಲೆ ಇರುವ ತಾಣಗಳ ಸಾಕ್ಷಿ, ಗುರುತು ಕೊಡುತ್ತಿದ್ದಾರೆ. ದುಬೈಯಲ್ಲಿರುವ ಕೇರಳಿಗ, ಜಮ್ಮುವಿನಲ್ಲಿರುವ ಕೊಡಗು ಮೂಲದ ಯೋಧ, ಬೆಂಗಳೂರಿನಲ್ಲಿರುವ ಮಡಿಕೇರಿಯ ನಟಿ ಇವರೆಲ್ಲಾ ತನ್ನೂರವರಿಗೆ ಸಹಾಯ ಯಾಚಿಸಿದ್ದಕ್ಕೆ ಲೋಕದ ಜನ ಸ್ಪಂದಿಸುವ ರೀತಿ ಮನುಷ್ಯ ಇನ್ನೂ ಕೆಟ್ಟಿಲ್ಲ, ಮಾನವೀಯತೆ ಉಳಿದಿದೆ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ಇಷ್ಟಾದರೂ ಕೊಡಗಿನಲ್ಲಿ ಇನ್ನೂ ನಿರಾಶ್ರಿತರು ನಡುಗಡ್ಡೆಗಳಲ್ಲಿ ದಿಕ್ಕಿಲ್ಲದೆ ಉಳಿದಿರುವ ಸಾಧ್ಯತೆ ತುಂಬಾ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ – ವೈದ್ಯಕೀಯ ಕಾಲೇಜು ಗಳಿಲ್ಲದ ಕೊಡಗಿನ ಸಾಕಷ್ಟು ವಿದ್ಯಾರ್ಥಿ ಯುವ ಸಮುದಾಯ ಕಲಿಕೆಗಾಗಿ ಜಿಲ್ಲೆಯಿಂದ ಹೊರಗಿದೆ. ವಯಸ್ಸಾದ ತಂದೆ ತಾಯಿ, ಅಜ್ಜ ಅಜ್ಜಿಯರನ್ನುಳಿದು ಕೆಲವು ಮನೆಗಳಲ್ಲಿ ಬೇರೆ ಯಾವುದೇ ಹಿರಿಯರಿಲ್ಲ. ಓದುವ ಮಕ್ಕಳು ಮಂಗಳೂರು, ಪುತ್ತೂರು, ಮೈಸೂರು, ಬೆಂಗಳೂರುಗಳಲ್ಲಿದ್ದಾರೆ. ಇಂಥವರೊಂದಿಗೆ ಸಂಪರ್ಕ ಸಾಧ್ಯವಾಗದೆ ಬೆಟ್ಟ ಗುಡ್ಡಗಳ ಸಂದಿ, ನಡುಗಡ್ಡೆಗಳಲ್ಲಿ ಇನ್ನೂ ಉಳಿದಿರುವ ಸಾಧ್ಯತೆಗಳಿವೆ. ಮಾಧ್ಯಮದ ಕ್ಯಾಮೆರಾ, ಪತ್ರಕರ್ತನ ಕಣ್ಣು, ಜಾಲತಾಣಗಳ ದೃಷ್ಟಿ ತಾಗದ ಜಾಗ ಕೇರಳಕ್ಕಿಂತ ಕೊಡಗಿನಲ್ಲಿ ಹೆಚ್ಚಿರುವ ಸಾಧ್ಯತೆ ಇದೆ. ಇಲ್ಲೆಲ್ಲಾ ವೈಮಾನಿಕ ಸಮೀಕ್ಷೆಗಳೇ ನಿರಾಶ್ರಿತರನ್ನು ಪತ್ತೆ ಹಚ್ಚುವ ದಾರಿ. ಕೊಡಗು-ಕೇರಳ ಜಲಪೀಡಿತರ ನೋವು ಈ ಲೋಕದ ಎಲ್ಲರ ನೋವಾಗಿ ಬದಲಾಗಲು, ಎಲ್ಲರೂ ಅತ್ಯಂತ ವೇಗವಾಗಿ ಸ್ಪಂದಿಸಲು ಸಾಧ್ಯವಾದುದರಲ್ಲಿ ಸಾಮಾಜಿಕ ಮಾಧ್ಯಮಗಳ ಪಾಲು ಹಿರಿದಾದುದು ಎಂದು ಗಮನೀಯ ಮತ್ತು ಅಭಿವಂದನೀಯ.
ನರೇಂದ್ರ ರೈ ದೇರ್ಲ