ಮಣಿಪಾಲ: ಸಮುದಾಯ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಮಾಹೆ ವಿ.ವಿ.ಯಿಂದ ಹಾವಂಜೆ ಗ್ರಾ.ಪಂ.ಗೆ ತ್ಯಾಜ್ಯ ವಿಲೇವಾರಿ ವಾಹನವನ್ನು ಕೊಡುಗೆಯಾಗಿ ನೀಡಿದೆ. ಮಾಹೆಯ ಸಾಮಾಜಿಕ ಬದ್ಧತೆಯ ಭಾಗವಾದ ಈ ಉಪಕ್ರಮವು ಆರೋಗ್ಯ, ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ.
ವಾಹನ ಹಸ್ತಾಂತರ ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ನಮ್ಮ ಸಾಮಾಜಿಕ ಬದ್ಧತೆಯ ಉಪಕ್ರಮಗಳ ಮೂಲಕ, ಆರೋಗ್ಯ, ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ಪ್ರಯತ್ನಗಳನ್ನು ಸತತವಾಗಿ ಬೆಂಬಲಿಸುತ್ತ ಬಂದಿದ್ದೇವೆ. ಈ ಕೊಡುಗೆಯ ಮೂಲಕ ನಮ್ಮ ಅಕ್ಕಪಕ್ಕದ ಸಮುದಾಯಗಳುಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದಲ್ಲಿ ಪ್ರವರ್ಧಮಾನಕ್ಕೆ ಬರುವುದನ್ನು ಖಾತ್ರಿ ಪಡಿಸಿಕೊಳ್ಳುವ ಬದ್ಧತೆಯಾಗಿದೆ ಎಂದರು.
ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಮಾತನಾಡಿ, ಈ ಉಪಕ್ರಮವು ರಾಷ್ಟ್ರೀಯ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನ ವು ದೇಶಾದ್ಯಂತ ಸ್ವಚ್ಛತೆ ಮತ್ತು ನೈರ್ಮಲ್ಯ ವನ್ನು ಸುಧಾರಿಸುವ ಗುರಿ ಹೊಂದಿದೆ.ಸ್ವಚ್ಛ ಭಾರತ್ ದೃಷ್ಟಿಗೆ ಅನುಗುಣವಾಗಿ ಸ್ವಚ್ಛಮತ್ತು ಹೆಚ್ಚು ಸಮರ್ಥನೀಯ ಭಾರತವನ್ನು ಬೆಂಬಲಿಸುವುದರ ಭಾಗವಾಗಿದೆ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ತಮ್ಮ ಸಾಮಾಜಿಕ ಬದ್ಧತೆಯ ಭಾಗವಾಗಿ ಮಾಹೆಯಿಂದ ನೀಡುತ್ತಿರುವ ಈ ದೇಣಿಗೆಯು ಅವರ ಸಮಾಜ ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದರು.
ಹಾವಂಜೆ ಗ್ರಾ.ಪಂ.ಅಧ್ಯಕ್ಷೆ ಆಶಾ ಪೂಜಾರಿ, ಉಪಾಧ್ಯಕ್ಷ ಗುರುರಾಜ್, ಪಿಡಿಒ ದಿವ್ಯಾ ಮಾಹೆಯ ಈ ಕೊಡುಗೆಯನ್ನು ಸ್ಮರಿಸಿದರು.
ಮಾಹೆ ಸಹ ಕುಲಪತಿಗಳಾದ ಡಾ| ಶರತ್ ರಾವ್, ಡಾ| ನಾರಾಯಣ ಸಭಾಹಿತ್, ಸಿಒಒ (ಆಪರೇಶನ್ಸ್) ಡಾ| ರವಿರಾಜ ಎನ್.ಎಸ್., ಕುಲಸಚಿವ ಡಾ| ಪಿ.ಗಿರಿಧರ್ ಕಿಣಿ, ಹಣಕಾಸು ನಿರ್ದೇಶಕಿ ಸರಸ್ವತಿ, ಮಾಧ್ಯಮ ಮತ್ತು ಸಂವಹನ ವಿಭಾಗದ ಉಪ ನಿರ್ದೇಶಕ ಸಚಿನ್ ಕಾರಂತ್, ಎಸ್ಟೇಟ್ ಮ್ಯಾನೇಜರ್ ಬಾಲಕೃಷ್ಣ ಪ್ರಭು, ಗ್ರಾ.ಪಂ.ಸದಸ್ಯರಾದ ಎಂ. ಮೋಹಿನಿ, ನಿರ್ಮಲಾ ಎಚ್., ಸುಜಾತಾ ಶೆಟ್ಟಿ, ಅಜಿತ್ ಉಪಸ್ಥಿತರಿದ್ದರು.