Advertisement

ಶಿಕ್ಷಣದಿಂದ ಸಮಾಜ ಅಭಿವೃದ್ಧಿ ಸಾಧ್ಯ: ಆಚಾರ್‌

06:28 PM Feb 28, 2022 | Team Udayavani |

ಕೊಪ್ಪಳ: ಗಾಣಿಗ ಸಮಾಜವು ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕುವ ಸಮಾಜವಾಗಿದೆ. ಈ ಸಮಾಜವು ಸರ್ವಾಂಗ ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಹಾಗಾಗಿ ಪ್ರತಿ ಮನೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ನಗರದ ಗಾಣಿಗ ಸಮುದಾಯ ಭವನದ ಉದ್ಘಾಟನೆ, ಗಾಣದ ಕಣ್ಣಪ್ಪ ಅನಾವರಣ, ಕಳಸಾರೋಹಣ, ವಿದ್ಯಾ ವಿಕಾಸ ಸಂಕೀರ್ಣ ಶಿಲಾನ್ಯಾಸ ಸಮಾರಂಭ ಹಾಗೂ ಜಿಲ್ಲಾಮಟ್ಟದ ಗಾಣಿಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಗಾಣಿಗ ಸಮಾಜಕ್ಕಾಗಿ ಜಿಲ್ಲೆಯ ಹಲವು ಗಣ್ಯರು ಹಗಲಿರುಳು ಶ್ರಮಿಸಿದ್ದಾರೆ. ನನಗೆ ರಾಜಕೀಯ ಆಸಕ್ತಿ ಹೆಚ್ಚು ಇದ್ದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದವನು. ಲಕ್ಷ¾ಣ ಸವದಿ ಒಡನಾಟ ಬೆಳೆದು ಅವರ ಪ್ರೇರಣೆಯಿಂದ ನಾನು ರಾಜಕೀಯಕ್ಕೆ ಬಂದೆನು. ಈ ಸಮಾಜವು ನನಗೆ ದೊಡ್ಡ ಕೊಡುಗೆ ನೀಡಿದೆ. ಸಮಾಜದವರು ಮುಂದೆ ಬರಬೇಕಾದರೆ ಮೊದಲು ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಿದೆ. ಗ್ರಾಮೀಣ ಭಾಗದಲ್ಲಿನ ಕಟ್ಟಕಡೆಯ ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕಿದೆ. ಹಿಂದುಳಿದವರಿಗೆ ಸ್ಥಿತಿವಂತರು ನೆರವಾದರೆ ಅವರು ಮುಂದೆ ಬರಲು ಸಾಧ್ಯವಾಗಲಿದೆ ಎಂದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಗಾಣಿಗ ಸಮಾಜವು ನಂಬಿಗಸ್ಥ ಸಮಾಜ. ಈ ಸಮಾಜ ಬೆಳೆಸುವ ಕಾರ್ಯ ಸ್ವಾಮೀಜಿಗಳದ್ದು. ಸಮಾಜಕ್ಕೆ ಒಂದು ಸಂದೇಶ ನೀಡಿ ನಾವೆಲ್ಲ ಒಂದಾಗಬೇಕು. ನಮ್ಮ ಸಂಘಟನೆಯಿಂದ ಇನ್ನೊಂದು ಸಮಾಜಕ್ಕೆ ನೋವಾಗಬಾರದು. ಯಾರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವರೋ ಅವರನ್ನು ಮೇಲೆಕ್ಕೆತ್ತುವ ಕೆಲಸವಾಗಬೇಕು. ನಮ್ಮ ಸಮಾಜದಲ್ಲಿ ಮುಂದುವರಿದವರೂ ಇದ್ದಾರೆ. ಹಿಂದೂಳಿದವರೂ
ಇದ್ದಾರೆ. ಸಮಾಜಕ್ಕೆ ಮೀಸಲಾತಿ ಕುರಿತು ಸಮಗ್ರ ಚರ್ಚೆಯಾಗಲಿ ಎಂದರು.

ಈ ಭಾಗದಲ್ಲಿ ಗಾಣಿಗರು ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗಾಯತ ಗಾಣಿಗರಾದರು. ಹಿಂದೂ ಗಾಣಿಗ, ಹಿಂದೂ ಲಿಂಗಾಯತ ಎನ್ನುವ ಹೆಸರೂ ಬಂದಿವೆ. ನಮಗೆ ಗಾಣಿಗ ನಿಗಮ ಸ್ಥಾಪನೆಗಿಂತಲೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಅನುದಾನಲ್ಲಿ ಶೇಕಡಾವಾರು ಹಂಚಿಕೆಯಾದರೆ ಅಭಿವೃದ್ಧಿಗೆ ಹೆಚ್ಚು ಒತ್ತು ಸಿಗಲಿದೆ. ಸಮಾಜದ ಮುಖಂಡರು ಕುಳಿತು ಅವಲೋಕನ ಮಾಡಿಕೊಂಡು ನಂತರ ನಿರ್ಧಾರ ಮಾಡಲಿ. ನಾವು ಕೇವಲ ಒಕ್ಕಲುತನದಿಂದ ಮೇಲೆ ಬರಲು ಸಾಧ್ಯವಿಲ್ಲ. ಒಕ್ಕಲುತನದ ಜೊತೆಗೆ ಇತರೆ ಕೆಲಸ ಮಾಡಿದಾಗ ಆರ್ಥಿಕ ಸ್ವಾವಲಂಬನೆ ಕಾಣಲು ಸಾಧ್ಯ. ನನ್ನ ಶರೀರದ ರಕ್ತ ಗಾಣಿಗ ಕುಲದ ರಕ್ತ. ನನ್ನ
ಸಮಾಜದ ಯಾರ ಕಣ್ಣಲ್ಲಿ ನೀರು ಬಂದರೂ ನಾನು ಅವರ ಕಣ್ಣೀರು ಹೊರೆಸುವೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದರು.

Advertisement

ಶಾಸಕ ಅಮರೇಗೌಡ ಬಯ್ನಾಪೂರ ಮಾತನಾಡಿ, ಸಮಾಜದಲ್ಲಿ ಹಿಂದುಳಿದವರು ಎನ್ನುವುದಕ್ಕಿಂತ ನಾವು ಮಾನಸಿಕವಾಗಿ ಮುಂದೆ ಬರಬೇಕು ಎನ್ನುವ ಮನಸ್ಸು ಇರಬೇಕು. ಜೀವನದಲ್ಲಿ ಛಲ ಇದ್ದರೆ, ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ದುಷcಟ ದೂರ ಮಾಡಬೇಕು ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಗಾಣಿಗ ಎನ್ನುವ ಹೆಸರು ವೃತ್ತಿಯಿಂದ ಬಂದ್ದಿದ್ದು, ಇದು ಮುಂದೆ ಜಾತಿಯಾಗಿ ಹೆಸರು ಪಡೆಯಿತು. ಗಾಣಿ ಸಮಾಜವು 3 ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಯಿತು. ಗಾಣಿಗರಲ್ಲಿ ಶೈವ,ವೈಷ್ಣವ ಸಂಸ್ಕೃತಿಯೂ ಇದೆ. ಕರ್ನಾಟಕದಲ್ಲಿ ಶೈವ ಗಾಣಿಗರು ಲಿಂಗ ಧಾರಣ ಮಾಡಿದರು. ಗಾಣಿಗ ಸಮಾಜವು ನೆರವು ನೀಡಿದ ಎಲ್ಲರ ಹೆಸರು ಸ್ಮರಿಸಿದ್ದು, ನಿಮ್ಮ ಸಂಸ್ಕಾರ ತೋರಿಸುತ್ತದೆ. ಗಾಣಿಗ ಸಮಾಜಕ್ಕೆ 2ಎ ಮೀಸಲಾತಿ ಬೇಕಿದೆ. ಇರುವಂತಹ ಗೊಂದಲ, ತಾಂತ್ರಿಕ ತೊಂದರೆ ಸರಿಪಡಿಸಬೇಕು. ಈ ದೇಶದಲ್ಲಿ ಬ್ರಾಹ್ಮಣರಿಗೆ ಶೇ. 50 ಮೀಸಲಾತಿ ಇದೆ. ಉಳಿದ ಎಲ್ಲರಿಗೂ ಶೇ. 50 ಮೀಸಲು ಇದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಸಮಾಜ ಗಾಣದಿಂದ ಎಣ್ಣೆ ತೆಗೆದು ಪ್ರತಿ ಮನೆಯನ್ನು ಬೆಳಗುವ ಸಮಾಜವಾಗಿದೆ. ಈ ಸಮಾಜ ಅಭಿವೃದ್ಧಿ ಹೊಂದಬೇಕೆಂದರೆ ಸಂಘಟನೆ, ಶಿಕ್ಷಣ, ಹೋರಾಟದಿಂದ ಸಾಧ್ಯವಿದೆ. ಈಗ ಸಮಾವೇಶ ಮಾಡಿದ್ದೀರಾ. ಇದರಿಂದ ಎಲ್ಲರ ವೈಮನಸ್ಸು ಕಡಿಮೆ ಮಾಡಿದೆ. ರಾಷ್ಟ್ರಕ್ಕೆ ಮೋದಿಯಾದರೆ ರಾಜ್ಯಕ್ಕೆ ಸವದಿಯಾಗಿದ್ದಾರೆ. ಸವದಿ ನನ್ನನ್ನು ಬಿಜೆಪಿಗೆ ಕರೆ ತಂದವರು. ನನ್ನ ಗೆಲುವಿಗೆ ಗಾಣಿಗ ಸಮಾಜ ಮೊದಲು ಬೆಂಬಲಿಸಿದೆ ಎಂದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ಮಾತನಾಡಿದರು. ಸಮಾವೇಶದಲ್ಲಿ ಕೇಶವಾನಂದ ಸ್ವಾಮೀಜಿ, ಡಾ| ಜಯ ಬಸವ ಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡ ರುದ್ರಮುನಿ ಗಾಳಿ, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಡಿಎಸ್‌ಪಿ ವೆಂಕಟಪ್ಪ ನಾಯಕ್‌, ಮಹಾಂತೇಶ ಪಾಟೀಲ್‌ ಮೈನಳ್ಳಿ, ಸಂಗನಗೌಡ ಪಾಟೀಲ್‌, ನವೀನ್‌ ಗುಳಗಣ್ಣನವರ ಸೇರಿ ಇತರರು ಉಪಸ್ಥಿತರಿದ್ದರು.

ಎಲ್ಲರ ಮನೆ ಬೆಳಗಿದ ಕೀರ್ತಿ ಈ ಸಮಾಜಕ್ಕೆ ಸಲ್ಲುತ್ತದೆ. ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕಾಗಿದೆ. ಈ ಸಮಾಜದಲ್ಲಿ ಆರ್ಥಿಕ ತೊಂದರೆಯೂ ಎದುರಿಸುತ್ತಿದೆ. ಈ ಸಮಾಜದಲ್ಲಿನ ಜನತೆ ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಕೆಲಸವಾಗಬೇಕು. ಅಂದಾಗ ಸಮಾಜ ಅಭಿವೃದ್ಧಿಯಾಗಲಿದೆ.
∙ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ

ಸಮಾಜದ ಅಭಿವೃದ್ಧಿಗೆ ಗಾಣಿಗ ಸಮುದಾಯ ಶ್ರಮಿಸುತ್ತಿದೆ. ನಾವು ಹಿಂದುಳಿದಿದ್ದೇವೆ ಎಂದು ನೊಂದು ಕುಳಿತುಕೊಳ್ಳೂವ ಬದಲಾಗಿ ನಾವು ಮುಂದೆ ಬರಬೇಕು ಎನ್ನುವ ಮನೋಭಾವ ಇರಬೇಕು. ನಿಮ್ಮ ಸಮಾಜದ ಪ್ರತಿ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಆಗಬೇಕು.
ರಾಘವೇಂದ್ರ ಹಿಟ್ನಾಳ,ಕೊಪ್ಪಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next