Advertisement

ಇದು ಸಾಯೋ ವಯಸ್ಸಾ? ಸಾವು ನಿಶ್ಚಿತ, ಬದುಕು ಅನಿಶ್ಚಿತ

03:45 AM Jan 04, 2017 | Team Udayavani |

ಬೆಂಗಳೂರು: “ಅವನಿಗೆ (ಮಹದೇವಪ್ರಸಾದ್‌) 58 ವರ್ಷ, ಇದು ಸಾಯೋ ವಯಸ್ಸೇ? ಅಲ್ಲಾ ಸಾಯೋದಿಕ್ಕೆ ವಯಸ್ಸು ಏಕೆ ಬೇಕು? ಸಾವು ನಿಶ್ಚಿತ, ಈ ಬದುಕೇ ಅನಿಶ್ಚಿತ..’ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ನಿಧನರಾದ ಮಾಹಿತಿ ತಿಳಿಯುತ್ತಿದ್ದಂತೆ ಒಂದು ಕ್ಷಣ ಆಘಾತಕ್ಕೊಳಗಾದ ಸಿದ್ದರಾಮಯ್ಯ ಅವರು ಎರಡು ನಿಮಿಷ ಮೌನದ ಬಳಿಕ
ಅಶ್ರುಧಾರೆಯೊಂದಿಗೆ ಹೊರಹಾಕಿದ ಭಾವೋದ್ವೇಗದ ಮಾತುಗಳಿವು.

Advertisement

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ರಾಜಕೀಯವಾಗಿ ಮಾತ್ರವಲ್ಲದೆ, ಕೌಟುಂಬಿಕವಾಗಿಯೂ ಆತ್ಮೀಯರಾಗಿದ್ದ ಮಹದೇವ ಪ್ರಸಾದ್‌ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಒಂದು ಕ್ಷಣ ಆಘಾತಕ್ಕೆ ಒಳಗಾಗಿ ಮೌನಕ್ಕೆ ಶರಣಾದರು. ಸ್ವಲ್ಪ ಹೊತ್ತಿನ ಬಳಿಕ ದುಃಖ ಕಡಿಮೆಯಾಗಿ ಮಾತನಾಡುವ
ಸ್ಥಿತಿಗೆ ಬಂದ ಮೇಲೆ ಏನಾಯಿತು, ಹೇಗಾಯಿತು ಎಂಬ ಮಾಹಿತಿ ಪಡೆದರು.

ತಮ್ಮ ಜತೆಗಿದ್ದವರೊಬ್ಬರು ಮಹದೇವ ಪ್ರಸಾದ್‌ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಸಿದಾಗ ಮೊದಲು ಮುಖ್ಯ ಮಂತ್ರಿಗಳು ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಹಾಂ ಏನ್‌ ಹೇಳ್ತಿದ್ದೀಯಾ ಎಂದೇ ಪ್ರಶ್ನಿಸಿದರು. ಮಹದೇವಪ್ರಸಾದ್‌ ಅವರು ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು
ಮತ್ತೂಮ್ಮೆ ಹೇಳುತ್ತಿದ್ದಂತೆ ಆಘಾತಗೊಂಡ ಮುಖ್ಯಮಂತ್ರಿಗಳು ಆಯ್ತು, ಹೋಗು ಎಂದು ಅವರನ್ನು ಅಲ್ಲಿಂದ ಕಳುಹಿಸಿದರು. ನಂತರ ಸುಮಾರು 2 ನಿಮಿಷ ಸುಮ್ಮನೆ ಕುಳಿತರು. ಮುಖದಲ್ಲಿ ನೋವು ಕಾಣಿಸಿಕೊಂಡಿತ್ತಾದರೂ
ಯಾವುದೇ ಭಾವನೆ ಹೊರಹಾಕಲಿಲ್ಲ. ಬಳಿಕ ಕಣ್ಣೀರು ಸುರಿಸಲಾರಂಭಿಸಿದರು. ಒಬ್ಬರೇ ಕುಳಿತು ಸ್ವಲ್ಪ ಹೊತ್ತು ಅತ್ತು ತಮಗೆ ತಾವೇ ಸಮಾಧಾನ ಮಾಡಿಕೊಂಡರು. ಅಷ್ಟರಲ್ಲಿ ಒಂದಿಬ್ಬರು ಅವರ ಬಳಿ ಹೋದರೂ ಯಾರನ್ನೂ ತಲೆ ಎತ್ತಿ ನೋಡಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಕುಳಿತ ಬಳಿಕ ಅಕ್ಕಪಕ್ಕದಲ್ಲಿದ್ದವರನ್ನು ನೋಡಿ, ಅವನಿಗೆ (ಮಹದೇವಪ್ರಸಾದ್‌) 58 ವರ್ಷ, ಇದು ಸಾಯೋ ವಯಸ್ಸೇ? ಅಲ್ಲಾ ಸಾಯೋದಿಕ್ಕೆ ವಯಸ್ಸು ಏಕೆ ಬೇಕು ಎನ್ನುತ್ತಾ ಮತ್ತೆ ಗದ್ಗದಿತರಾದರು.

ಸಾವು ನಿಶ್ಚಿತ, ಈ ಬದುಕೇ ಅನಿಶ್ಚಿತ ಎಂದು ತಮ್ಮಲ್ಲಿ ತಾವೇ ಹೇಳಿಕೊಂಡರು. ಇದಾದ ಬಳಿಕ ಪಕ್ಕದಲ್ಲಿದ್ದವರನ್ನು
ಕರೆದು ಏನಾಯ್ತು? ಏನಾಗಿತ್ತು ಅವನಿಗೆ? ಹಾರ್ಟ್‌ಫೇಲ್‌ ಆದಾಗ ಜತೆಗೆ ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು. ರೆಸಾಟ್‌ìನಲ್ಲಿ ಒಬ್ಬರೇ ಮಲಗಿದ್ದರು. ಬೆಳಗ್ಗೆಯೇ ಹೃದಯಾಘಾತವಾಗಿತ್ತು. ಅವರು ಮೃತಪಟ್ಟು ಒಂದು ಗಂಟೆ ಕಲೆದ ಮೇಲೆ ಗೊತ್ತಾಯಿತು ಎಂದು ಜತೆಗಿದ್ದವರು ಮಾಹಿತಿ ನೀಡುತ್ತಿದ್ದಂತೆ, ಛೆ… ಎಂತಹಾ ಸಾವು ಬಂತಪ್ಪಾ ಎನ್ನುತ್ತಾ ತಲೆ
ಮೇಲೆ ಕೈಹೊತ್ತು ಕುಳಿತರು.

ನಂತರ ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡು ಮಹಡಿಗೆ ತೆರಳಿ ಮುಖ ತೊಳೆದುಕೊಂಡು ಕೆಳಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಆಗಲೂ ಅವರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಬಳಿಕ ಮೈಸೂರಿಗೆ ತೆರಳಿದರಾದರೂ ಇಡೀ ದಿನ ದುಃಖತಪ್ತರಾಗಿಯೇ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next