Advertisement

ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವವರು ಮೂರ್ಖರು

06:04 PM Apr 22, 2022 | Team Udayavani |

ಕೆ.ಆರ್‌.ನಗರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದರಿಂದ ಗಲಭೆ ಮತ್ತು ಗಲಾಟೆಗಳು ಹೆಚ್ಚಾಗಿವೆ. ಇದರಿಂದ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Advertisement

ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾರಮ್ಮದೇವಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವವರು ಮೂರ್ಖರು. ಧರ್ಮದ ಹೆಸರಿನಲ್ಲಿ ಸಮಾಜದ ಜನತೆಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು.

ದೇವರನ್ನು ಪೂಜಿಸುವುದು ಸಹಜ ಪ್ರಕ್ರಿಯೆ: ದೇವರೊಬ್ಬ ನಾಮ ಹಲವು. ಪ್ರತಿಯೊಬ್ಬರೂ ತಮ್ಮ ಧರ್ಮಕ್ಕೆ ಅನುಗುಣವಾಗಿ ದೇವಾಲಯಗಳನ್ನು ನಿರ್ಮಾಣ ಮಾಡಿಕೊಂಡು ಪೂಜಿಸುವುದು ಸಹಜ ಪ್ರಕ್ರಿಯೆ. ಆದರೆ ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗುವುದರ ಜತೆಗೆ ಸಾಂಸ್ಕೃತಿಕವಾಗಿ ಗ್ರಾಮಗಳಲ್ಲಿರುವ ಸರ್ವ ಜನಾಂಗ ದವರನ್ನೂ ಒಗ್ಗೂಡಿಸುವ ಕೇಂದ್ರವಾಗಬೇಕು ಎಂದು ತಿಳಿಸಿದರು.

ಡಿ.ರವಿಶಂಕರ್‌ ಸ್ಪರ್ಧೆ ಖಚಿತ: 2023ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್‌.ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ರವಿಶಂಕರ್‌ ಅವರು ಸ್ಪರ್ಧಿಸುವುದು ಖಚಿತ. ಅಭ್ಯರ್ಥಿಯ ವಿಚಾರದಲ್ಲಿ ಗಾಳಿಸುದ್ದಿಗಳನ್ನು ನಂಬದೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಡಿ.ರವಿಶಂಕರ್‌ ಅವರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಜನಬೆಂಬಲವಿದ್ದು ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಇವರೇ ಅಭ್ಯರ್ಥಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ನಡೆದಂತಹ ಎಲ್ಲಾ ಸಭೆ ಸಮಾರಂಭಗಳಲ್ಲೂ ಈಗಾಗಲೇ ಘೋಷಣೆ ಮಾಡಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಬದಲಾವಣೆಯಾಗುತ್ತದೆ ಎನ್ನುವುದರಲ್ಲಿ ಹುರುಳಿಲ್ಲ. ಇಂತಹ ಅಪಪ್ರಚಾರಗಳಿಗೆ ಜನತೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.

Advertisement

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಮಾರಿಗುಡಿಕೊಪ್ಪಲು, ಕಾಳೇನಹಳ್ಳಿ, ಹೊಸಕೊಪ್ಪಲು, ಕೆಂಪನಕೊಪ್ಪಲು ಗ್ರಾಮಗಳು ಪಟ್ಟಣದ ಸಮೀಪದಲ್ಲಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದ್ದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ದೇವಾಲಯ ನಿರ್ಮಾಣದ ಜತೆಗೆ ಗ್ರಾಮಗಳ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಅನುದಾನ ಮಂಜೂರು ಮಾಡಿದ್ದರು. ಇದರಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಯಿತು ಎಂದು ಮಾಹಿತಿ ನೀಡಿದರು. ಪಟ್ಟಣದ ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಸ್ವಾಮಿ, ಸದಸ್ಯ ನಟರಾಜು, ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಉಪಾಧ್ಯಕ್ಷ ನಟರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕ ಅಪ್ಪಾಜಿಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next