Advertisement

Sneharshi movie review; ಡೆಲಿವರಿ ಬಾಯ್ಸ್ ಓಟದ ಹಿಂದಿನ ನೋಟ

12:28 PM Dec 16, 2023 | Team Udayavani |

ಈಗ ಎಲ್ಲ ಕಡೆ ಆನ್‌ಲೈನ್‌ ಜಮಾನ. ಕೂತಲ್ಲಿಯೇ ಸರಕು, ಸೇವೆಗಳು ಎಲ್ಲವೂ ಮೊಬೈನಲ್‌ನಲ್ಲೇ ಲಭ್ಯವಾಗುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಇನ್ನು ಆಲ್‌ಲೈನ್‌ ಸರ್ವೀಸ್‌ ಗಳಂತೂ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು, ನಿಗದಿತ ಸಮಯಕ್ಕೆ ಸರಕು, ಸೇವೆಗಳನ್ನು ತಲುಪಿಸುವಲ್ಲಿ ಡೆಲಿವರಿ ಬಾಯ್ಸ ಪಾತ್ರ ತುಂಬ ಮಹತ್ವದ್ದಾಗಿರುತ್ತದೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುವ ಇಂಥ ಡೆಲಿವರಿ ಬಾಯ್ಸ್ ಪ್ರತಿದಿನ ತಮ್ಮ ಕಂಪೆನಿಗಳು ಕೊಡುವ ಟಾರ್ಗೆಟ್‌ ಡೆಲಿವರಿ ರೀಚ್‌ ಮಾಡುವಷ್ಟರಲ್ಲಿ ಹೈರಾಣಾಗಿರುತ್ತಾರೆ. ಇಂಥ ಡೆಲಿವರಿ ಬಾಯ್ಸ ಕೆಲಸದ ಒತ್ತಡ, ಅವರ ಜೀವನ, ಪ್ರತಿದಿನ ಅವರು ಎದುರಿಸುವ ಸಂಕಷ್ಟ, ಸವಾಲುಗಳು ಅದರ ಹಿಂದಿರುವ ಆನ್‌ ಲೈನ್‌ ಸರ್ವೀಸ್‌ ಕಂಪೆನಿಗಳ ಮಾಫಿಯಾ ಹೇಗಿರುತ್ತದೆ ಎಂಬುದರ “ಚಿತ್ರ’ಣವೇ ಈ ವಾರ ತೆರೆಗೆ ಬಂದಿರುವ “ಸ್ನೇಹರ್ಷಿ’ ಸಿನಿಮಾದ ಕಥಾಹಂದರ.

Advertisement

ಮಧ್ಯಮ ವರ್ಗದ ಕುಟುಂದ ಹುಡುಗ ಪೃಥ್ವಿ ಪೊಲೀಸ್‌ ಅಧಿಕಾರಿಯಾಗಬೇಕು ಎಂಬುದು ಆತನ ತಾಯಿ ಪಾಯಿಂಟ್‌ ಪರಿಮಳ ಕನಸು. ಆದರೆ ಮಗನಿಗೋ ಪೊಲೀಸ್‌ ಆಗೋದು ಅಂದ್ರೆ ಒಂಚೂರು ಇಷ್ಟವಿಲ್ಲದ ಮಾತು. ತಾನಾಯಿತು, ತನ್ನ ಸ್ನೇಹಿತರಾಯಿತು ಎಂದು ಜಾಲಿಯಾಗಿ ಓಡಾಡಿಕೊಂಡಿದ್ದ ಪೃಥ್ವಿ ಜೀವನದಲ್ಲಿ ನಡೆಯುವ ಘಟನೆಯೊಂದು ಆತನನ್ನು ಸಮಾಜದ ವ್ಯವಸ್ಥೆಯೊಂದರ ವಿರುದ್ದ ತಿರುಗಿ ಬೀಳುವಂತೆ ಮಾಡುತ್ತದೆ. ಡೆಲಿವರಿ ಬಾಯ್‌ ಆಗಿದ್ದ ತನ್ನ ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆಯುವಂತೆ ಮಾಡಿದ ಆನ್‌ಲೈನ್‌ ಡೆಲಿವರಿ ಸರ್ವೀಸ್‌ ಕಂಪೆನಿಯ ವಿರುದ್ದ ಪೃಥ್ವಿ ತೊಡೆತಟ್ಟಿ ನಿಲ್ಲುತ್ತಾನೆ. ಈ ಹೋರಾಟ ಹೇಗಿರುತ್ತದೆ? ಅಂತಿಮವಾಗಿ ವ್ಯವಸ್ಥೆಯಲ್ಲಿ ಏನೇನು ಬದಲಾಗುತ್ತದೆ ಎಂಬುದೇ “ಸ್ನೇಹರ್ಷಿ’ ಸಿನಿಮಾದ ಕ್ಲೈಮ್ಯಾಕ್ಸ್‌. ಅದು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.

ಆನ್‌ಲೈನ್‌ ಡೆಲಿವರಿ ಸರ್ವೀಸ್‌ ಕಂಪೆನಿಗಳ ಧೋರಣೆ, ಡೆಲಿವರಿ ಬಾಯ್ಸ ಒತ್ತಡ, ಗ್ರಾಹಕರ ಮನಸ್ಥಿತಿ ಎಲ್ಲವನ್ನೂ “ಸ್ನೇಹರ್ಷಿ’ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಾಯಕ ನಟ ಕಂ ನಿರ್ದೇಶಕ ಕಿರಣ್‌ ನಾರಾಯಣ್‌. ಪ್ರಚಲಿತದಲ್ಲಿರುವ ವಿಷಯವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಿನಿಮಾ ಟಚ್‌ ಕೊಟ್ಟಿರುವ ಚಿತ್ರತಂಡದ ಪ್ರಯತ್ನ ಪ್ರಶಂಸನಾರ್ಹ. ಚಿತ್ರದ ಕಥೆ ಚೆನ್ನಾಗಿದ್ದು, ನಿರೂಪಣೆಗೆ ಕೊಂಚ ವೇಗ ಸಿಕ್ಕಿದ್ದರೆ, “ಸ್ನೇಹರ್ಷಿ’ಯ ಓಟ ಇನ್ನಷ್ಟು ವೇಗವಾಗಿರುವ ಸಾಧ್ಯತೆಗಳಿದ್ದವು.

ಇನ್ನು ನಾಯಕನಾಗಿ ಮತ್ತು ನಿರ್ದೇಶಕನಾಗಿ ಕಿರಣ್‌ ನಾರಾಯಣ್‌ ಚೊಚ್ಚಲ ಪ್ರಯತ್ನದಲ್ಲೇ ಒಂದಷ್ಟು ಭರವಸೆ ಮೂಡಿಸುತ್ತಾರೆ. ಡೈಲಾಗ್ಸ್‌ ಡೆಲಿವರಿ, ಮ್ಯಾನರಿಸಂ, ಆ್ಯಕ್ಷನ್‌ ಲುಕ್‌ನಲ್ಲಿ ಕಿರಣ್‌ ಗಮನ ಸೆಳೆಯುತ್ತಾರೆ. ಸಿನಿಮಾದ ಛಾಯಾಗ್ರಹಣ ಮತ್ತು ಸಂಕಲನ ತೆರೆಮೇಲೆ “ಸ್ನೇಹರ್ಷಿ’ಯನ್ನು ಕಲರ್‌ಫ‌ುಲ್‌ ಆಗಿ ಕಾಣುವಂತೆ ಮಾಡಿದೆ. ಒಂದೆರಡು ಹಾಡುಗಳು ಗುನುಗುವಂತಿದ್ದು, ಅಲ್ಲಲ್ಲಿ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ಪ್ಲಸ್‌ ಆಗಿದೆ. ಸುಧಾ ಬೆಳವಾಡಿ, ನಾಯಕಿ ಸಂಜನಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ಒಟ್ಟಾರೆ ಲವ್‌, ಆ್ಯಕ್ಷನ್‌, ಕಾಮಿಡಿ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡು ತೆರೆಮುಂದೆ ಬಂದಿರುವ “ಸ್ನೇಹರ್ಷಿ’ಯನ್ನು ಮಾಸ್‌ ಆಡಿಯನ್ಸ್‌ ಒಮ್ಮೆ ಕಣ್ತುಂಬಿಕೊಂಡು ಬರಲು ಅಡ್ಡಿಯಿಲ್ಲ.

Advertisement

ಜಿ.ಎಸ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next