ಉಡುಪಿ: ಮಕ್ಕಳಲ್ಲಿ ಬೆಳೆಯುತ್ತಿರುವ ಅಪರಾಧಗಳನ್ನು ಹತ್ತಿಕ್ಕುವುದು ಸಮಾಜ, ಸರಕಾರ, ನ್ಯಾಯಾಂಗ ಕಾರ್ಯಾಂಗಗಳ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಜೂ. 29ರಂದು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸ ಲಾದ ವಿವಿಧ ಕಾಮಗಾರಿಗಳಾದ ನಿಟ್ಟೂರು ಸರಕಾರಿ ವೀಕ್ಷಣಾಲಯ, ಬಾಲನ್ಯಾಯ ಮಂಡಳಿಯ ನೂತನ ಕಟ್ಟಡ, ಜಿಲ್ಲಾ ಬಾಲಭವನದ ಬಯಲು ರಂಗಮಂಟಪ, ಮಕ್ಕಳ ಆಟದ ಉದ್ಯಾನವನ ಹಾಗೂ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆಯ ಮೂಲಕ ಮಣಿಪಾಲದಲ್ಲಿ ನಿರ್ಮಾಣಗೊಂಡ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಕೆಲ ಮಕ್ಕಳು ಇಂದು ದಾರಿ ತಪ್ಪಿ ಕೆಡುತ್ತಿದ್ದಾರೆ. ಬಾಲಾಪರಾಧಿ ಗಳಾಗುತ್ತಿದ್ದಾರೆ. ಅವರನ್ನು ಸಕಾಲದಲ್ಲಿ ಗುರುತಿಸಿ ತಿಳಿಹೇಳಿ ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮ ಸರಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ವಿಶ್ವಸಂಸ್ಥೆಯ ಆಶಯದಂತೆ ಬಾಲಾಪರಾಧ ತಡೆಯಬೇಕು. ಬಾಲಾಪರಾಧಿಗಳನ್ನು ಸಮರ್ಪಕವಾಗಿ ನೋಡಿಕೊಳ್ಳಬೇಕು. ಮುಂದೆ ಸಮಾಜದಲ್ಲಿ ಅವರು ಸತ್ ಪ್ರಜೆಯಾಗಿ ಬಾಳಲು ಸಹಾಯಮಾಡಬೇಕೆಂದು ಉಡುಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾ.ವೆಂಕಟೇಶ್ ನಾಯ್ಕ ಹೇಳಿದರು.
ಬಾಲ ನ್ಯಾಯ ಮಂಡಳಿಯ ಅಧ್ಯಕ್ಷರಾದ ನ್ಯಾ. ವಿವೇಕಾನಂದ ಪಂಡಿತ್, ಸದಸ್ಯ ಕಾರ್ಯದರ್ಶಿ ನ್ಯಾ. ಲಲಿತಾ, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಉಡುಪಿ ನಗರಸಭೆಯ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಹರೀಶ್ ಗಾಂವಕರ್, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಚಂದ್ರ ರಾಜೇ ಅರಸು ವಂದಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.