ಬಸವಕಲ್ಯಾಣ: ವಚನಕಾರರು ಮಾಡಿದ ಬದಲಾವಣೆ ನೋಡಿದರೆ ವಚನ ಸಾಹಿತ್ಯದ ಶಕ್ತಿ ತಿಳಿಯುತ್ತದೆ ಎಂದು
ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಹೇಳಿದರು.
ಹುಲಸೂರನಲ್ಲಿ ನಡೆದ ರವಿವಾರ ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಭಾಷಣ
ಮಾಡಿದ ಅವರು, ಪ್ರಖರ ಚಿಂತನೆಗಳು, ವೈಚಾರಿಕ ಆಲೋಚನೆಗಳು ನಿಧಾನವಾಗಿ ಸಮಾಜದಲ್ಲಿ ಬದಲಾವಣೆ ತರಲು ಸಹಕಾರಿಯಾಗುತ್ತವೆ ಎಂದರು.
ಕನ್ನಡಕ್ಕೆ ಪ್ರಾಚೀನ ಕಾಲದಿಂದ ವಿಭಿನ್ನ, ವಿಶಿಷ್ಟ ಆಲೋಚನಾ ಗುಣವಿದೆ. ಕವಿರಾಜ ಮಾರ್ಗಕಾರರು, ವಚನಕಾರರು ಹಾಗೂ ತತ್ವಪದಕಾರರು ಚಿಂತನೆ ಮಾಡಿದ್ದು ಕನ್ನಡ ಭಾಷೆಯ ಚಿಂತನೆ. ಕನ್ನಡ ಭಾಷೆಗೆ ಇಷ್ಟು ಧಾರೆಗಳಿವೆ. ವೈವಿಧ್ಯತೆ, ವೈಚಾರಿಕ ಕ್ರಮ ಇದೆ. ಇದು ಭಾಷೆ ಜೀವಂತಿಕೆ, ಸಮಾಜ ಜೀವಂತಿಕೆ, ಸಮುದಾಯ ಜೀವಂತಿಕೆಯನ್ನು ನಿರಂತರ ಕಾಪಾಡಿಕೊಂಡು ಬಂದಿದೆ. ಒಳ್ಳೆಯ ಸಾಹಿತ್ಯ, ಒಳ್ಳೆಯ ವಿಚಾರ ಬೆಳೆಸುವುದು ನಿಮ್ಮೆಲ್ಲರ, ಬರಹಗಾರ ಕೈಯಲ್ಲಿ ಇದೆ ಎಂದು ಹೇಳಿದರು.
ಹುಲಸೂರನ ಶ್ರೀ ಶಿವಾನಂದ ಮಹಾಸ್ವಾಮೀಜಿ, ಭತರನೂರನ ಶ್ರೀ ಗುರುನಂಜೇಶ್ವರ ಮಹಾಸ್ವಾಮೀಜಿ ನೇತೃತ್ವ, ನಾಗೂರನ ಶ್ರೀ ಅಲ್ಲಮಪ್ರಭು ಸ್ವಾಮಿಜಿ, ರಟಕಲ್‌ನ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಸಿದ್ಧರಾಮ ಸ್ವಾಮಿ ಸಮ್ಮುಖ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಸಾಹಿತಿ ಎಂ.ಜಿ.ದೇಶಪಾಂಡೆ, ಜಿಪಂ
ಅಧ್ಯಕ್ಷೆ ಭಾರತಬಾಯಿ ಸೇರಿಕಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಬೀದರನ ಈಶ್ವರಪ್ಪ ಚಾಕೋತೆ, ಮಹೇಶ ಪಾಟೀಲ, ಹುಲಸೂರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ, ಡಾ| ಜಯದೇವಿ ಗಾಯಕವಾಡ, ಡಾ.ಗುರುಲಿಂಗಪ್ಪ ಧಬಾಲೆ, ಮಲ್ಲಪ್ಪ ಧಬಾಲೆ ಇನ್ನಿತರರು ಇದ್ದರು.