ತಿರುವನಂತಪುರಂ: ಒಂದೇ ಹೆಸರಿನ ಜನಪ್ರಿಯ ವ್ಯಕ್ತಿಗಳು ಹಲವರಿದ್ದಾಗ ಗೊಂದಲ ಉಂಟಾಗುವುದು ಸಹಜ. ಅದರಲ್ಲೂ ಸೋಷಿಯಲ್ ನೆಟ್‌ವರ್ಕ್‌ನಲ್ಲಿ ಈ ಸಮಸ್ಯೆ ವಿಪರೀತ. ಇಂಥದ್ದೊಂದು ಪ್ರಮಾದ ಮಾಡಿಕೊಂಡು ಕೇರಳದ ಸಿಪಿಎಂ ಬೆಂಬಲಿಗರು ನಗೆಪಾಟಲಿಗೀಡಾಗಿದ್ದಾರೆ. ಶುಕ್ರವಾರ ಅಂತಾರಾಷ್ಟ್ರೀಯ ಸಂಸ್ಥೆ ಮೂಡೀಸ್, ಭಾರತದ ಆರ್ಥಿಕ ಶ್ರೇಣಿಯನ್ನು ಏರಿಸಿದ ಸುದ್ದಿಯನ್ನು ಓದಿದ ತಕ್ಷಣ ಫೇಸ್‌ಬುಕ್‌ನ ಮೂಡಿಗಾಗಿ ನೆಟ್ಟಿಗರು ಹುಡುಕಾಡಿದ್ದಾರೆ.
ಆಗ ಆಸ್ಟ್ರೇಲಿಯಾದ ಕ್ರಿಕೆಟರ್ ಟಾಮ್ ಮೂಡಿ ಖಾತೆ ಸಿಕ್ಕಿದೆ. ಇದೇ ಮೂಡಿಯೇ ಮೋದಿ ಸರ್ಕಾರಕ್ಕೆ ರೇಟಿಂಗ್ ಕೊಟ್ಟಿದ್ದು ಎಂದು ಭಾವಿಸಿ ಸಿಪಿಎಂ ಕಾರ್ಯಕರ್ತರು ಮೂಡಿಗೆ ಬೈಗುಳಗಳ ಸುರಿಮಳೆಗೈದಿದ್ದಾರೆ.
ಮೋದಿ ಸರ್ಕಾರಕ್ಕೆ ರೇಟಿಂಗ್ ಹೆಚ್ಚಿಸಿರುವುಕ್ಕೆ ನಾಚಿಕೆಯಾಗಬೇಕು. ಒಮ್ಮೆ ಕೇರಳ ಬಂದು ನೋಡಿ ಎಂದೆಲ್ಲ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಕೆಲವರು ಮೋದಿಯಿಂದ ಹಣ ಪಡೆದು ಹೀಗೆಲ್ಲ ವರದಿ ಕೊಟ್ಟಿದ್ದೀರಿ ಎಂದೂ ಆರೋಪಿಸಿದ್ದಾರೆ. ಇನ್ನೂ ಕೆಲವರಿಗೆ ತಾವು ಬೈದ ನಂತರ ತಪ್ಪು ಗೊತ್ತಾಗಿ, ಮೂಡಿ ಬಳಿ ಕ್ಷಮೆಯನ್ನೂ ಕೋರಿದ್ದಾರೆ.
ಎಲ್ಲಕ್ಕಿಂತ ತಮಾಷೆಯ ಸಂಗತಿಯೆಂದರೆ, ಟಾಮ್ ಮೂಡಿ ಫೇಸ್‌ಬುಕ್ ಪೇಜ್ ನೋಡಿಯೇ ಬಹುಶಃ ತಿಂಗಳುಗಳೇ ಕಳೆದಿವೆ. ಯಾಕೆಂದರೆ ಅಕ್ಟೋಬರ್ 4ರಂದು ಹುಟ್ಟುಹಬ್ಬದ ವಿಶ್ ಮಾಡಿದ ಅಭಿಮಾನಿಗಳಿಗೆ ವಂದನೆ ತಿಳಿಸಿದ ನಂತರ, ಫೇಸ್‌ಬುಕ್‌ನಲ್ಲಿ ಯಾವ ಕಮೆಂಟ್, ಪೋಸ್ಟ್ ಮಾಡಿಲ್ಲ. ಒಂದೊಮ್ಮೆ ಫೇಸ್‌ಬುಕ್‌ಗೆ ಲಾಗಿನ್ ಆಗಿದ್ದರೆ ಮೋದಿ ವಿರೋಧಿಗಳಿಂದಾಗಿ ಮೂಡ್ ಕೆಡುತ್ತಿತ್ತು!