Advertisement

ಶೀಘ್ರವೇ ಮತ್ತೂಂದು ಕೇಂದ್ರೀಯ ವಿದ್ಯಾಲಯ

06:13 AM Jan 18, 2019 | |

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೂಂದು ಕೇಂದ್ರೀಯ ವಿದ್ಯಾಲಯ ಆರಂಭಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದ್ದಾರೆ.

Advertisement

ಆವರಗೊಳ್ಳ ಸಮೀಪ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರೀಯ ವಿದ್ಯಾಲಯವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ನೌಕರರ ಸಂಖ್ಯೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಾಗಬೇಕಿದೆ. ಈಗಾಗಲೇ ಚನ್ನಗಿರಿ ಭಾಗದಲ್ಲಿ ನವೋದಯ ಶಾಲೆ ಇದೆ. ಹಾಗಾಗಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಹೊನ್ನಾಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಲು ಪ್ರಯತ್ನಿಸುವೆ ಎಂದರು.

ಕೇಂದ್ರೀಯ ವಿದ್ಯಾಲಯವನ್ನು ನಮ್ಮ ತಾಲೂಕಿನಲ್ಲಿ ಆರಂಭಿಸಿ ಎಂದು ಈಗಾಗಲೇ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬೇಡಿಕೆಯನ್ನಿಟ್ಟಿದ್ದಾರೆ. ಅಲ್ಲದೇ ಇದಕ್ಕಾಗಿ ಬೇಕಾಗುವ 10 ಎಕರೆ ಜಾಗವನ್ನು ಕೂಡ ನಾವು ನೀಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಜಗಳೂರು ಬಳಿ ಈಗಾಗಲೇ ಸುಮಾರು 25 ಎಕರೆ ಜಾಗದಲ್ಲಿ, 20 ಲಕ್ಷ ರೂ. ವೆಚ್ಚದಲ್ಲಿ ಏಕಲವ್ಯ ವಿದ್ಯಾಲಯ ಪ್ರಾರಂಭವಾಗುತ್ತಿದೆ. ಇದು ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಹಕಾರಿ ಆಗುತ್ತದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾಗಿ 5 ವರ್ಷವಾಗಿದೆ. ಆಗ ಬಾಡಿಗೆ ಮನೆಯಲ್ಲಿ ಆರಂಭಿಸಲಾಗಿತ್ತು. ಇದೀಗ ಆವರಗೊಳ್ಳ ಸಮೀಪದಲ್ಲಿ ಹದಿಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಸುಂದರ, ಭವ್ಯ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಈ ಸಂಸ್ಥೆಯಲ್ಲಿ ಒಟ್ಟು 24 ಶಿಕ್ಷಕರಿದ್ದು, ಅದರಲ್ಲಿ 14 ಶಿಕ್ಷಕರು ಮಾತ್ರ ಕಾಯಂ ಆಗಿದ್ದು, 10 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಪೋಷಕರು ಪ್ರಧಾನಿಗೆ ಪತ್ರ ಬರೆದು ನನಗೂ ಪ್ರತಿ ನೀಡಿದ್ದಾರೆ. ಕೇಂದ್ರ ಮಂತ್ರಿಗಳ ಜೊತೆ ಚರ್ಚಿಸಿ ಹುದ್ದೆಗಳನ್ನು ತುಂಬಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Advertisement

ಮಕ್ಕಳು ಕ್ರೀಡೆ, ಕಲೆ ಮುಂತಾದ ಚುಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಆ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಕಲಿಸಿ ಕೊಡುವಲ್ಲಿ ಶಿಕ್ಷಕ ಸಿಬ್ಬಂದಿ ಶ್ರಮಿಸಬೇಕು ಎಂದು ಹೇಳಿದರು.

ಕಸ್ತೂರಿ ರಂಗನ್‌ ಸಮಿತಿಯು ಪಠ್ಯಪುಸ್ತಕ, ಹೋಮ್‌ವರ್ಕ್‌, ಬ್ಯಾಗ್‌ ಹೊರೆ ತಗ್ಗಿಸುವ ಸಲುವಾಗಿ ಶಿಫಾರಸು ಮಾಡಿದೆ. ಅದರಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ನೀಡಲಿದೆ. ಇದು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಆಗಿರುವುದು ಸಂತಸ ತಂದಿದೆ. ರೈತರು, ತುಳಿತಕ್ಕೊಳಗಾದ ಮಕ್ಕಳಿಗೂ ಇಂತಹ ವಿದ್ಯಾಸಂಸ್ಥೆಯಲ್ಲಿ ಓದಲು ಅವಕಾಶ ಸಿಗುವಂತಾಗಬೇಕು. ಏಕೆಂದರೆ ದೊಡ್ಡವರ ಮಕ್ಕಳು ಎಲ್ಲಿ ಆದ್ರೂ ಓದಬಹುದು. ಈ ಕೆಲಸವನ್ನು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಮುಂದಿನ ದಿನಗಳಲ್ಲಿ ಸಂಸದರು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಡಾ| ಎ.ಕೆ. ಮಿಶ್ರಾ, ಕೆಂದ್ರೀಯ ವಿದ್ಯಾಲಯ ಸಂಸ್ಥೆ ಉಪ ಆಯುಕ್ತ ಡಿ.ಟಿ.ಎಸ್‌. ರಾವ್‌, ಧಾರವಾಡದ ಮುರುಳಿ ಕೃಷ್ಣ, ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ಪಿ.ಸಿ. ರಾಜು, ವಿದ್ಯಾಲಯದ ಪ್ರಾಂಶುಪಾಲ ಪಿ.ವಿ. ಬೀಜು ಉಪಸ್ಥಿತರಿದ್ದರು.

ಪ್ರತಿಭಾ ಪಲಾಯನ ಬೇಡ
ಶಿಕ್ಷಣ ಪಡೆದ ಪ್ರತಿಭಾನ್ವಿತರು ವಿದೇಶದ ಕಡೆ ಮುಖ ಮಾಡುತ್ತಿದ್ದಾರೆ. ಈ ರೀತಿಯ ಪ್ರತಿಭಾ ಪಲಾಯನ ಅತ್ಯಂತ ಅಪಾಯಕಾರಿ. ಬುದ್ಧಿವಂತರಾದ ಮಕ್ಕಳು ವಿದೇಶಕ್ಕೆ ಹೋಗುವುದನ್ನು ಬಿಡಬೇಕು. ಯಾರೇ ಜ್ಞಾನವಂತರಾದರೂ ಕೂಡ ಅವರ ಸೇವೆ ದೇಶಕ್ಕೆ ದೊರೆಯಬೇಕು ಎಂದು ಸಂಸದರು ಹೇಳಿದರು. ಒಬ್ಬ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣ ಮುಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ 30ರಿಂದ 40 ಲಕ್ಷ ರೂ.ವರೆಗೆ ಖರ್ಚು ಮಾಡುತ್ತಿವೆ. ಆದರೆ, ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾದವರು ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ನೀಡಲು ಮುಂದೆ ಬರುತ್ತಿಲ್ಲ. ಬದಲಾಗಿ ವಿದೇಶಕ್ಕೆ ಹೋಗುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next