Advertisement

ಘಟನೆಯೊಂದಿಗೆ ಸಾಮಾಜಿಕ ಜೋಡಣೆ,ಸತ್ಯಶೋಧನೆ

10:59 AM Oct 07, 2019 | Sriram |

ಉಡುಪಿ: ಯಾವುದೇ ಒಂದು ಘಟನೆಯನ್ನು ಕೇವಲ ಘಟನೆಯಾಗಿ ನೋಡದೆ ಅದರ ಹಿಂದಿರುವ ನಾನಾ ಆಯಾಮಗಳ ಸತ್ಯಶೋಧನೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ನಡೆಸಬೇಕಾಗಿದೆ ಎಂದು “ಇಂಡಿಯಾ ಟುಡೇ’ ಮಾಧ್ಯಮ ಸಂಸ್ಥೆಗಳ ಸಮೂಹ ಸಂಪಾದಕ ರಾಜ್‌ ಚೆಂಗಪ್ಪ ಪತ್ರಿಕೋದ್ಯಮ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

Advertisement

ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ (ಎಂಐಸಿ), “ಉದಯವಾಣಿ’ ಸಹಯೋಗದಲ್ಲಿ ಶನಿವಾರ ಮಣಿಪಾಲದ ಹೊಟೇಲ್‌ ವ್ಯಾಲಿ ವ್ಯೂನಲ್ಲಿ ಆಯೋಜಿಸಿದ್ದ ಎಂಐಸಿಯ ಗೌರವ ನಿರ್ದೇಶಕರಾಗಿದ್ದ ಡಾ| ಎಂ.ವಿ. ಕಾಮತ್‌ ಅವರ ಐದನೆಯ ಸಂಸ್ಮರಣ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.

“ಮಾಧ್ಯಮ ಮತ್ತು ಹೊಸ ಭಾರತ’ ವಿಷಯ ಕುರಿತು ಮಾತನಾಡಿದ ಅವರು, ನಾವೀಗ ಹಿಂದಿನ ಮತ್ತು ಈಗಿನ ಭಾರತವನ್ನು ಜೋಡಿಸಬೇಕಾಗಿದೆ. ಹೊಸ ಮಾಧ್ಯಮವು ಅತಿಸೂಕ್ಷ್ಮವಾಗಿದ್ದು ಭಾವನಾತ್ಮಕವಾಗಿ ಹಿಂದಿನ ಕಾಲಕ್ಕೆ ನಾವು ತೆರೆದುಕೊಳ್ಳಬೇಕು. ಸಮೂಹ ಮಾಧ್ಯಮ ವಿದ್ಯಾರ್ಥಿಗಳು ಜನರು ಮತ್ತು ಸಮಾಜವನ್ನು ಜೋಡಿಸಬೇಕಾಗಿದೆ. ಹೊಸ ಭಾರತವೆಂದರೆ ಕೇವಲ ನರೇಂದ್ರ ಮೋದಿಯವರ ಜೋಡಣೆಯಲ್ಲ, ಜನರ ಜೋಡಣೆಯಾಗಬೇಕು ಎಂದರು.

ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಬರುತ್ತಿದೆ. ಒಂದು ಕಾಯಿಲೆ ಹೆಚ್ಚುತ್ತಿದೆ ಎನ್ನುವಾಗ ಏನೋ ಎಡವಟ್ಟು ಆಗುತ್ತಿದೆ ಎಂದರ್ಥ, ಅದೇನು ಎಂದು ಅನ್ವೇಷಣೆ ನಡೆಸಬೇಕು. ಇದುಯಾವುದೇ ಘಟನೆಗಾದರೂ ಅನ್ವಯವಾಗುವ ಸೂತ್ರ. ಘಟನೆ ಬೇರೆ, ಸತ್ಯ ಬೇರೆಯಾಗಿರುತ್ತದೆ. ಒಂದು ಅಪಘಾತವಾಗಿ ಸಾವು ಉಂಟಾದಾಗ ಮೃತದೇಹ ಒಂದು ಫ್ಯಾಕ್ಟ್ ಆಗಿರುತ್ತದೆ. ಅದರ ಹಿಂದಿರುವ ಮುಖಗಳು ನಾನಾ ಬಗೆಯವಾಗಿರುತ್ತವೆ. ಒಂದು ಕಡೆ ಅತ್ಯಾಚಾರವಾದರೆ ಅದರ ಪರಿಣಾಮಇನ್ನೆಲ್ಲೋ ಆಗಬಹುದು, ಅದು ನಮ್ಮೂರಿಗೆ ಬರಬಹುದು ಎಂದು ಮುಂದಾಲೋಚನೆ ಮಾಡಿ ನಡೆಸುವ ಬರವಣಿಗೆ ಪತ್ರಿಕಾರಂಗದ ಅಗತ್ಯ ಎಂದರು.

ಸತ್ಯದ ಬೆನ್ನುಹತ್ತಿ
ಪತ್ರಿಕೋದ್ಯಮ ವಿದ್ಯಾರ್ಥಿಗಳು ಘಟನೆಯ ಹಿಂದಿರುವ ಸತ್ಯ ಶೋಧನೆಯತ್ತ ಹೊರಡಬೇಕು. ಇದನ್ನೇ ಗಾಂಧೀಜಿಯವರು ಪ್ರತಿಪಾದಿಸಿದ್ದರು. ಸತ್ಯದ ಬೆನ್ನಟ್ಟುವಿಕೆ ಪತ್ರಿಕಾರಂಗ ಸದಾ ನಡೆಸುವ ಬೆನ್ನಟ್ಟುವಿಕೆಯಾಗಿದೆ. ಸತ್ಯ ಮತ್ತು ಪತ್ರಿಕಾರಂಗ ಬಹಳ ಆಪ್ತವಾಗಿದ್ದು, ಸತ್ಯದ ಅನ್ವೇಷಣೆ ಸೂಕ್ಷ್ಮವಾಗಿರುತ್ತದೆ. ಸತ್ಯ ಹಲವರಿಗೆ ಅಪ್ರಿಯವಾದರೂ ನ್ಯಾಯ ಒದಗಿಸುವಲ್ಲಿ ಅದು ಪತ್ರಕರ್ತರಿಗೆ ಅತ್ಯಗತ್ಯ. ನಾವು ಕುತೂಹಲ ಕೆರಳಿಸುವತ್ತ ಗಮನ ಕೇಂದ್ರೀಕರಿಸಬೇಕು. ಪತ್ರಕರ್ತ ಎಂದೂ ಕುತೂಹಲವನ್ನು ಕಳೆದುಕೊಳ್ಳಬಾರದು. ಕುತೂಹಲದ ಮೂಲ ತಣ್ತೀವನ್ನು ಶೋಧಿಸಬೇಕು ಎಂದರು.

Advertisement

1974ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನಡೆಸಿದ ಅಣು ಬಾಂಬು ಸ್ಫೋಟ ಪರೀಕ್ಷೆ ಕುರಿತು ತಾನು ಮಾಡಿದ ವರದಿಯ ಅನುಭವಗಳನ್ನು ರಾಜ್‌ ಚೆಂಗಪ್ಪ ವಿವರಿಸಿದರು. ಕಾಶ್ಮೀರಕ್ಕೂ ಭೇಟಿ ನೀಡಿದ ವಿಚಾರವನ್ನು ಸಾಂದರ್ಭಿಕವಾಗಿ ವಿವರಿಸಿದರು.

ಪತ್ರಕರ್ತರು ಕುತೂಹಲ ಮತ್ತು ಸತ್ಯಶೋಧನೆಯ ಪ್ರವೃತ್ತಿಗಳನ್ನು ಯಾಕೆ
ಕಳೆದುಕೊಳ್ಳಬಾರದು ಎಂಬುದಕ್ಕೆ ಉದಾಹರಣೆ ಯಾಗಿ ತನ್ನ ಪತ್ರಿಕಾ ವೃತ್ತಿಯ ಆರಂಭಿಕ ದಿನಗಳಲ್ಲಿ ಬೆಂಗಳೂರಿನ ರಸ್ತೆಬದಿಯಲ್ಲಿದ್ದ ಓರ್ವ ಪರಿತ್ಯಕ್ತೆ ಅಜ್ಜಿಯ ಕುರಿತು ವರದಿ ಮಾಡಿದ ಅನುಭವಗಳನ್ನು ಅವರು ವಿವರಿಸಿದರು. ಆ ವರದಿಯಿಂದಾಗಿ ಪರಿತ್ಯಕ್ತರ ರಕ್ಷಣೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಫೋನ್‌ ಲೈನ್‌ಗಳು ಅಸ್ತಿತ್ವಕ್ಕೆ ಬಂದುದನ್ನು ಸಾಮಾಜಿಕ ಹೊಣೆಗಾರಿಕೆಯ ವರದಿಗಾರಿಕೆಯ ಸತ್ಪರಿಣಾಮಗಳು ಹೇಗೆ ಉಂಟಾಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಅವರು ನೀಡಿದರು.

ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಶುಭ ಕೋರಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಪದ್ಮಕುಮಾರ್‌ ವಂದಿಸಿದರು. ಅನುಪಾ ಲೂವಿಸ್‌ ಪರಿಚಯಿಸಿದರು.

ಪ್ರತಿಜೀವಿಗಳ ನಡುವೆ
ಅಂತರ್‌ಸಂಬಂಧ
ಪಶ್ಚಿಮಘಟ್ಟ ಪ್ರದೇಶದಲ್ಲಿ ಆಗುತ್ತಿರುವ ಪರಿಸರ ನಾಶದ ಪರಿಣಾಮಗಳನ್ನು ನೋಡುತ್ತಿದ್ದೇವೆ. ಒಂದು ಜಾತಿಯ ಕಪ್ಪೆ ಸಂತತಿ ನಾಶವಾಗುತ್ತಿದ್ದರೆ ಅದರ ಪರಿಣಾಮ ಸಣ್ಣದಲ್ಲ. ಒಂದು ತಳಿ ನಾಶವಾದರೂ ಅದು ಇಡೀ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೊಡಗಿನ ವೃಕ್ಷ ನಾಶದಿಂದ ಉಂಟಾದ ಪ್ರಾಕೃತಿಕ ವಿಕೋಪವನ್ನು ಕಂಡಿದ್ದೇವೆ. ಪರಿಸರದ ಪ್ರತಿಯೊಂದು ಜೀವಿಗಳ ನಡುವೆ ಒಂದು ಅಂತರ್‌ಸಂಬಂಧವಿದೆಯಾದ ಕಾರಣ ಯಾವುದನ್ನೂ ಏರುಪೇರು ಮಾಡಬಾರದು. ಮಾಡಿದರೆ ಈಗ ಆಗುತ್ತಿರುವ ಅನುಭವ ಉಂಟಾಗುತ್ತದೆ.
– ರಾಜ್‌ ಚೆಂಗಪ್ಪ

Advertisement

Udayavani is now on Telegram. Click here to join our channel and stay updated with the latest news.

Next