Advertisement
ಶಿವಮೊಗ್ಗ ಜಿಲ್ಲೆಯ ಕುಂಸಿಯಲ್ಲಿ ಅಶ್ವತ್ಥನಾರಾಯಣಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. 1964ರಲ್ಲಿ ಅಶ್ವತ್ಥನಾರಾಯಣ ಪ್ಪನವರು ಶಿವಮೊಗ್ಗದ ಎಇಒ ಕಚೇರಿಗೆ ಹೋದಾಗ ಹತ್ತು ವರ್ಷದ ಮಗ ಪ್ರಭಾಕರನೂ ಜತೆಗಿದ್ದ. ಅಶ್ವತ್ಥನಾರಾಯಣಪ್ಪನವರು ಸಲ್ಲಿಸಿದ ಕಡತವನ್ನು ಎಇಒ ದರ್ಪದಿಂದ ತೆಗೆದು ಎಸೆದ. ಮೇಲಾಧಿಕಾರಿಯ ದರ್ಪ ಮಗನ ಮೇಲೆ ಗಂಭೀರ ಪರಿಣಾಮ ಬೀರಿತು.
Related Articles
Advertisement
ನಮಗೆ ಬೇಡವಾದ ಯಾವ ವರ್ತನೆಯನ್ನು ಕಂಡೆವೋ ಅದನ್ನೇ ಆ ವರ್ಗಕ್ಕೆ ಜೀವಮಾನ ಪರ್ಯಂತ ತೋರಿಸುತ್ತಲೇ ಇರುವುದನ್ನು ಕಾಣುತ್ತೇವೆ. ನೋವು ಉಂಡವರು ದರ್ಪಿಷ್ಠನ ಬದಲು ಆತ ನನ್ನು ಪ್ರತಿನಿಧಿಸುವ ವರ್ಗ/ವೃತ್ತಿಯವರಿಗೆ ದ್ವೇಷವನ್ನು ತೋರಿಸುತ್ತಲೇ ಹೋಗು ತ್ತಾರೆ. ನಮಗೆ ಬೇಡವಾದದ್ದನ್ನು ಇತರರಿಗೆ ಹಂಚುತ್ತಿದ್ದೇವೆಂಬ ಪ್ರಜ್ಞೆ ಇವರಿಗೆ ಇಲ್ಲ, ಮುಂದೆ ತನ್ನದೇ ವರ್ಗಕ್ಕೆ ತನ್ನ ದರ್ಪ ಮುಳುವಾಗುತ್ತದೆ, ಅನವಶ್ಯವಾಗಿ ತನ್ನಿಂದ ಮುಗ್ಧರು ನೋವು ಅನುಭವಿಸಬೇಕಾಗುತ್ತದೆ ಎಂಬ ಪ್ರಜ್ಞೆ ದರ್ಪಿಷ್ಟ ಅಧಿಕಾರಶಾಹಿಗೂ ಇರುವುದಿಲ್ಲ. ಮಕ್ಕಳ ಎದುರು ನೇತ್ಯಾತ್ಮಕವಾಗಿ ವರ್ತಿಸಿದಂತೆ ಎಚ್ಚರಿಕೆ ಬೇಕು. ಸರಕಾರ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹೀಗೆ ಎಲ್ಲ ಬಗೆಯ ಕ್ಷೇತ್ರಗಳಲ್ಲೂ ಅಧಿಕಾರದೊಂದಿಗೆ ದರ್ಪ ನುಸುಳಿ ಬಂದಿರುತ್ತದೆ. ಇವರೆಲ್ಲರೂ ತಮ್ಮನ್ನು ಭಾರೀ ಕಲಿತ ವರ್ಗದವರೆಂದು ಭಾವಿಸಿಕೊಳ್ಳುತ್ತಾರೆ. ಸ್ವಜನಪಕ್ಷಪಾತದ ಜಾತೀವಾದಿ ಇನ್ನೊಂದು ವರ್ಗವಿದೆ. ಇವರೆಲ್ಲ ಜಾತ್ಯತೀತ (ಎಲ್ಲರನ್ನೂ ಸಮಾನವಾಗಿ ಕಾಣುವುದು) ವ್ಯವಸ್ಥೆಯನ್ನು ಒಪ್ಪಿ ಆ ಕುರ್ಚಿಯಲ್ಲಿ ಆಸೀನರಾದವರು.
ಪ್ರಭಾಕರ ಶರ್ಮ ಈ ಎಲ್ಲರಂತಲ್ಲ. ತನಗೆ ಬೇಡವಾದದ್ದನ್ನು ಇತರರಿಗೆ ಹಂಚದೆ, ತನಗೆ ಬೇಕಾದದ್ದನ್ನು ಇತರರಿಗೆ ಸೇವಾವಧಿಪರ್ಯಂತ ಹಂಚಿದರು. “ನಮಗೆ ಯಾವುದು ಹಿತವೋ ಅದನ್ನು ಇತರರಿಗೆ ಹಂಚಬೇಕು, ನಮಗೆ ಯಾವುದು ಅಹಿತವೋ ಅದನ್ನು ಇತರರಿಗೆ ಹಂಚಬಾರದು’ ಎಂಬ ನೀತಿಪಾಠ ಮಹಾಭಾರತದಲ್ಲಿದೆ. “ದಕ್ಷ ಆಡಳಿತ, ಭ್ರಷ್ಟಾಚಾರರಹಿತ, ಸೌಜನ್ಯಪೂರಿತ ಸೇವೆ ಈ ಮೂರನ್ನೂ ಒಬ್ಬರಲ್ಲಿ ನೋಡುವುದು ಬಹಳ ಅಪರೂಪ. ಇವು ಶರ್ಮರಲ್ಲಿದೆ’ ಎಂದು ಹಿರಿಯ ಸಹಕಾರಿ ಧುರೀಣ ದಿ| ಪೆರಾಜೆ ಶ್ರೀನಿವಾಸ ರಾವ್ ಹೇಳುತ್ತಿದ್ದರು. ಶರ್ಮ ನಿವೃತ್ತಿ ಬಳಿಕ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಗೌರವ ಕಾರ್ಯದರ್ಶಿಯಾಗಿ ಸಮಾಜಮುಖೀಯಾಗಿದ್ದಾರೆ.
ನಿನ್ನೆ ಎಸಿ, ನಾಳೆ ಎಡಿಸಿ, ಇಂದೇನು? ಪ್ರಭಾಕರ ಶರ್ಮ 2005-06ರಲ್ಲಿ ಮಂಗಳೂರಿನಲ್ಲಿ ಸಹಾಯಕ ಕಮಿಷನರ್ ಆಗಿದ್ದ ಸಂದರ್ಭ ಲಾಲ್‌ಭಾಗ್ ಪ್ರದೇಶದಲ್ಲಿ ವಸತಿಗೃಹವಿತ್ತು. ಅಲ್ಲೇ ಸಮೀಪ ಒಂದು ಕಾಡು ಇತ್ತು. ಅಲ್ಲಿನ ಮರಗಳನ್ನು ಯಾರೋ ಕಡಿಯುತ್ತಿದ್ದರು. ಶರ್ಮರದು ರೆವೆನ್ಯೂ ಮೈಂಡ್. ಅಳತೆ ಮಾಡಿಸಿದರು. 80 ಸೆಂಟ್ಸ್ ಸ್ಥಳ ಸರಕಾರದ ಸ್ವಾಧೀನಕ್ಕೆ ಬಂತು. ಮಹಾನಗರಪಾಲಿಕೆಯಲ್ಲಿ ಮಹಿಳೆ ಮತ್ತು ಮಕ್ಕಳ ಉದ್ದೇಶದ ಪಾರ್ಕ್‌ಗಾಗಿ ಕಾಯ್ದಿರಿಸಿ ಸಹಾಯಕ ಕಮಿಷನರ್ ಆಗಿ ಶರ್ಮ ಆದೇಶ ಹೊರಡಿಸಿದರು. ಬಳಿಕ ಕುಂದಾಪುರದ ಸಹಾಯಕ ಕಮಿಷನರ್ ಆಗಿ ನಿಯುಕ್ತರಾದರು. 2007ರಲ್ಲಿ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಭಡ್ತಿ ಹೊಂದಿ ವರ್ಗವಾದಾಗ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಿ ಮಂಗಳೂರಿಗೆ ಬಂದರು. ತಾನೇ ಕಾಯ್ದಿರಿಸಿದ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣವಾದದ್ದು ಮತ್ತೆ “ರೆವೆನ್ಯೂ ಮೈಂಡ್’ ಕಣ್ಣಿಗೆ ಬಿತ್ತು. ಆ ದಿನ ಅಧಿಕಾರ ಹಸ್ತಾಂತರ ಮಾಡಿದ ಕಾರಣ ಎಸಿ ಅಲ್ಲ, ಅಧಿಕಾರ ಸ್ವೀಕರಿಸದ ಕಾರಣ ಎಡಿಸಿಯೂ ಅಲ್ಲ. ಶೆಡ್‌ನಲ್ಲಿ ದಢೂತಿಗಳು ಇದ್ದರು. ಅಲ್ಲೊಬ್ಬ ಗುರುತು ಹಿಡಿದು “ನೀವು ಇಲ್ಲಿ ಎಸಿ ಆಗಿದ್ದಿರಲ್ವಾ?’ ಎಂದ. ಅವರಿಗೆಲ್ಲ ಎಚ್ಚರಿಕೆ ಕೊಟ್ಟು ಸೋಮವಾರ ಎಡಿಸಿಯಾಗಿ ಮತ್ತೆ ಜಾಗವನ್ನು ಸ್ವಾಧೀನಪಡಿಸಿಕೊಂಡರು. ಆ ಜಾಗದಲ್ಲಿ ಈಗ ಮಹಾನಗರಪಾಲಿಕೆ ವ್ಯಾಪ್ತಿಯ ಇಂದಿರಾಪ್ರಿಯದರ್ಶಿನಿ ಪಾರ್ಕ್ ತಲೆ ಎತ್ತಿ ಸಾರ್ವಜನಿಕರಿಗೆ ಒಳಿತನ್ನು ಉಣಬಡಿಸುತ್ತಿದೆ. ನಾವು ಕೆಟ್ಟದ್ದನ್ನು ಮಾಡಿದರೂ ಒಳಿತನ್ನು ಕೊಡುವುದೇ ನಿಸರ್ಗದ ನಿಯಮ, ನಾವೂ ನಿಸರ್ಗದ ಒಂದು ಭಾಗವಲ್ಲವೆ? –ಮಟಪಾಡಿ ಕುಮಾರಸ್ವಾಮಿ