ಕೋವಿಡ್ ವೈರಸ್ ಬಂದ ಮೇಲೆ ಜಗತ್ತಲ್ಲಿ ಏನೆಲ್ಲ ಬದಲಾಗುತ್ತೋ ಬಿಡುತ್ತೋ ಗೊತ್ತಿಲ್ಲ ತಂತ್ರಜ್ಞಾನ ವ್ಯವಸ್ಥೆಯಂತೂ ದಿನೇ ದಿನೇ ಬದಲಾಗುತ್ತಾ, ಇದ್ದದ್ದಕ್ಕೆ ಹೊಸತನವನ್ನು ಸೇರಿಸುತ್ತಾ ಸಾಗುತ್ತಿದೆ. ಈಗಿನ ಹಲವು ಅವಿಷ್ಕಾರಗಳಂತೂ ಕೋವಿಡ್ ಹೋರಾಟವಾಗಿಯೂ ದಾಖಲಾಗಿದೆ. ಕೊರೊನಾ ವೈರಸ್ ವಿರುದ್ಧದ ಹೊರಾಟದಲ್ಲಿ ಪೂರಕವಾಗಿರುವ ಹಲವು ತಂತ್ರಜ್ಞಾನಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಎಷ್ಟೇ ದಿನ ಲಾಕ್ ಡೌನ್ ಹಾಕಿದ್ದರೂ ಒಂದಲ್ಲ ಒಂದು ದಿನ ಕಾರ್ಮಿಕರು ಕೆಲಸದ ನೊಗ ಹೊರಲೇಬೇಕು. ಇದಕ್ಕೆ ಯಾವ ಕಂಪೆನಿಯೂ ಹೊರತಲ್ಲ.
ಲಾಕ್‌ಡೌನ್ ಅನ್ನು ಸರಾಗಗೊಳಿಸುವ ಕ್ರಮಗಳಿಗಿಂತ ಮುಂಚಿತವಾಗಿ, ನಿರ್ಮಾಣದಂತಹ ಕ್ಷೇತ್ರಗಳಲ್ಲಿನ ಕಾರ್ಮಿಕರು ಸಹೋದ್ಯೋಗಿಗಳಿಂದ ಸುರಕ್ಷಿತ ದೂರವನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುವ ಮಾನಿಟರಿ ಸಾಧನವನ್ನು ಸ್ಕಾಟಿಷ್ ಟೆಕ್ ಸಂಸ್ಥೆಯೊಂದು ಮರುರೂಪಿಸಿದೆ.
ಈಡೆನ್ಬರ್ಗ್ ಮೂಲದ ರಿಯಾಕ್ಟೆಕ್ ಅಭಿವೃದ್ಧಿಪಡಿಸಿದ ಮಣಿಕಟ್ಟಿನಲ್ಲಿ ಧರಿಸುವ ಉಪಕರಣವು ಪ್ರಸ್ತುತ ಜಾರಿಯಲ್ಲಿರುವ ಎರಡು ಮೀಟರ್ ಸಾಮಾಜಿಕ ದೂರವಿಡುವ ನಿಯಮಗಳನ್ನು ಉಲ್ಲಂಘಿಸಿದ್ದರೆ ಕಾರ್ಮಿಕರನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ.
ಬ್ಲೂಟೂತ್ ಬಳಸಿ, ಕಾರ್ಮಿಕರು ಪರಸ್ಪರ ಎರಡು ಮೀಟರ್‌ಗಿಂತ ಹತ್ತಿರದಲ್ಲಿದ್ದರೆ ಮಾನಿಟರ್ ಟ್ರ್ಯಾಕ್ ಮಾಡಿ, ಸಾಮಾಜಿಕ ದೂರವಿಡುವ ನಿಯಮಗಳನ್ನು ಮುರಿಯಲಾಗಿದೆ ಎಂದು ಸಾಧನವನ್ನು ಧರಿಸಿರುವವರನ್ನು ಎಚ್ಚರಿಸುವ ಸಲುವಾಗಿ ಮಾನಿಟರ್ ಕಂಪಿಸುತ್ತದೆ.
ಸಾಮಾಜಿಕ ಅಂತರ ಪಾಲನೆಯು ಸ್ವಲ್ಪ ಸಮಯದವರೆಗೆ ನಮ್ಮೊಂದಿಗೆ ಇರುತ್ತದೆ. ಮತ್ತೆ ಕೆಲಸದ ಒತ್ತಡದಲ್ಲಿ ಅದನ್ನು ಮರೆತು ಬಿಡುತ್ತೇವೆ. ಅದಕ್ಕಾಗಿ ಈ ಸಾಧನವನ್ನು ತಯಾರಿಸಲಾಗಿದೆ ಎಂದು ರಿಯಾಕ್ಟೆಕ್‌ನ ಮುಖ್ಯ ಕಾರ್ಯನಿರ್ವಾಹಕ ಜಾಕ್ವಿ ಮೆಕ್‌ಲಾಫ್ಲಿನ್ ಹೇಳುತ್ತಾರೆ.
ಸದ್ಯಕ್ಕೆ ರೈಲ್ವೇ ಸೇವೆಯಲ್ಲಿರುವವರಿಗೆ ಇಂತಹ ಮಾನಿಟರ್‌ಗಳನ್ನು ಒದಗಿಸಲಾಗಿದ್ದು, 45,000ಕ್ಕಿಂತಲೂ ಹೆಚ್ಚು ಸಾಧನಗಳನ್ನು ಈಗಾಗಲೇ ಯುಕೆನಾದ್ಯಂತದ ಕಂಪೆನಿಗಳು ಖರೀದಿಸಿ ಕಾರ್ಮಿಕರಿಗೆ ಹಸ್ತಾಂತರಿಸಿವೆ.