ಬೆಂಗಳೂರು: ಸಂಗೀತ ಯಾರನ್ನು ಬೇಕಾದರೂ ತನ್ನತ್ತ ಆಕರ್ಷಿಸುತ್ತದೆ. ಜತೆಗೆ ಸಮಾಜವನ್ನು ಬದಲಿಸುವ ಶಕ್ತಿಯೂ ಸಂಗೀತಕ್ಕಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದ್ದಾರೆ.
ಶ್ರೀರಾಮಸೇವಾ ಮಂಡಳಿ ಟ್ರಸ್ಟ್ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಗಾಯಕ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ ಅವರಿಗೆ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.
ಸಂಗೀತ ಮನುಷ್ಯನಲ್ಲಿ ಮಹತ್ವದ ಬದಲಾವಣೆ ತರಬಲ್ಲದು. ಗಾಯಕರು, ಕಲಾವಿದರು ರಾಜರಿಗಿಂತ ಶ್ರೇಷ್ಠರಾಗಿರು ತ್ತಾರೆ. ಸಂಗೀತದ ಮೋಡಿಗೆ ಎಲ್ಲರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ತಲೆದೂಗಿರು ತ್ತಾರೆ ಎಂದು ತಿಳಿಸಿದರು. ಪ್ರೊ. ಎಂ.ಜಿ. ಚಂದ್ರಕಾಂತ್ ಮಾತನಾಡಿ, ಸಂಗೀತ ಹೃದಯ ಭಾಷೆ, ಎಲ್ಲರಿಗೂ ಪ್ರಿಯವಾಗಿರುತ್ತದೆ. ಈಶ್ವರನ ಢಮರುಗ, ಶ್ರೀಕೃಷ್ಣನ ಕೊಳಲು, ಶಾರದೆಯ ವೀಣೆ ಹಾಗೂ ನಾರದನ ಸ್ವರ ಹೀಗೆ ಸಂಗೀತ ದೇವಭಾಷೆ ಎನಿಸಿಕೊಂಡಿದೆ ಎಂದರು.
ಪತ್ರಕರ್ತ ಎಚ್.ಆರ್.ರಂಗನಾಥ್, ಟ್ರಸ್ಟ್ ಅಧ್ಯಕ್ಷ ಮಣಿನಾರಾಯಣ ಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಎ.ರವೀಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ವಿದ್ವಾನ್ ಶ್ರೀಧರ್ ಸಾಗರ್, ಅರ್ಜುನ್ ದಿನಕರ್, ರವಿ ಕುಮಾರ್ ಹಾಗೂ ನಾಗಭೂಷಣ್ ಅವರ ತಂಡದಿಂದ ಸಂಗೀತ ಕಛೇರಿ ನಡೆಯಿತು.
ಸಭಾ ಕಾರ್ಯಕ್ರಮದ ನಂತರ ವಿದ್ವಾನ್ ಟಿ.ವಿ.ಶಂಕರನಾರಾಯಣನ್, ವಿದ್ವಾನ್ ಮಹಾದೇವ್ ಶಂಕರನಾರಾಯಣನ್, ವಿದ್ವಾನ್ ಬಿ,ರಘುರಾಮ್, ವಿದ್ವಾನ್ ಪ್ರೊ.ಯೆಲ್ಲಾ ವೆಂಕಟೇಶ್ವರ ರಾವ್ ಹಾಗು ವಿದ್ವಾನ್ ಭಾರ್ಗವ ಹಾಲಂಬಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಂಗೀತದ ಆಕರ್ಷಣೆ
ಕಾನೂನು ಪದವಿ ಪಡೆದರೂ ವಕೀಲ ತರಬೇತಿ ನಡೆಸಲಿಲ್ಲ. ಸಂಗೀತ ಕ್ಷೇತ್ರದ ಆಕರ್ಷಣೆ ಹೆಚ್ಚಾಗಿ, ಇದರಲ್ಲೇ ಮುಂದುವರಿದೆ. ವಿದೇಶದಲ್ಲಿದ್ದ ದಿನಗಳನ್ನು ಹೊರತುಪಡಿಸಿ, ಶ್ರೀರಾಮ ಸೇವಾ ಮಂಡಳಿ ಕಾರ್ಯಕ್ರಮದಲ್ಲಿ 24 ಸಂಗೀತ ಕಛೇರಿಯನ್ನು ಇದೇ ವೇದಿಕೆಯಲ್ಲಿ ನೀಡಿದ್ದೇನೆ. ಇದು 25ನೇ ಕಾರ್ಯಕ್ರಮ ಎಂದು ಎಸ್.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪಡೆದ ಗಾಯಕ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ ಅವರು ತಮ್ಮ ಅನುಭವ ಹಂಚಿಕೊಂಡರು.