ದಾವಣಗೆರೆ: ಬಿಜೆಪಿ ವೈದ್ಯ ಪ್ರಕೋಷ್ಠದವರು ವೈದ್ಯಕೀಯ ಸೇವೆಮಾಡುವ ಜೊತೆಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಪಿ. ಅರುಣ್‌ಕುಮಾರ್ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಂದು ಉತ್ತಮವಾಗಿ ಕೆಲಸಮಾಡುತ್ತಿದೆ. ಸಮಾಜದ ಪ್ರತಿಯೊಬ್ಬರ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಯೋಜನೆ ಘೋಷಿಸಿ, ಅವನ್ನು ಪರಿಣಾಮಕಾರಿ ಆಗಿ ಜಾರಿ ಸಹ ಮಾಡುತ್ತಿದ್ದಾರೆ.
ಇವನ್ನು ಜನರಿಗೆ ತಲುಪಿ ಎಂದರು. ಸರ್ಕಾರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡುವ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗಬೇಕು.ವೈದ್ಯರಿಗೆ ಮನುಷ್ಯರ ಆರೋಗ್ಯ ಕಾಪಾಡುವ ಜೊತೆಗೆ ಸಮಾಜದ ಸ್ವಾಸ್ಥÂ ಕಾಪಾಡಲು ರಾಜಕೀಯವಾಗಿ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ, ಮೇಕ್ ಇನ್ ಇಂಡಿಯಾ, ಚಿನ್ನ ನಗದೀಕರಣ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆಮಾಡಿದ್ದಾರೆ.
ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡಲು ಕ್ರಮ ಸಹ ಕೈಗೊಂಡಿದ್ದಾರೆ ಎಂದರು. ಇಂದು ನಡೆಯುತ್ತಿರುವ ವೈದ್ಯಕೀಯಪ್ರಕೋಷ್ಠದ ಕಾರ್ಯಕಾರಿಣಿಯಲ್ಲಿ ವೈದ್ಯರುಗಳು ಉತ್ತಮ ನಿರ್ಣಯ ಕೈಗೊಳ್ಳಿ. ಪಕ್ಷ ಸಂಘಟನೆಗೆ ಅನುಕೂಲ ಆಗುವಂತಹ ವಿಚಾರಗಳನ್ನು ಮಂಡಿಸಿ, ಚರ್ಚೆ ನಡೆಸಿ ಎಂದು ತಿಳಿಸಿದರು.
ಪರಿಸರ ಮತ್ತು ಮಾಲಿನ್ಯ ಮಂಡಳಿ ಮಾಜಿ ಅಧ್ಯಕ್ಷ ಡಾ| ವಾಮನಾಚಾರ್ಯ, ಪ್ರಕೋಷ್ಠ ಜಿಲ್ಲಾ ಸಂಚಾಲಕ ಡಾ| ಮಂಜುನಾಥ ಗೌಡ, ರಾಜ್ಯ ಮುಖಂಡರಾದಡಾ| ಬಸವರಾಜ, ಡಾ| ಪದ್ಮ ಪ್ರಕಾಶ ಇತರು ವೇದಿಕೆಯಲ್ಲಿದ್ದರು. ಚುನಾವಣೆ ಮೂಲಕ ರಾಷ್ಟ್ರೀಯ ಸಲಹಾ ಮಂಡಳಿ ಮತ್ತು ರಾಷ್ಟ್ರೀಯವೈದ್ಯಕೀಯ ಆಯೋಗಗಳ ಸದಸ್ಯತ್ವದಲ್ಲಿ ವೈದ್ಯ ವೃಂದದವರನ್ನು ಸೇರ್ಪಡೆ ಮಾಡಲು ಕ್ರಮ ವಹಿಸಬೇಕು. ಚುನಾವಣೆ ಮೂಲಕ ವೈದ್ಯಕೀಯ ಪ್ರಕೋಷ್ಠಕ್ಕೆ ಪದಾಧಿಕಾರಿಗಳನ್ನು ನೇಮಿಸಬೇಕು ಎಂಬ ಎರಡು ನಿರ್ಣಯಗಳನ್ನು ಡಾ| ಪ್ರಶಾಂತ್ ಮಂಡಿಸಿದರು.