ಹಾವನ್ನು ಮುಗು, ಬಾಯಿಯಿಂದ ತೂರಿಸುವ ಈ ಹುಚ್ಚು ಸಾಹಸಿ ಬೇರೆ ಯಾವುದೋ ದೇಶದವರಲ್ಲ, ಭಾರತದವರೇ. ಅದಕ್ಕೂ ಮಿಗಿಲಾಗಿ ಚೆನ್ನೈ ನಿವಾಸಿ. ಅವರ ಹೆಸರು ಮನು. ಅವರಿಗೆ ಮೂವತ್ತಾರರ ಹರೆಯ. ಪ್ರೌಢಶಾಲೆಯಲ್ಲಿ ಎಂಟನೆಯ ತರಗತಿ ವಿದ್ಯಾರ್ಥಿಯಾಗಿರುವಾಗ ಅವರು ಮೂಗಿನ ಹೊಳ್ಳೆಯೊಳಗೆ ಚಾಕು ಮತ್ತು ಎರೇಸರ್ ಸೇರಿಸಿ ಬಾಯಿಯ ಮೂಲಕ ಹೊರಗೆಳೆಯುವ ಪ್ರಾಣಾಂತಿಕ ಸಾಹಸವನ್ನು ಪ್ರದರ್ಶಿಸಿ ಸಹಪಾಠಿಗಳನ್ನು ಬೆಚ್ಚಿಬೀಳಿಸುತ್ತಿದ್ದರು!
Advertisement
ಈ ಸಾಹಸಕ್ಕೆ ಪ್ರೇರಣೆ13 ವಯಸ್ಸಿನಲ್ಲಿ ಅವರಿಗೆ ಯೋಗ ಗುರುವೊಬ್ಬರ ಪರಿಚಯವಾಯಿತು. ಅವರಲ್ಲಿ ಯೋಗಾಭ್ಯಾಸ ಮಾಡುವಾಗ ಗುರುಗಳಲ್ಲಿ ಒಂದು ವಿಶಿಷ್ಟವಾದ ಶಕ್ತಿಯನ್ನು ಮನಗಂಡರು. ಅಲ್ಲಿ ಯೋಗ ಕಲಿಯುತ್ತಿದ್ದ ಪ್ರತಿಯೊಬ್ಬ ಶಿಷ್ಯನೂ ಏನಾದರೊಂದು ವಿಶೇಷ ಸಾಹಸದ ಕೈಚಳಕವನ್ನು ಪ್ರದರ್ಶಿಸುತ್ತಿದ್ದರು. ಅವರ ಉತ್ತೇಜನದಿಂದಾಗಿ ಪ್ರತಿಯೊಬ್ಬರೂ ಒಂದೊಂದು ವಿಶೇಷ ಸಾಮರ್ಥ್ಯವನ್ನು ಸಿದ್ಧಿಸಿಕೊಂಡು ಜನಪ್ರಿಯರಾದರು. ತಾನೂ ಅಂತಹ ಒಂದು ಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂಬ ಬಯಕೆ ಮನುವಿನ ಮನದಲ್ಲಿ ಮೂಡಿತು.
ಅದರ ಫಲವಾಗಿ ಒಂದು ನೀರುಹಾವನ್ನು ಹಿಡಿದು ಸಲೀಸಾಗಿ ಮೂಗಿನ ಹೊಳ್ಳೆಯ ಮೂಲಕ ಗಂಟಲಿಗಿಳಿಸಿ ಜೀವಂತವಾಗಿ ಅದನ್ನು ಬಾಯಿಯಲ್ಲಿ ಹೊರಗೆಳೆದು ತುಂಬ ಹೊತ್ತು ಹಾಗೆಯೇ ಇರಿಸಿಕೊಂಡರು. ಯೋಗದ ಮೂಲಕ ಹಾವಿಗೆ ಹೊರಗೆ ಬರಲು ಬೇಕಾದಷ್ಟು ದಾರಿಯನ್ನು ಮೂಗಿನೊಳಗೆ ಸಡಿಲುಗೊಳಿಸಲು ತನಗೆ ಸಾಧ್ಯವಾಯಿತೆಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಹಾವುಗಳು ಅವರಿಗೆ ಕಚ್ಚಿವೆಯಾದರೂ ವಿಷರಹಿತ ಹಾವುಗಳನ್ನು ಮಾತ್ರ ಈ ಪ್ರಯೋಗಕ್ಕೆ ಬಳಸಿಕೊಳ್ಳವುದರಿಂದ ಏನೂ ತೊಂದರೆಯಾಗಿರಲಿಲ್ಲ. ಒಮ್ಮೊಮ್ಮೆ ಅವರು ಮೂಗಿನ ಒಂದು ಹೊಳ್ಳೆಗೆ ಮರದ ಮೇಲಿರುವ ನೀಳವಾದ ವಿಷರಹಿತ ಮರಹಾವನ್ನು, ಇನ್ನೊಂದು ಹೊಳ್ಳೆಯೊಳಗೆ ಹಸಿರುಹಾವನ್ನು ತೂರಿಸಿ ಹೊರಗೆಳೆಯುವ ಸಾಹಸವನ್ನೂ ತೋರಿಸುತ್ತಾರೆ. ನನ್ನ ಈ ಹವ್ಯಾಸದಿಂದಾಗಿ ತುಂಬ ಮಂದಿ ಅಭಿಮಾನಿಗಳನ್ನು ಗಳಿಸಿದ್ದೇನೆ, ಜನರಿಗೆ ಮನರಂಜನೆ ಕೊಟ್ಟ ಕಾರಣ ಅವರ ಪ್ರೀತಿ ಸಂಪಾದಿಸಿದ್ದೇನೆ ಎನ್ನುತ್ತಾರೆ ಸ್ನೇಕ್ ಮನು.
Related Articles
ಅಂದ ಹಾಗೆ ಈಗಾಗಲೆ ಮನು ಬೇರೊಂದು ಸಾಧನೆ ಮೆರೆದು ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. 2004ರಲ್ಲಿ ಮನು ಹತ್ತು ಸೆಂಟಿಮೀಟರ್ ಉದ್ದದ ಇನ್ನೂರು ಎರೆಹುಳಗಳನ್ನು ಮೂವತ್ತು ಸೆಕೆಂಡ್ ಅವಧಿಯಲ್ಲಿ ಶ್ಯಾವಿಗೆಯ ಹಾಗೆ ಗುಳಮ್ಮನೆ ನುಂಗಿ ಗಿನ್ನೆಸ್ ದಾಖಲೆಗೆ ಸೇರಿದ್ದಾರೆ. ಸದ್ಯಕ್ಕೆ ವಿಷರಹಿತ ಹಾವುಗಳನ್ನು ಮೂಗಿನೊಳಗೆ ತೂರಿಸಿ ಹೊರಗೆ ತೆಗೆಯುತ್ತಿರುವ ಅವರು ಮುಂದೆ ನಾಗರಹಾವಿನಂಥ ವಿಷದ ಹಾವುಗಳನ್ನು ಕೂಡ ಯೋಗಬಲದಿಂದ ನಿಸ್ತೇಜಗೊಳಿಸಿ ಇದೇ ರೀತಿ ಹೊರಗೆಳೆಯುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. “ನನ್ನದು ಏನಿದ್ದರೂ ಯೋಗಾಭ್ಯಾಸದ ಫಲ. ಯೋಗದ ಜ್ಞಾನವಿಲ್ಲದವರು ದಯವಿಟ್ಟು ಹಾವನ್ನು ತೂರಿಸಿಕೊಳ್ಳಲು ಹೋಗಬೇಡಿ. ಹಾವೂ ಸಾಯುತ್ತದೆ, ಸಾಹಸ ಮಾಡಲು ಹೋದವರಿಗೂ ಪ್ರಾಣಾಪಾಯ’ ಎಂದು ಅವರು ವಿನಂತಿಸಿಕೊಳ್ಳುತ್ತಾರೆ.
Advertisement
ಪ. ರಾಮಕೃಷ್ಣ ಶಾಸ್ತ್ರಿ