Advertisement

ಸೋಶಿಯಲ್‌ ಮೀಡಿಯಾ ಕಮೆಂಟ್ಸ್‌ ! ಕೊಲ್ಲಿ ಕೆಲಸಕ್ಕೆ ಕುತ್ತು

10:31 AM Apr 30, 2020 | sudhir |

ಮಂಗಳೂರು: ಅರಬ್‌ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಸಾವಿರಾರು ಮಂದಿ ಭಾರತೀಯರು ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಬರಹಗಳಲ್ಲಿನ ಆಕ್ಷೇಪಾರ್ಹ ಬರಹಗಳ ಕಾರಣ ದಿಂದಲೂ ಉದ್ಯೋಗ ಕಳೆದುಕೊಳ್ಳುವ ಆತಂಕ ಉಂಟಾಗಿದೆ.

Advertisement

ಕೋವಿಡ್ ಸಂದರ್ಭ ಕೆಲವು ಅನಿವಾಸಿ ಭಾರತೀಯರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿರುವುದು, ಇನ್ನು ಕೆಲವರು ವಿವೇಚನೆ ರಹಿತವಾಗಿ ಫಾರ್ವರ್ಡ್‌ ಇಲ್ಲವೆ ಶೇರ್‌ ಮಾಡಿರುವ ಬಗ್ಗೆ ಅಲ್ಲಿನ ಆಡಳಿತ, ಕಂಪೆನಿಗಳಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಕುವೈಟ್‌ನಲ್ಲಿ ಕೆಲವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖಂಡರ ಮನವಿ
ಕತಾರ್‌, ಸೌದಿ ಅರೇಬಿಯಾ, ದುಬಾೖ, ಒಮನ್‌ ರಾಷ್ಟ್ರಗಳಲ್ಲಿರುವ ಕೆಲವು ಮಂದಿ ಉದ್ಯೋಗಿಗಳಲ್ಲಿ ಇದು ಆತಂಕಕ್ಕೆ ಕಾರಣವಾಗಿದೆ. ಅಲ್ಲಿನ ಸರಕಾರವು ಭಾರತೀಯ ಉದ್ಯೋಗಿ, ನಿವಾಸಿಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಬಂದಿದೆಯಾದರೂ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವ ಕೆಲವು ಸಂದೇಶ, ಟೀಕೆಗಳ ವಿರುದ್ಧ ಕಠಿನ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಾಗಾಗಿ ಭಾರತೀಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಯಾವುದೇ ರೀತಿಯ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ನೀಡಬಾರದು ಎಂದು ಅನಿವಾಸಿ ಭಾರತೀಯ ಮುಂದಾಳುಗಳು ಮನವಿ ಮಾಡಿಕೊಂಡಿದ್ದಾರೆ.

6,000 ಮಂದಿ ಭಾರತಕ್ಕೆ
ಕುವೈಟ್‌ನಲ್ಲಿ ಕೋವಿಡ್ ಲಾಕ್‌ಡೌನ್‌ (ಕರ್ಫ್ಯೂ) ಸೇರಿದಂತೆ ವಿವಿಧ ಕಾರಣಗಳಿ ಗಾಗಿ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದ (ಆಮ್ನೆಸ್ಟಿ ನೋಂದಾಯಿತ) ಭಾರತೀಯರನ್ನು ಭಾರತಕ್ಕೆ ವಾಪಸ್‌ ಕರೆತರಲು ಭಾರತ ಸರಕಾರ ಮತ್ತು ಕುವೈಟ್‌ ನಡುವೆ ಒಪ್ಪಂದವಾಗಿದ್ದು ಅದರಂತೆ ಮೇ 5ರ ವೇಳೆಗೆ ಸುಮಾರು 6,000 ಮಂದಿಯನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ. ಆಮ್ನೆಸ್ಟಿ ಸೆಂಟರ್‌ಗಳಲ್ಲಿರುವವರನ್ನು ಸರಕಾರವೇ ನೋಡಿಕೊಳ್ಳುತ್ತಿದೆ. ಇದೇ ರೀತಿಯ ಅವಕಾಶವನ್ನು ಶ್ರೀಲಂಕಾದ ಪ್ರಜೆಗಳು ಕೂಡ ಪಡೆದುಕೊಂಡಿದ್ದಾರೆ ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅಧಿಕೃತ ಆದೇಶ ಬಂದಿಲ್ಲ
“ಆಮ್ನೆಸ್ಟಿ’ ನೋಂದಣಿಯಾದವರನ್ನು ಭಾರತಕ್ಕೆ ಕರೆತರುವ ಬಗ್ಗೆ ಭಾರತ ಅಥವಾ ಕುವೈಟ್‌ ಸರಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ದಾಖಲೆ ಇಲ್ಲದವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶೀಘ್ರ ನಡೆಯಬಹುದೆಂಬ ನಿರೀಕ್ಷೆ ಇದೆ.
– ಸಿಬಿ ಯು.ಎಸ್‌., ಸೆಕೆಂಡ್‌ ಸೆಕ್ರೆಟರಿ, ಭಾರತೀಯ ರಾಯಭಾರ ಕಚೇರಿ, ಕುವೈಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next