Advertisement

Ullal: ಈ ಚಿತಾಗಾರದಲ್ಲಿ ಇದುವರೆಗೆ ಒಂದೂ ಹೆಣಸುಟ್ಟಿಲ್ಲ

12:25 PM Aug 23, 2024 | Team Udayavani |

ಉಳ್ಳಾಲ: ಉಳ್ಳಾಲದ ಚೆಂಬುಗುಡ್ಡೆಯಲ್ಲಿ ಒಂದು ಅತ್ಯಾಧುನಿಕ ವಿದ್ಯುತ್‌ ಚಿತಾಗಾರವಿದೆ. ಕಳೆದ ಎರಡೂವರೆ ವರ್ಷದ ಹಿಂದೆ ಇನ್ಫೋಸಿಸ್‌ ಫೌಂಡೇಷನ್‌ನಿಂದ 1.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತಾಗಾರವಿದು. ಆದರೆ, ಅಚ್ಚರಿ ಎಂದರೆ, ಇದುವರೆಗೆ ಈ ಚಿತಾಗಾರದಲ್ಲಿ ಒಂದೇ ಒಂದು ಹೆಣವನ್ನೂ ಸುಟ್ಟಿಲ್ಲ! ಇದಕ್ಕೆ ಕಾರಣ ಈ ಚಿತಾಗಾರದಲ್ಲಿ ಹೆಣ ಸುಡಲು ಹಿಂದೇಟು ಹಾಕುತ್ತಿರುವುದು!

Advertisement

ಮಹಾನಗರಗಳಲ್ಲಿ ವಿದ್ಯುತ್‌ ಚಿತಾಗಾರಗಳು ಸಾಮಾನ್ಯ. ಆದರೆ ನಗರಸಭಾ ವ್ಯಾಪ್ತಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಿದ ಪ್ರಥಮ ನಗರಸಭೆ ಎಂದು ಹೆಗ್ಗಳಿಕೆ ಉಳ್ಳಾಲಕ್ಕೆ ಸಂದಿತ್ತು. ಆದರೆ, ಇದೀಗ ವಿದ್ಯುತ್‌ ಚಿತಾಗಾರ ನಿರ್ಮಾಣಗೊಂಡು ಎರಡೂವರೆ ವರ್ಷವಾದರೂ ಈವರೆಗೆ ಒಂದು ಮೃತದೇಹವನ್ನು ವಿದ್ಯುತ್‌ ಚಿತಾಗಾರದಲ್ಲಿ ಸುಡಲಾಗಿಲ್ಲ!‌ ವಿದ್ಯುತ್‌ ಚಿತಾಗಾರ ಕೆಲಸವಿಲ್ಲದೆ ತುಕ್ಕು ಹಿಡಿಯುತ್ತಿದ್ದು, ಪ್ರತೀ ತಿಂಗಳು ವಿದ್ಯುತ್‌ ಬಿಲ್‌ ಮಾತ್ರ ಸರಿಯಾದ ಸಮಯಕ್ಕೆ ಪಾವತಿ ಮಾಡಲೇ ಬೇಕಾಗಿದೆ. ಇದು ನಗರಸಭೆಗೆ ಅನಗತ್ಯ ಹೊರೆಯಾಗಿದೆ.

2021ರ ಕೊರೊನಾದ ಸಂದರ್ಭದಲ್ಲಿ ಉಳ್ಳಾಲದಲ್ಲೂ ಮೃತದೇಹಗಳ ಸಂಖ್ಯೆ ಹೆಚ್ಚಾದಾಗ ವಿದ್ಯುತ್‌ ಚಿತಾಗಾರ ನಿರ್ಮಾಣ ಮಾಡಿದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಬಹುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಹಿಂದೂ ರುದ್ರಭೂಮಿ ಸಮಿತಿಯ ಆಗ್ರಹದಂತೆ 2021ರ ಫೆಬ್ರವರಿಯಲ್ಲಿ ಉಳ್ಳಾಲದ ಚೆಂಬುಗುಡ್ಡೆಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು.

ಈ ಯೋಜನೆಯಂತೆ ಇನ್ಫೋಸಿಸ್‌ ಫೌಂಡೇಷನ್‌ ಮೇ ತಿಂಗಳಲ್ಲಿ ಸಿಎಸ್‌ಆರ್‌ ಫಂಡ್‌ನ‌ಡಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾರ್ಯಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದು ಜೂನ್‌ನಲ್ಲಿ ಆರಂಭಗೊಂಡು ರಾತ್ರಿ ಹಗಲು ಕಾಮಗಾರಿ ನಡೆದು ಆರು ತಿಂಗಳಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿದ್ದು, 2022ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿತ್ತು.

Advertisement

ಎಲ್ಲರಿಗೂ ಕಟ್ಟಿಗೆ ಚಿತಾಗಾರ ಬೇಕು! ಕೊರೊನಾ ಪೂರ್ವದಲ್ಲಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಬರುವ ಮೃತದೇಹಗಳ ಸರಾಸರಿ ಆಧಾರದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿತ್ತು. ಉಳ್ಳಾಲದಲ್ಲಿ ಸಾಮಾನ್ಯವಾಗಿ ಕಟ್ಟಿಗೆಯಲ್ಲಿ ಮೃತದೇಹವನ್ನು ಸುಡಲು ಮೃತರ ಸಂಬಂಧಿಕರ ಪ್ರಥಮ ಆದ್ಯತೆ ಯಾಗಿದ್ದರಿಂದ ವಿದ್ಯುತ್‌ ಚಿತಾಗಾರಕ್ಕೆ ಯಾರೂ ಹೆಣ ತರುತ್ತಿಲ್ಲ. ವಿದ್ಯುತ್‌ ಚಿತಾಗಾರ ತುಕ್ಕುಹಿಡಿಯುತ್ತಿದ್ದು, ಇದೇ ರೀತಿ ಮುಂದುವರೆದರೆ ಇನ್ನೆರಡು ವರುಷದಲ್ಲಿ ಚಿತಾಗಾರ ಸಂಪೂರ್ಣ ಹಾಳಾಗಲಿದೆ. ವಿದ್ಯುತ್‌ ಚಿತಾಗಾರಕ್ಕೆ ದಿನಕ್ಕೆ ಸರಾಸರಿ ಐದಕ್ಕೂ ಹೆಚ್ಚು ಮೃತದೇಹಗಳು ಬಂದರೆ ಮಾತ್ರ ಕಡಿಮೆ ದರದಲ್ಲಿ ಸುಡಲು ಸಾಧ್ಯವಿದೆ. ಸಿಬಂದಿ ನೇಮಕವಾದರೆ ಅವರ ಸಂಬಳಕ್ಕೂ ಹಣ ಇಡಬೇಕಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಹಿಂದೂ ರುದ್ರಭೂಮಿ ಇರುವ ಕಾರಣ ವಿದ್ಯುತ್‌ ಚಿತಾಗಾರ ಯೋಜನೆ ನಿರರ್ಥಕವಾಗಿದೆ.

ನಗರಸಭೆಗೆ ವಿದ್ಯುತ್‌ ಬಿಲ್‌ ಹೊರೆ

2022ರ ಜನವರಿಯಿಂದ ಈ ವಿದ್ಯುತ್‌ ಚಿತಾಗಾರಕ್ಕೆ 75 ಕಿ. ವ್ಯಾ. ವಿದ್ಯುತ್‌ ಸಾಮರ್ಥ್ಯ ನೀಡಿದ್ದು, ಪ್ರತೀ ತಿಂಗಳು 25 ಸಾವಿರದಿಂದ 30 ಸಾವಿರ ವಿದ್ಯುತ್‌ ಬಿಲ್‌ ಮೆಸ್ಕಾಂಗೆ ನಗರಸಭೆ ಪಾವತಿ ಮಾಡಲೇಬೇಕಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 8 ಲಕ್ಷ ರೂ. ವರೆಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಿದೆ.

ಜನರಿಗೆ ಮಾಹಿತಿ ಕೊಡುತ್ತೇವೆ
ಚೆಂಬುಗುಡ್ಡೆಯ ವಿದ್ಯುತ್‌ ಚಿತಾಗಾರದ ಕುರಿತು ಜನರಿಗೆ ಮಾಹಿತಿ ಕೊಡುವ ಕೆಲಸದೊಂದಿಗೆ ಸಪ್ಟೆಂಬರ್‌ ತಿಂಗಳಿನಲ್ಲಿ ಕೌನ್ಸಿಲ್‌ ಸಭೆಯ ನಿರ್ಣಯದೊಂದಿಗೆ ಉಳ್ಳಾಲ ನಗರಸಭೆ, ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ವಾಣಿ ವಿ. ಆಳ್ವ, ಪೌರಾಯುಕ್ತೆ ಉಳ್ಳಾಲ ನಗರಸಭೆ

75 ಸಾವಿರ ರೂ. ವರೆಗೆ ವೆಚ್ಚ
ಹಲವು ದಶಕಗಳ ಇತಿಹಾಸವಿರುವ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ವಹಣೆಗೆ ಇಬ್ಬರು ಸಿಬಂದಿ ವೇತನ ಮತ್ತು ವಿದ್ಯುತ್‌ ಬಿಲ್‌ಗೆ ಪ್ರತೀ ತಿಂಗಳು 75 ಸಾವಿರ ರೂ.ವರೆಗೆ ವೆಚ್ಚ ತಗುಲಲಿದ್ದು, ಸಮಿತಿಗೆ ಇಷ್ಟೊಂದು ಹಣ ನಿರ್ವಹಣೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಳ್ಳಾಲ ನಗರಸಭೆಗೆ ಲಿಖೀತವಾಗಿ ಚಿತಾಗಾರವನ್ನು ನಿರ್ವಹಿಸಲು ಮನವಿ ಮಾಡಿದೆ. ತುಕ್ಕು ಹಿಡಿಯುವ ಮೊದಲೇ ಚಿತಾಗಾರ ಆರಂಭಿಸಲು ಕ್ರಮಕೈಗೊಳ್ಳಬೇಕು.
-ಚಂದ್ರಹಾಸ ಉಳ್ಳಾಲ, ರುದ್ರಭೂಮಿ ನಿರ್ವಹಣ ಸಮಿತಿ

-ವಸಂತ್‌ ಎನ್‌.ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next