Advertisement

Smuggling:ಹಾವಿನ ವಿಷದ ಕಳ್ಳ ಸಾಗಾಣಿಕೆ: ಲಾಭದಾಯಕ ಉದ್ಯಮವೇ, ಸಾಂಪ್ರದಾಯಿಕ ಔಷಧಿಯೇ?

12:31 PM Feb 15, 2024 | Team Udayavani |

ಇತ್ತೀಚೆಗೆ, ಅಧಿಕಾರಿಗಳು ಭಾರತ – ಬಾಂಗ್ಲಾದೇಶ ಗಡಿಯಲ್ಲಿ 1 ಮಿಲಿಯನ್ ಡಾಲರ್ (ಅಂದಾಜು 8.5 ಕೋಟಿ ರೂಪಾಯಿ) ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದರು. ಕಳ್ಳ ಸಾಗಾಣಿಕೆದಾರರು ಈ ಅಪಾಯಕಾರಿ ವಸ್ತುವನ್ನು ಚೀನಾಗೆ ಸಾಗಿಸುತ್ತಿರುವ ಕಳವಳಕ್ಕೆ ಈ ಬೆಳವಣಿಗೆ ಹೆಚ್ಚಿನ ಬೆಳಕು ಚೆಲ್ಲಿದೆ. ಆದರೆ, ಹಾವಿನ ವಿಷದ ತಜ್ಞರು ಕೆಲವು ನಿರ್ದಿಷ್ಟ ಸಮರ್ಥನೆಗಳ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ಹಾವಿನ ವಿಷವನ್ನು ರೇವ್ ಪಾರ್ಟಿಗಳಲ್ಲಿ ಮಾದಕ ದ್ರವ್ಯವಾಗಿ ಉಪಯೋಗಿಸಲಾಗುತ್ತದೆ ಎಂಬುದರ ಕುರಿತು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಭಾರತೀಯ ಗಡಿ ರಕ್ಷಣಾ ಪಡೆಯ (ಬಿಎಸ್ಎಫ್) ಅಧಿಕಾರಿಗಳು ಬಾಂಗ್ಲಾದೇಶದೊಡನೆ ಗಡಿ ಹಂಚಿಕೊಳ್ಳುವ ಭಾರತದ ಪೂರ್ವದ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಓರ್ವ ವ್ಯಕ್ತಿಯನ್ನು ಫೆಬ್ರವರಿ 8(ಗುರುವಾರ)ರಂದು ಬಂಧಿಸಿದ್ದರು. ದಕ್ಷಿಣ ದಿನಾಜ್‌ಪುರ್ ಜಿಲ್ಲೆಯ ಆತನ ಮನೆಯಿಂದ ಬಿಎಸ್ಎಫ್ ಅಧಿಕಾರಿಗಳು ಅಂದಾಜು 2 ಕೆಜಿಯಷ್ಟು ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದರು. ಈ ರೀತಿ ವಶಪಡಿಸಿಕೊಂಡ ವಿಷದ ಮೌಲ್ಯ ಅಂದಾಜು 12 ಕೋಟಿ ರೂಪಾಯಿ ಎನ್ನಲಾಗಿದೆ.

ಬಿಎಸ್ಎಫ್ ಈಸ್ಟರ್ನ್ ಕಮಾಂಡಿನ ಕಾರ್ಯಾಚರಣಾ ಮುಖ್ಯಸ್ಥರಾದ ಸುರ್‌ಜೀತ್ ಸಿಂಗ್ ಗುಲೇರಿಯಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಆ ಪ್ರದೇಶದಲ್ಲಿ ಓರ್ವ ವ್ಯಕ್ತಿ ಜಾರ್ ಒಂದರಲ್ಲಿ ಹಾವಿನ ವಿಷ ಸಂಗ್ರಹಿಸುತ್ತಿದ್ದಾನೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಲಾಯಿತು ಎಂದಿದ್ದಾರೆ. ಈ ರೀತಿ ವಶಪಡಿಸಿಕೊಂಡ ವಿಷವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವಿವರಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಹಾಜರುಪಡಿಸಲಾಗುತ್ತದೆ ಎಂದಿದ್ದಾರೆ.

ಗುಲೇರಿಯಾ ಅವರು ಅಪರಾಧಿಗಳು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ತೆರೆದ ಗಡಿಯನ್ನು ಬಳಸಿಕೊಂಡು, ದ್ರವ, ಪುಡಿ, ಮತ್ತು ಜೆಲ್ ರೂಪದಲ್ಲಿ ಹಾವಿನ ವಿಷವನ್ನು ಚೀನಾಗೆ ಕಳ್ಳ ಸಾಗಾಣಿಕೆ ನಡೆಸುತ್ತಿದ್ದಾರೆ ಎಂದಿದ್ದಾರೆ. ಬಿಎಸ್ಎಫ್ ದಾಖಲೆಗಳ ಪ್ರಕಾರ, 2017 ಮತ್ತು 2023ರ ನಡುವೆ 165 ಕೋಟಿ ರೂಪಾಯಿ ಮೌಲ್ಯದ 17.7 ಕೆಜಿ ಹಾವಿನ ವಿಷವನ್ನು ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸಂದರ್ಭದಲ್ಲಿ, ಕೆಲವೊಂದು ಬಾರಿ ಹಾವಿನ ವಿಷ ‘ಮೇಡ್ ಇನ್ ಫ್ರಾನ್ಸ್’ ಎಂದು ನಮೂದಿತವಾಗಿದ್ದ ಕ್ರಿಸ್ಟಲ್ ಜಾರ್‌ಗಳಲ್ಲಿ ಲಭಿಸಿದ್ದವು. ಆದ್ದರಿಂದ ಇವುಗಳು ಯುರೋಪ್‌ನಿಂದ ಬಂದಿರುವ ಸಾಧ್ಯತೆಗಳಿವೆ ಎಂದು ಬಿಎಸ್ಎಫ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Advertisement

2022ರ ಪ್ರಕರಣದಲ್ಲಿ, ‘ಕೋಬ್ರಾ ಎಸ್‌ಪಿ, ರೆಡ್ ಡ್ರಾಗನ್, ಮೇಡ್ ಇನ್ ಫ್ರಾನ್ಸ್ ಕೋಡ್ ನಂಬರ್: 6097’ ಎಂದು ಬರೆದಿದ್ದ ಹಳದಿ ಲೋಹದ್ ಟ್ಯಾಗ್ ಲಭಿಸಿತ್ತು.

ಹಾವಿನ ವಿಷದ ಕುರಿತು ಹೆಚ್ಚಿನ ಅಧ್ಯಯನ ನಡೆಸುವ, ಅದರಿಂದ ವಿವಿಧ ಉತ್ಪನ್ನಗಳನ್ನು ನಡೆಸುವ ಆಸ್ಟ್ರೇಲಿಯಾದ ವೆನಮ್ ಸಪ್ಲೈಸ್ ಇನ್ ಆಸ್ಟ್ರೇಲಿಯಾದ ಮುಖ್ಯಸ್ಥರಾದ ನೇಥನ್ ಡನ್‌ಸ್ಟನ್ ಅವರು ಹಾವಿನ ವಿಷದ ಕಳ್ಳ ಸಾಗಾಣಿಕೆ ಇತರ ವಸ್ತುಗಳ ಸಾಗಾಣಿಕೆಗಿಂತ ಸುಲಭವಾಗಿದ್ದರೂ, ಕಳ್ಳ ಸಾಗಾಣಿಕಾದಾರರು ಅದನ್ನು ಫ್ರಾನ್ಸ್‌ನಿಂದ ಭಾರತಕ್ಕೆ ತರುವ ಸಾಧ್ಯತೆಗಳು ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾಗರ ಹಾವುಗಳು ಭಾರತ, ಬಾಂಗ್ಲಾದೇಶ, ಮತ್ತು ಚೀನಾದಾದ್ಯಂತ ಕಂಡುಬರುತ್ತವಾದ್ದರಿಂದ, ಕಳ್ಳ ಸಾಗಾಣಿಕೆಯಾಗುವ ವಿಷ ಇದೇ ಪ್ರದೇಶದಿಂದ ಬಂದಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ನೇಥನ್ ಹೇಳಿದ್ದಾರೆ.

ಚೀನಾದಲ್ಲಿ ಹಾವಿನ ವಿಷವನ್ನು ಬಳಸಿ ಹಲವು ಸಾಂಪ್ರದಾಯಿಕ ಔಷಧಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ಆದರೆ ನೇಥನ್ ಡನ್‌ಸ್ಟನ್ ಅವರು ಆಯಾ ದೇಶಗಳಲ್ಲಿ ಲಭ್ಯವಾಗುವ ಹಾವಿನ ವಿಷ ಅಲ್ಲಿನ ಅವಶ್ಯಕತೆಗಳಿಗೆ ಸಾಕಾಗುತ್ತದೆ ಎಂದಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಜೀವ ವಿಕಾಸದ ಅಧ್ಯಯನ ನಡೆಸುವ, ಅಧ್ಯಾಪಕರೂ ಆಗಿರುವ ಕಾರ್ತಿಕ್ ಸುನಾಗರ್ ಅವರು ವಶಪಡಿಸಿಕೊಳ್ಳಲಾದ ವಿಷದ ಪ್ರಮಾಣದ ಕುರಿತು ಪ್ರಶ್ನಿಸಿದ್ದಾರೆ. ಇಂತಹ ಹೇಳಿಕೆಗಳನ್ನು ಸ್ಪಷ್ಟಪಡಿಸಲು ವೈಜ್ಞಾನಿಕ ಸಾಕ್ಷಿಗಳ ಅವಶ್ಯಕತೆಯೂ ಇದೆ ಎಂದಿದ್ದಾರೆ.

2018ರಿಂದ 2020ರ ನಡುವೆ ದೇಶದ ವಿವಿಧ ಭಾಗಗಳಲ್ಲಿ ಸಂಗ್ರಹಿಸಲಾದ ವಿಷವನ್ನು ಕಾರ್ತಿಕ್ ಅವರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಅವುಗಳು ವಿಷವಲ್ಲ, ಬದಲಿಗೆ ಸಾಮಾನ್ಯ ರಾಸಾಯನಿಕಗಳು ಎಂದು ಗುರುತಿಸಲ್ಪಟ್ಟಿದ್ದವು.

ಗಡಿ ಭದ್ರತಾ ಪಡೆಯ ಪೊಲೀಸರು ತಮಗೆ ಒಂದೇ ಬಾರಿಗೆ ಹಲವು ಲೀಟರ್‌ಗಳಷ್ಟು ಹಾವಿನ ವಿಷ ಲಭಿಸಿದೆ ಎಂದರೂ, ವಾಸ್ತವದಲ್ಲಿ ಅದರಲ್ಲಿ ಹಾವಿನ ವಿಷವಿದ್ದರೂ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿಷ ಇದ್ದಿರಬಹುದು ಎಂದಿದ್ದಾರೆ.

ಭಾರತೀಯ ಉಪಖಂಡದಾದ್ಯಂತ ಏಳು ವರ್ಷಗಳ ಕಾಲ ವೈಜ್ಞಾನಿಕ ಉದ್ದೇಶಗಳಿಗಾಗಿ ಹಾವಿನ ವಿಷ ಸಂಗ್ರಹಿಸುವ ತಂಡದ ನೇತೃತ್ವ ವಹಿಸಿದ್ದ ಕಾರ್ತಿಕ್ ಸುನಾಗರ್ ಅವರು ಒಂದು ಹಾವಿನಿಂದ ವಿಷ ಸಂಗ್ರಹಿಸಿದಾಗ, ಕೇವಲ ಕೆಲವು ನೂರು ಮಿಲಿಗ್ರಾಂ ವಿಷ ಮಾತ್ರವೇ ಲಭಿಸುತ್ತದೆ ಎಂದಿದ್ದಾರೆ.

ಸುನಾಗರ್ ಅವರ ಪ್ರಕಾರ, 4 ಲಕ್ಷ ರೂಪಾಯಿ ಪಾವತಿಸಿದರೆ, ತಮಿಳುನಾಡಿನ ವಿಷದ ಹಾವುಗಳನ್ನು ಹಿಡಿಯುವ ಸಹಕಾರಿ ಸಂಘದಿಂದ ಭಾರತದಲ್ಲಿ ಸಾಮಾನ್ಯವಾಗಿ ಸಿಗುವ ನಾಲ್ಕು ಹಾವುಗಳಾದ ನಾಗರಹಾವು, ಕ್ರೈಟ್ (ಕಟ್ಟು ಹಾವು), ರಸೆಲ್ಸ್ ವೈಪರ್ (ಮಂಡಲ ಹಾವು), ಸಾ ಸ್ಕೇಲ್ಡ್ ವೈಪರ್ (ಗರಗಸ ಮಂಡಲ) ಹಾವುಗಳ ಕೇವಲ ನಾಲ್ಕು ಗ್ರಾಂ ವಿಷ ಲಭಿಸುತ್ತದೆ.

ಖ್ಯಾತ ಭಾರತೀಯ ಸರೀಸೃಪ ವಿಜ್ಞಾನಿಯಾದ ರಾಮುಲಸ್ ವಿಟಾಕರ್ ಅವರು ಹಾವಿನ ವಿಷದಲ್ಲಿ ಬಹುಪಾಲು ಪ್ರೊಟೀನ್ ಮಾತ್ರವೇ ಇದ್ದು, ಹಾವಿನಿಂದ ಹೊರತೆಗೆದ ಕ್ಷಣದಲ್ಲೇ ಅದು ಒಡೆಯುತ್ತದೆ ಎಂದು ವಿವರಿಸುತ್ತಾರೆ. ಆದ್ದರಿಂದ, ಹಾವಿನ ವಿಷ ಎಂದು ವಶಪಡಿಸಿಕೊಂಡಿರುವ ಬಾಟಲ್‌ಗಳಲ್ಲಿರುವ ದ್ರವ ವಿಷ ಸಂಗ್ರಹಿಸಿದ ಕೆಲ ಕ್ಷಣದಲ್ಲೇ ನಿರುಪಯುಕ್ತವಾಗುತ್ತದೆ ಎಂದಿದ್ದಾರೆ.

ಬಿಎಸ್ಎಫ್ ಅಧಿಕಾರಿ ಗುಲೇರಿಯಾ ಅವರು ಗಡಿ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿರುವ ವಿಷ ನೈಜ ಹಾವಿನ ವಿಷವಾಗಿದ್ದು, ಕೃತಕವಾಗಿ ಉತ್ಪಾದಿಸಿದ ಅಥವಾ ಬೇರೆ ಬೇರೆ ವಸ್ತುಗಳಿಂದ ನಿರ್ಮಿಸಿರುವ ಉತ್ಪನ್ನವಲ್ಲ ಎಂದಿದ್ದಾರೆ. ಅವರು ಈ ವಿಷವನ್ನು ಪ್ರತಿ ಬಾರಿಯೂ ಅರಣ್ಯ ಇಲಾಖೆಯ ಮೂಲಕ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದಿದ್ದಾರೆ.

ಗಡಿ ಭದ್ರತಾ ಅಧಿಕಾರಿಗಳು ಹಾವಿನ ವಿಷವನ್ನು ಭಾರತದಲ್ಲಿ ನಡೆಯುವ ರೇವ್ ಪಾರ್ಟಿಗಳಲ್ಲಿ ಕಾಮೋತ್ತೇಜಕವಾಗಿಯೂ ಬಳಸಲಾಗುತ್ತದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ, ಭಾರತೀಯ ಯೂಟ್ಯೂಬರ್ ಎಲ್ವಿಷ್ ಯಾದವ್ ಎಂಬಾತನನ್ನು ನೋಯ್ಡಾದಲ್ಲಿ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ವ್ಯವಹಾರ ನಡೆಸಿದ ಆರೋಪದಡಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

2019ರಲ್ಲಿ, ಇಂಡಿಯನ್ ಜರ್ನಲ್ ಆಫ್ ಸೈಕಾಲಜಿಕಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದ್ದ, ‘ಸ್ನೇಕ್ ವೆನಮ್ ಯೂಸ್ ಆ್ಯಸ್ ಎ ಸಬ್ಸ್ಟಿಟ್ಯೂಟ್ ಫಾರ್ ಓಪಿಯಾಯ್ಡ್ಸ್: ಎ ಕೇಸ್ ರಿಪೋರ್ಟ್ ಆ್ಯಂಡ್ ರಿವ್ಯೂ ಆಫ್ ಲಿಟರೇಚರ್’ ಹೆಸರಿನ ಲೇಖನದಲ್ಲಿ, ಓಪಿಯಾಯ್ಡ್‌ಗಳ ಬದಲಿಗೆ, ಅಥವಾ ಅಮಲಿನ ಅನುಭವ ಹೊಂದಲು ಹಾವಿನ ವಿಷವನ್ನು ಬಳಸಿದ ಉದಾಹರಣೆಗಳನ್ನು ನಮೂದಿಸಲಾಗಿದೆ.

ಮೂಲತಃ ಓಪಿಯಂ ಪಾಪಿ ಸಸ್ಯಗಳಿಂದ ಪಡೆಯಲಾಗುವ ಓಪಿಯಾಯ್ಡ್‌ಗಳನ್ನು ನರಮಂಡಲದ ಮೇಲೆ ಅವುಗಳು ಬೀರುವ ಪರಿಣಾಮಗಳ ಕಾರಣದಿಂದಾಗಿ ನೋವು ನಿವಾರಣೆಗೆ ಔಷಧವಾಗಿಯೂ ಬಳಸಲಾಗುತ್ತದೆ. ಅವುಗಳು ನೋವಿನಿಂದ ಶಮನ ಒದಗಿಸುತ್ತವಾದರೂ, ಅವುಗಳ ಬಳಕೆಯ ವ್ಯಸನಕ್ಕೆ ತಿರುಗುವ, ಮತ್ತು ಓವರ್ ಡೋಸ್ ಆಗುವ ಅಪಾಯಗಳೂ ಇವೆ.

ಇಂಡಿಯನ್ ಜರ್ನಲ್ ಆಫ್ ಸೈಕಾಲಜಿ ಆ್ಯಂಡ್ ಫಾರ್ಮಕಾಲಜಿಯಲ್ಲಿ 2022ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಹಲವಾರು ಜನರು ಒಂದು ಮೊಂಡಾದ ವಸ್ತುವಿನಿಂದ ಹಾವಿನ ತಲೆಯ ಹಿಂಭಾಗಕ್ಕೆ ಹೊಡೆದು, ಅದು ಅವರ ಒಂದು ಕೈ ಬೆರಳು ಅಥವಾ ಕಾಲಿನ ಬೆರಳಿಗೆ ಕಚ್ಚುವಂತೆ ರೊಚ್ಚಿಗೆಬ್ಬಿಸುತ್ತಾರೆ.

ಸರೀಸೃಪ ವಿಜ್ಞಾನಿ ವಿಟೇಕರ್ ಅವರು ಹಾವಿನ ವಿಷವನ್ನು ರೇವ್ ಪಾರ್ಟಿಗಳಲ್ಲಿ ಬಳಸುವ ಸಾಧ್ಯತೆಯನ್ನು ಅರ್ಥವಿಲ್ಲದ ಸಾಧ್ಯತೆ ಎಂದು ತಳ್ಳಿ ಹಾಕಿದ್ದಾರೆ. ಜೀವಶಾಸ್ತ್ರಜ್ಞ ಕಾರ್ತಿಕ್ ಸುನಾಗರ್ ಅವರು ಹಾವಿನ ವಿಷ ಹೊಂದಿರುವ ಅಪಾಯಕಾರಿ ಗುಣಗಳಿಂದಾಗಿ ಅದನ್ನು ತಮಾಷೆಗಾಗಿ ಬಳಸುವ ಯೋಚನೆಗಳು ಸುಲಭ ಸಾಧ್ಯವಲ್ಲ ಎಂದಿದ್ದಾರೆ.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next