Advertisement

ಮಂಜಿನ ಮಳೆ; ಉತ್ತರ ಹಿಮಾವೃತ; ಜನಜೀವನ ಅಸ್ತವ್ಯಸ್ತ

01:32 AM Jan 21, 2023 | Team Udayavani |

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಚಳಿ, ಹಿಮ ವರ್ಷದ ನಡುವೆಯೇ ಮಳೆಯೂ ಸುರಿಯತೊಡಗಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮ ವರ್ಷದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳನ್ನು ಮುಚ್ಚಲಾಗಿದ್ದು, ವಿಮಾನಗಳ ಸಂಚಾರಕ್ಕೂ ತೊಂದರೆಯಾಗಿದೆ.

Advertisement

ಕಣಿವೆಯಲ್ಲಿ ಮೈನಸ್‌ 1.5 ಡಿ.ಸೆ.
ಜಮ್ಮು-ಕಾಶ್ಮೀರದ ಹಲವು ಪ್ರದೇಶದಲ್ಲಿ ಶುಕ್ರವಾರ ತೀವ್ರ ಹಿಮವರ್ಷವಾಗಿರುವ ಹಿನ್ನೆಲೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಪ್ರವಾಸಿ ತಾಣಗಳಾದ ಗುಲ್ಮಾರ್ಗ್‌, ಅನಂತ್‌ನಾಗ್‌, ಕುಲ್ಗಾಮ್‌, ಶೋಪಿಯಾನ್‌, ಪುಲ್ವಾಮ ಮತ್ತು ಶ್ರೀನಗರದಲ್ಲಿ ತೀವ್ರ ಹಿಮಮಳೆಯಿಂದ ರಸ್ತೆಗಳೇ ಕಾಣದಂತಾಗಿದೆ. ಶ್ರೀನಗರದಲ್ಲಿ ಮೈನಸ್‌ 0.1 ಡಿ.ಸೆ. ಕನಿಷ್ಠ ತಾಪಮಾನ ವರದಿಯಾಗಿದ್ದರೆ, ಕುಪ್ವಾರದಲ್ಲಿ ಮೈನಸ್‌ 1.5 ಡಿ.ಸೆ. ತಾಪಮಾನವಿದೆ. ಗೋಚರತೆ ಕಡಿಮೆ ಇರುವ ಕಾರಣ ವಿಮಾನ ಸಂಚಾರಕ್ಕೂ ಸಮಸ್ಯೆಯಾಗಿದೆ.

ಜೋಶಿಮಠ ನಿರಾಶ್ರಿತರಿಗೆ ಸಂಕಷ್ಟ
ಭೂಕುಸಿತದಿಂದ ನಲುಗಿರುವ ಜೋಶಿಮಠದ ಜನರಿಗೆ ತೀವ್ರ ಹಿಮವರ್ಷದ ಸಂಕಟ ಎದುರಾಗಿದೆ. ಜೋಶಿಮಠ ಸೇರಿದಂತೆ ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಹಾಗೂ ಹಿಮವರ್ಷ ಶುರುವಾಗಿದ್ದು, ನಿರಾಶ್ರಿತ ಶಿಬಿರದಲ್ಲಿರುವವರ ಪಾಡು ಹೇಳ ತೀರದಂತಾಗಿದೆ. ಈ ಸಂಬಂಧಿಸಿದಂತೆ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಭೆ ನಡೆಸಿದ್ದು, ನಿರಾಶ್ರಿತ ಕೇಂದ್ರಗಳಲ್ಲಿರುವವರಿಗೆ ಹೀಟರ್‌ ಸೇರಿದಂತೆ ಅಗತ್ಯವಿರುವ ವಸ್ತುಗಳ ಸರಬರಾಜು ಖಚಿತ ಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಪ್ರಸಿದ್ಧ ಕೇದಾರನಾಥ ದೇವಾಲಯವೂ ಹಿಮದಿಂದ ಆವೃತವಾಗಿದೆ.

ಹಿಮಾಚಲ ರಸ್ತೆಗಳು ಬಂದ್‌
ಶಿಮ್ಲಾದ ಜಾಖೋ ಪೀಕ್‌, ಕುಫ್ರಿ ಸಹಿತ ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಹಿಮದ ಮಳೆ ಸುರಿಯುತ್ತಿದೆ. ರಸ್ತೆಗಳಲ್ಲಿ ಸುಮಾರು 60 ಸೆ.ಮೀ.ನಷ್ಟು ಹಿಮ ತುಂಬಿದ್ದು, 380 ರಸ್ತೆಗಳು ಬಂದ್‌ ಆಗಿವೆ. ಜ.26ರ ವರೆಗೂ ಇದೇ ಪರಿಸ್ಥಿತಿ ಮುಂದು ವರಿಯಲಿದ್ದು, ಲಘು ಪ್ರಮಾಣದ ಮಳೆ ಮತ್ತು ಹಿಮವರ್ಷ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

-ಕಣಿವೆಯಲ್ಲಿ ರಾ.ಹೆದ್ದಾರಿ ಬಂದ್‌
-ಉತ್ತರಾಖಂಡದ ಚಮೋಲಿ ಜಿಲ್ಲೆ ಯಲ್ಲಿ 47 ಗ್ರಾಮ ಹಿಮಾವೃತ
-ಕೇದಾರನಾಥ, ಬದರೀನಾಥಕ್ಕೂ ಹಿಮದ ಹೊದಿಕೆ
-ಹಿಮಾಚಲ ಪ್ರದೇಶದಲ್ಲಿ 380 ರಸ್ತೆಗಳು ಬಂದ್‌
-ವಿಮಾನಗಳ ಸಂಚಾರ ವ್ಯತ್ಯಯ

Advertisement
Advertisement

Udayavani is now on Telegram. Click here to join our channel and stay updated with the latest news.

Next