ಜಬಲ್ಪುರ: ಜಬಲ್ಪುರ – ಮುಂಬೈ ಗರೀಬ್ ರಥದ ಎಸಿ ಕೋಚ್‌ನಲ್ಲಿ ಹಾವೊಂದು ಟಿಕೆಟ್ ಇಲ್ಲದೆ ಪ್ರಯಾಣಿಸಿದೆ ಇದರಿಂದ ಎಸಿ ಕೋಚ್‌ನಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಭಾನುವಾರ (ಸೆ.22) ದಂಡು ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಜಬಲ್ಪುರದಿಂದ ಮುಂಬೈಗೆ ಹೊರಟಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ರೈಲು ಜಬಲ್‌ಪುರದಿಂದ ಹೊರಟು ಭೂಸಾವಲ್ ಮತ್ತು ಕಾಸರ ನಿಲ್ದಾಣದ ನಡುವೆ ತಲುಪಿದಾಗ ರೈಲಿನ ಎಸಿ ಕೋಚ್‌ನಲ್ಲಿ ಸುಮಾರುಐದು ಅಡಿ ಉದ್ದದ ಹಾವು ನೇತಾಡುತ್ತಿರುವುದು ಕಂಡುಬಂದಿದೆ. ಹಾವನ್ನು ಗಮನಿಸಿದ ಪ್ರಯಾಣಿಕರೊಬ್ಬರು ಇತರ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆಲ ಹೊತ್ತು ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದಾರೆ. ಬಳಿಕ ವಿಚಾರವನ್ನು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು, ಕೂಡಲೇ ರೈಲನ್ನು ನಿಲ್ಲಿಸಿದ ಅಧಿಕಾರಿಗಳು ಎಸಿ ಕೋಚ್ ಬಳಿ ದೌಡಾಯಿಸಿ ಪ್ರಯಾಣಿಕರನ್ನು ಸಮಾಧಾನ ಪಡಿಸಿದ್ದಾರೆ. ಬಳಿಕ ಅಧಿಕಾರಿಗಳ ತಂಡ ಹಾವಿನ ಕಾರ್ಯಾಚರಣೆಗೆ ಇಳಿದಿದ್ದಾರೆ ಆದರೆ ಹಾವು ಮಾತ್ರ ಎಲ್ಲೂ ಪತ್ತೆಯಾಗಿಲ್ಲ ಇದಾದ ಬಳಿಕ ಅಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಇನ್ನೊಂದು ಕೋಚ್ ಗೆ ಸ್ಥಳಾಂತರಿಸಿ ಬಳಿಕ ರೈಲು ಪ್ರಯಾಣ ಬೆಳೆಸಿತು.
ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಷಿತ್ ಶ್ರೀವಾಸ್ತವ್ ಘಟನೆಯನ್ನು ಗಮನಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಮತ್ತು ರೈಲ್ವೆ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದರು.