Advertisement

ಪತ್ರಿಕೋದ್ಯಮಕ್ಕಿದೆ ಸಮಾಜ ತಿದ್ದುವ ಶಕ್ತಿ

04:53 PM Dec 15, 2018 | |

ಚಿಕ್ಕಮಗಳೂರು: ಸ್ವಾಸ್ಥ್ಯ ಮಾಧ್ಯಮದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವರಾಜ್‌ ಅಭಿಪ್ರಾಯಪಟ್ಟರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ2018-19 ವರ್ಷಾಚರಣೆ ಅಂಗವಾಗಿ ಮೂಗ್ತಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕೋದ್ಯಮ ಶಿಕ್ಷಣ ಅರಿವು-ಅವಕಾಶ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಮಾಜದ ಕುಂದುಕೊರತೆಗಳ ನಿವಾರಣೆಗೆ ಮಾಧ್ಯಮಗಳ ಪಾತ್ರ ಅಪಾರ. ಸಮಾಜದಲ್ಲಿ ಒಳಿತನ್ನು ಪುರಸ್ಕರಿಸುವ, ಕೆಡುಕನ್ನು ದೂರೀಕರಿಸುವ ಪ್ರಕ್ರಿಯೆಯಲ್ಲಿ ಪತ್ರಿಕೋದ್ಯಮ ಮಾರ್ಗದರ್ಶಿ ಯಾಗಬೇಕು. ಸಮಾಜ ಕಟ್ಟುವ ಕಾರ್ಯದಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಭವದ ಜೊತೆಗೆ ಅಗತ್ಯ ಶಿಕ್ಷಣ, ನಿರಂತರ ಅವಲೋಕನ ಸಹಕಾರಿ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಮುಖ ತಿರುವು. ಈ ಘಟ್ಟದಲ್ಲಿ ತಿರುವುಗಳೇ ವಿಪರೀತ. ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೆ ಭವಿಷ್ಯ ಉಜ್ವಲವಾಗುತ್ತದೆ. ಕಲಾ ವಿಭಾಗದವರಿಗೆ ಪತ್ರಿಕೋದ್ಯಮ ಪದವಿ ಶಿಕ್ಷಣ ಅವಕಾಶದ ಅರಿವಿಗಾಗಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಪರಿಶ್ರಮಿಸುತ್ತಿರುವುದು ಮಾದರಿ. ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜು ಮತ್ತು ಕಳಸ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆಯಲು ಅವಕಾಶವಿದೆ ಎಂದರು.

ದಶಕಗಳ ಪತ್ರಿಕೋದ್ಯಮದ ಅನುಭವಗಳನ್ನು ಮೆಲುಕು ಹಾಕಿದ ಲೇಖಕ, ಪ್ರಗತಿಪರ ಕೃಷಿಕ ಚಂದ್ರಶೇಖರ್‌
ನಾರಣಾಪುರ ಸಂವಾದವನ್ನು ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ತಿದ್ದುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ಯಾವುದೇ
ಸರ್ಕಾರವನ್ನು ಬೀಳಿಸುವ-ಬದಲಿಸುವ ಶಕ್ತಿ ಇರುವುದು ಹಲವು ಬಾರಿ ಸಾಬೀತಾಗಿದೆ ಎಂದರು.
 
ಸಾಹಿತ್ಯ ಸಾಂಸ್ಕೃತಿಕವಾಗಿ ನಿಯತಕಾಲಿಕೆಗಳ ಕೊಡುಗೆ ಅಪಾರವಾಗಿದ್ದರೆ ಪ್ರಸ್ತುತದ ಸುದ್ದಿಸಮಾಚಾರಗಳನ್ನು ದಿನಪತ್ರಿಕೆಗಳು ಒದಗಿಸುತ್ತಿವೆ. ಗಾಂಧೀಜಿ ಸೇರಿದಂತೆ ಹಲವು ಮಹನೀಯರು ಪತ್ರಿಕೆಗಳನ್ನು ನಡೆಸಿದವರು. ವಿದ್ಯಾರ್ಥಿ ಯುವಜನರು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಸಕ್ತರು ಸಿದ್ಧತೆಯೊಂದಿಗೆ ಮಾಧ್ಯಮ
ಕ್ಷೇತ್ರ ಪ್ರವೇಶಿಸಲು ಈ ಕಾರ್ಯಕ್ರಮ ಪ್ರೇರಣಾದಾಯಕ. ಶ್ರದ್ಧೆ ಮತ್ತು ಆಸಕ್ತಿಯಿಂದ ತೊಡಗಿಸಿಕೊಂಡರೆ ಯಶಸ್ಸು ಖಚಿತ ಎಂದರು.

ಪ್ರಧಾನ ಉಪನ್ಯಾಸ ನೀಡಿ ಸಂವಾದ ನಡೆಸಿದ ಪತ್ರಕರ್ತ ಸುಮಂತ ನೆಮ್ಮಾರ್‌, ಪತ್ರಿಕೋದ್ಯಮ ವಿಭಾಗದಲ್ಲಿ
ಅಧ್ಯಯನ-ಸಂಶೋಧನೆ ನಡೆಸಿದವರಿಗೆ ಇಂದು ಜಾಗತಿಕಮಟ್ಟದಲ್ಲಿ ಅದ್ಭುತವಾದ ಅವಕಾಶಗಳು ಕಾದಿವೆ. ಅಗತ್ಯ ಸಿದ್ಧತೆ, ನಿರಂತರ ಅಧ್ಯಯನಶೀಲತೆ, ಓದುವ ಹವ್ಯಾಸ ಅಗತ್ಯ ಎಂದರು. 

Advertisement

ಭಾಷೆಯ ಮೇಲೆ ಹಿಡಿತ, ಬರವಣಿಗೆಯ ಕಲೆ, ಪ್ರಶ್ನಿಸುವ ಸ್ವಭಾವ, ಧೈರ್ಯ, ಸಮಯದ ಮಿತಿ ಇಲ್ಲದೆ ದಿನದ 24
ಗಂಟೆಯೂ ಕಾರ್ಯನಿರ್ವಹಿಸುವ ಸ್ವಭಾವ, ವಿಶೇಷವಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವ ಜ್ಞಾನ ಹೊಂದಿರುವ ಪತ್ರಿಕೋದ್ಯಮ ಪದವೀಧರರಿಗೆ ವಿಪರೀತ ಅವಕಾಶಗಳಿವೆ. ಪ್ರಮಾಣಪತ್ರ ಪದವಿಯ ಸಾಕ್ಷಿಯಾದರೆ ಸ್ವಭಾವ ಉದ್ಯೋಗವನ್ನು ವ್ಯಾಪಕಗೊಳಿಸುತ್ತದೆ. ಪೂರ್ವಸಿದ್ಧತೆ ಅಗತ್ಯ ಎಂದರು.

ಕರ್ನಾಟಕದ ಮುಖ್ಯವಾಹಿನಿಯಲ್ಲಿ ಎಂಟು ರಾಜ್ಯಮಟ್ಟದ ಕನ್ನಡ ಪತ್ರಿಕೆಗಳಿದ್ದು, ಸರಾಸರಿ ಕನಿಷ್ಠ 250ಮಂದಿ ಇದರಲ್ಲಿ ಕೆಲಸ ಮಾಡಲು ಬೇಕಾಗುತ್ತದೆ. 14 ಕನ್ನಡ ಸುದ್ದಿವಾಹಿನಿಗಳಿದ್ದು ಪ್ರತಿಯೊಂದಕ್ಕೂ 300ಕ್ಕೂ ಹೆಚ್ಚು ಪತ್ರಕರ್ತರ ಅವಶ್ಯಕತೆ ಇದೆ. ಮೂರುಹೊಸ ಸುದ್ದಿವಾಹಿನಿ ಆರಂಭಕ್ಕೆ ಸಿದ್ಧತೆ ನಡೆಸಿದೆ. ದಿನೇ ದಿನೇ ಪತ್ರಿಕೆ-ವಾಹಿನಿಗಳು ಹೆಚ್ಚಾಗುತ್ತಲೇ ಹೋಗತ್ತದೆಯೆ ಹೊರತು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ಹಿಂದೆ ಆಕಾಶವಾಣಿ ಮಾತ್ರ ಇದ್ದು ಮೂರು ವರ್ಷಗಳಿಂದ ನೂರಾರು ಎಫ್‌ಎಂ ಕೇಂದ್ರಗಳು ಆರಂಭಗೊಂಡಿವೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಇಂದು ವ್ಯಾಪಕವಾಗುತ್ತಿವೆ. ಫೇಸ್‌ ಬುಕ್‌, ವಾಟ್ಸ್‌ಅಪ್‌, ವೆಬ್‌ ಪತ್ರಿಕೋದ್ಯಮ ವಿಪರೀತ ಬೆಳೆಯುತ್ತಿದ್ದು ಬುದ್ಧಿವಂತಿಕೆ ಕೌಶಲ್ಯಕ್ಕೆ ಮಾಧ್ಯಮ ರಂಗದಲ್ಲಿ ಒಳ್ಳೆಯ ಅವಕಾಶಗಳಿವೆ. ಲಕ್ಷಾಂತರ ರೂ.ಆದಾಯ ಪಡೆಯುತ್ತಿರುವ ಉದಾಹರಣೆಯು ವಿಫುಲವಾಗಿದೆ. ಪತ್ರಿಕೋದ್ಯಮ ಶಿಕ್ಷಣ ಪರಿಣಾಮಕಾರಿಯಾಗಲು ಪ್ರತಿಷ್ಠಾನ ಕಾರ್ಯಪ್ರವೃತ್ತವಾಗಿದೆ ಎಂದರು.  ಶಿವಣ್ಣ ಸ್ವಾಗತಿಸಿ, ಬೆಳವಾಡಿ ಮಂಜುನಾಥ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next