ಕಾಪು: ಸಾಮಾಜಿಕ, ಧಾಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗುರುತಿಸಲ್ಪಡುತ್ತಿರುವ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ತರುಣ – ತರುಣಿಯರ ಗುಂಪು ಹಡೀಲು ಗದ್ದೆಯನ್ನು ನಾಟಿ ಮಾಡಿ, ಅಲ್ಲಿ ಬೆಳೆಸಿದ ಭತ್ತವನ್ನು ಬಡ ವಿದ್ಯಾರ್ಥಿಗಳ ಆಶ್ರಮಕ್ಕೆ ನೀಡುವ ಮೂಲಕ ಮಾದರಿಯಾಗಿ ಮೂಡಿ ಬಂದಿದೆ. ಶಿರ್ವ ಮಾಣಿಪಾಡಿಯ ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ನಾಯಕ್ ಅವರ ಹಡೀಲು ಬಿದ್ದಿದ್ದ ಗದ್ದೆಯಲ್ಲಿ ಗಾದೇಂತ್ ಖೇಳ್ ಮೇಳ್ ನಡೆಸಿದ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಯುವಕ – ಯುವತಿಯರು ಬಳಿಕ ಗದ್ದೆಗೆ ಗೊಬ್ಬರ ಹಾಕಿ ಸಾಮೂಹಿಕವಾಗಿ ಭತ್ತದ ಬೆಳೆ ನಾಟಿ ನಡೆಸಿದ್ದರು.
ಚೆನ್ನಾಗಿ ಫಸಲು ನೀಡಿದ್ದ ಪೈರನ್ನು ಮಹಿಳಾ ವೃಂದದ ಸದಸ್ಯೆಯರು ಕಟಾವು ಮಾಡಿದ್ದು, ಯುವ ವೃಂದದ ಸದಸ್ಯರು ಅದನ್ನು ತಲೆಹೊರೆಯ ಮೂಲಕ ಕೃಷಿಕ ಯೋಗೀಶ್ ಸಾಲ್ವಣ್‌ಕಾರ್ ಅವರ ಅಂಗಳಕ್ಕೆ ತಂದು, ಪಡಿಮಂಚದಲ್ಲಿ ಬೈಹುಲ್ಲು ಬಡಿದು, ಭತ್ತವನ್ನು ಬೇರ್ಪಡಿಸಿದ್ದಾರೆ. ಯುವ ವೃಂದದ ಸದಸ್ಯರ ಕೆಲಸಕ್ಕೆ ಮನೆಯೊಡತಿ ರಾಜಶ್ರೀ ಅವರು ಬೆಂಬಲ ನೀಡಿ ಚಹಾ ತಿಂಡಿ ವ್ಯವಸ್ಥೆ ಮಾಡಿದ್ದರು.
ಬಂಟಕಲ್ಲು ಅರಸೀ ಕಟ್ಟೆ ಬಡ ವಿದ್ಯಾರ್ಥಿಗಳ ಆಶ್ರಮಕ್ಕೆ ಅಕ್ಕಿ : ಯುವ ವೃಂದದ ಸಾಧನೆಯ ಕಾರಣದಿಂದಾಗಿ ಐದು ಮುಡಿ ಅಕ್ಕಿಯಷ್ಟು ಭತ್ತ ಬೆಳೆದಿದ್ದು, ಅದನ್ನು ಬಡ ವಿದ್ಯಾರ್ಥಿಗಳ ಸೇವಾ ಆಶ್ರಮ – ಶ್ರೀ ದಯಾನಂದ ಛಾತ್ರಾಲಯಕ್ಕೆ ನೀಡುವುದಾಗಿ ಯುವವೃಂದದ ಅಧ್ಯಕ್ಷ ಸಂಜಯ್ ಆರ್. ನಾಯಕ್, ಗೌರವ ಅಧ್ಯಕ್ಷ ಕೆ. ಆರ್. ಪಾಟ್ಕರ್, ಕಾರ್ಯದರ್ಶಿ ಆದರ್ಶ ಪಾಟ್ಕರ್ ತಿಳಿಸಿದ್ದಾರೆ. ಯುವ ವೃಂದದವರೊಂದಿಗೆ ಪ್ರಗತಿ ಪರ ಕೃಷಿಕ ಕೃಷ್ಣಮೂರ್ತಿ ನಾಯಕ್, ಯೋಗೀಶ್ ಸಾಲ್ವಣ್‌ಕಾರ್, ಮಂಜುನಾಥ ಪ್ರಭು, ರವೀಂದ್ರ ನಾಯಕ್, ವೀರೇಂದ್ರ ಪಾಟ್ಕರ್ ಮೊದಲಾದವರು ಸಹಕರಿಸಿದ್ದಾರೆ.
ಯುವ ವೃಂದದ ಸಾಧನೆಗೆ ಪ್ರಶಂಸೆ
ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಸುವ ಸಂಘಟನೆಗಳಿಗೆ ಮಾದರಿಯೆಂಬಂತೆ ಬಂಟಕಲ್ಲು ಯುವ ವೃಂದದವರು ಕ್ರೀಡಾಕೂಟ ನಡೆಸಿದ ಗದ್ದೆಯಲ್ಲಿ ಭತ್ತದ ಬೆಳೆಯನ್ನು ಬೆಳೆಸುವ ಮೂಲಕ ಇತರರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಯುವಕರ ಸಾಧನೆಗೆ ಪರಿಸರದ ಹಿರಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ಮಾದರಿಯನ್ನು ಇತರ ಸಂಘಟನೆಗಳು ಅನುಸರಿಸಿದ್ದೇ ಆದರೆ ಹಡೀಲು ಗದ್ದೆಗಳಲ್ಲಿ ವರ್ಷಕ್ಕೆ ಒಂದು ಬೆಳೆಯನ್ನಾದರೂ ಬೆಳೆಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.