Advertisement

ಸಾಮಾಜಿಕ ಅಂತರ- ವೈಯಕ್ತಿಕ ಸ್ವಚ್ಛತೆ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಿ: ರವಿ

01:31 PM May 19, 2020 | mahesh |

ಚಿಕ್ಕಮಗಳೂರು: ಸರ್ಕಾರದ ನಿಯಮ- ನಿರ್ದೇಶನಗಳನ್ನು ಪಾಲಿಸುವ ಮೂಲಕ ರಂಜಾನ್‌ ಹಬ್ಬ ಆಚರಿಸುವಂತೆ ಸಚಿವ ಸಿ.ಟಿ. ರವಿ ಮುಸ್ಲಿಂ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು. ಸೋಮವಾರ ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಂಜಾನ್‌ ಹಬ್ಬದ ಆಚರಣೆ ಕುರಿತು ಜಿಲ್ಲೆ ಮತ್ತು ತಾಲೂಕು ಮುಸ್ಲಿಂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಂಜಾನ್‌ ಮಾಸ ಉಪವಾಸದಿಂದ ಆತ್ಮನಿವೇದನೆ ಮಾಡಿಕೊಳ್ಳುವ ಸಮಯ. ಆದರೆ, ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸಿ ಜನರ ಸಂಭ್ರಮ ಕಸಿದುಕೊಂಡಿದೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಉತ್ಸವ, ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದ್ದು ಜನರ ನಂಬಿಕೆಗೆ ತೊಂದರೆ ಮಾಡುವ ಉದ್ದೇವಿಲ್ಲ ಎಂದರು.

Advertisement

ಎಲ್ಲಾ ಸಮುದಾಯದವರ ಸಹಕಾರದಿಂದ ಜಿಲ್ಲೆ ಹಸಿರು ವಲಯದಲ್ಲಿ ಉಳಿದಿದೆ. ಇದಕ್ಕೆ ಜನರ ಸಹಕಾರವೇ ಕಾರಣ. ಸೋಂಕಿನ ಬಗ್ಗೆ ಜನರು ಭಯಪಡುವುದು ಬೇಡ. ಆದರೆ, ಮುಂಜಾಗ್ರತೆ
ವಹಿಸಿ ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.

ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬವನ್ನು ಪರಿಸ್ಥಿತಿಗೆ ಅನುಗುಣವಾಗಿ ಸ್ವಯಂ ನಿರ್ಧಾರ ತಗೆದುಕೊಂಡು ಹಬ್ಬ ಆಚರಿಸಬೇಕಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೊರಡಿಸುವ ಅನುಮತಿ ಹಾಗೂ ನಿರ್ದೇಶನದಂತೆ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಲ್ಲಿ ಸರ್ಕಾರದ ನಿರ್ದೇಶನಗಳನ್ನು
ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆಚರಿಸಬೇಕು. ಅನುಮತಿ ಸಿಕ್ಕದಿದ್ದ ಸಂದರ್ಭದಲ್ಲಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ನಿಮ್ಮ ಸುತ್ತಮುತ್ತ ಪ್ರದೇಶದಲ್ಲಿ ಹೊರ ರಾಜ್ಯದಿಂದ ವ್ಯಕ್ತಿಗಳು ಬಂದಿದ್ದರೆ ಜಿಲ್ಲಾಡಳಿತಕ್ಕೆ ತಿಳಸಬೇಕು. ಆಗ ಅವರನ್ನು ಕ್ವಾರಂಟೈನ್‌ನಲ್ಲಿಡಲು ಸಹಕಾರಿಯಾಗುತ್ತದೆ.
ಕೊರೊನಾ ಸೋಂಕು ಎದುರಿಸಲು ಜಿಲ್ಲಾಡಳಿತ ಸಲಕ ಸಿದ್ಧತೆ ಮಾಡಿಕೊಂಡಿದೆ. ಸೋಂಕು ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ ಎಂದರು. ಮುಸ್ಲಿಂ ಸಮುದಾಯದ ಮುಖಂಡ ಮೂಡಿಗೆರೆ ಶೇಖ ಅಹಮದ್‌ ಮಾತನಾಡಿ, ಈ ಸಂದರ್ಭದಲ್ಲಿ ಕೋವಿಡ್ ಸೋಂಕು ತಡೆಗಟ್ಟುವುದು ಅಗತ್ಯ ಎಂದರು. ಕಡೂರು ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರೊಬ್ಬರು
ಮಾತನಾಡಿ, 50ರಿಂದ100 ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಉಪ್ಪಳ್ಳಿಯ ಯೂಸೂಫ್‌ ಹಾಜಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಸಚಿವ ಸಿ.ಟಿ. ರವಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮದುವೆ- ಸಮಾರಂಭ ನಡೆಸಲು ಅವಕಾಶವಿಲ್ಲ, 50  ಜನರೊಳಗೊಂಡು ಮನೆಯಲ್ಲೇ ಆಚರಿಸಬಹುದು. ಹಸಿರು ವಲಯದ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಬರಲು ಅನುಮತಿ ಇದ್ದು ಕೆಂಪು ವಲಯದ ವ್ಯಕ್ತಿಗಳಿಗೆ ಕಡ್ಡಾಯ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು. ಉಪ್ಪಳ್ಳಿಯ ಸಾಹೀರ್‌ ಅಲಿ ಮಾತನಾಡಿ, ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹೊಸಬಟ್ಟೆಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಹಬ್ಬ ಮುಗಿಯುವ ವರೆಗೂ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ಅಂಗಡಿಗಳನ್ನು ಮುಚ್ಚುವುದು ಒಳ್ಳೆಯದು ಎಂದು ಅಭಿಪ್ರಾಯ
ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹರೀಶ್‌ ಪಾಂಡೆ ಮಾತನಾಡಿ, ರಂಜಾನ್‌ ಆಚರಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದ್ದು ಅಂತಿಮ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದಾಗ ಅದರ ನಿರ್ದೇಶನದಂತೆಯೇ ಆಚರಣೆಗೆ ಅನುಮತಿ ನೀಡಲಾಗುವುದು ಎಂದರು.

Advertisement

ಕೋವಿಡ್ ಸೋಂಕು ತಡೆಗಟ್ಟಲು ಪ್ರತಿಯೊಬ್ಬರೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಹೊರ ರಾಜ್ಯದಿಂದ ಹೆಚ್ಚಿನ ಕೊರೊನಾ ಪ್ರಕರಣ ಕಂಡು ಬಂದ ರಾಜ್ಯಗಳಿಂದ ಬಂದವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ, ಡಿವೈಎಸ್‌ಪಿ ಬಿ.ಎಸ್‌. ಅಂಗಡಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next