Advertisement

ನಾಗರಹಾವಿಗೆ ಧನ್ವಂತರಿಯಾದ ಉರಗ ತಜ್ಞ ಶ್ರೀಧರ ಐತಾಳ್‌

07:25 AM Aug 11, 2017 | Karthik A |

ಕೋಟೇಶ್ವರ: ನಾಗರ ಹಾವು ಸಹಿತ ವಿಷಪೂರಿತ ಹಾವುಗಳನ್ನು ಅನಾಯಾಸವಾಗಿ ಹಿಡಿಯುವ ಪ್ರವೃತ್ತಿ ಹೊಂದರುವ ಶ್ರೀಧರ ಐತಾಳ್‌ ಅವರು ಈವರೆಗೆ ದಾಖಲೆಯ 4000 ಕ್ಕೂ ಮಿಕ್ಕಿ ಹಾವುಗಳನ್ನು ಹಿಡಿಯುವುದರೊಡನೆ ಈ ಭಾಗದಲ್ಲಿ ಉರಗ ತಜ್ಞರಾಗಿ ಜನಾನುರಾಗಿಯಾಗಿದ್ದಾರೆ.

Advertisement

ಹಾವು ಐತಾಳರೆಂದೇ ಪ್ರಸಿದ್ಧಿ
ಯಾವುದೇ ಫಲಾಪೇಕ್ಷೆ ಇಲ್ಲದೇ ಕರೆದ ಮನೆಯೆಡೆಗೆ ಸಾಗಿ ಅನಾಯಾಸವಾಗಿ ಹಾವುಗಳನ್ನು ಕೈಚಳಕದಿಂದ ಹಿಡಿದು ಮನೆಯವರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವ ಐತಾಳ್‌ ಅವರು ತಮ್ಮ 74 ರ ಹರೆಯದಲ್ಲೂ ಈ ಒಂದು ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ತಾಲೂಕಿನ ಎಲ್ಲರ ಬಾಯಲ್ಲಿ ‘ಹಾವು ಐತಾಳ’ರೆಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮ ಗುರುಗಳಾದ ಉರಗ ತಜ್ಞ ಪುತ್ತೂರಿನ ಡಾ| ರವೀಂದ್ರ ಐತಾಳ ಅವರ ಮಾರ್ಗದರ್ಶನದಲ್ಲಿ ಈ ಒಂದು ಗೀಳನ್ನು ಬೆಳೆಸಿಕೊಂಡಿರುವ ಐತಾಳರು ಉತ್ತಮ ಸಂಗೀತಗಾರನಾಗಿದ್ದು ಶಾಸ್ತ್ರೀಯ ಸಂಗೀತ ಸಹಿತ ಸಿನೆಮಾ ಗೀತೆಗಳನ್ನು ಸುಶ್ರಾವ್ಯ ಕಂಠದ ಮೂಲಕ ಹಾಡುವುದರೊಡನೆ ಜನಮನ ಸೂರೆಗೊಂಡಿದ್ದಾರೆ. ತಬಲ ವಾದಕರಾಗಿಯೂ ಗುರುತಿಸಿಕೊಂಡಿರುವ ಇವರು ವಿವಿಧ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ತಬಲ ವಾದಕರಾಗಿ ನಾಟಕಕ್ಕೆ ಹಿನ್ನಲೆ ಸಂಗೀತ ನೀಡಿರುತ್ತಾರೆ.

ಗ್ರಾಮಸ್ಥರು ನಿಬ್ಬೆರಗು
ಇತ್ತೀಚೆಗೆ ಬಸ್ರೂರು ಮೂರುಕೈ ನಿವಾಸಿ ರಾಮಾಚಾರಿ ಅವರ ಮನೆಯಲ್ಲಿದ್ದ 7 ಫೀಟ್‌ ಉದ್ದದ ಬಹಳ ಅಪೂರ್ವವಾದ ನಾಗರ ಹಾವನ್ನು ಕಂಟಕವಿಲ್ಲದೆ ಹಿಡಿದು ದೂರದ ಅರಣ್ಯಕ್ಕೆ ಒಯ್ಯುವುದರೊಡನೆ ನೆರೆದ ಗ್ರಾಮಸ್ಥರನ್ನು ನಿಬ್ಬೆರಗುಗೊಳಿಸಿದರು.

ಉರಗೋದ್ಯಾನಕ್ಕಾಗಿ ಬೇಡಿಕೆ
ಕೋಟೇಶ್ವರ ಆಸುಪಾಸಿನಲ್ಲಿ ಸರಕಾರಿ ಸ್ವಾಯತ್ತೆಯ ಒಂದಿಷ್ಟು ಭೂಮಿಯನ್ನು ನೀಡಿದಲ್ಲಿ ಅಲ್ಲಿ ಉರಗೋದ್ಯಾನ ಆರಂಭಿಸಿ ನಾನಾ ರೀತಿಯ ಹಾವುಗಳಿಗೆ ಆಶ್ರಯ ನೀಡಿ ವೈವಿಧ್ಯಮಯ ಹಾವುಗಳ ಸಂಗ್ರಹದೊಡನೆ ಮ್ಯೂಸಿಯಂ ಆರಂಭಿಸುವ ಹಂಬಲ ಹೊಂದಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಜನರು ನೀಡುವ ಹಣವನ್ನು ಪಡೆದು ತೃಪ್ತಿ ಪಡುವ ಶ್ರೀಧರ ಐತಾಳ್‌ ಅವರು ಕುಂದಾಪುರ ತಾಲೂಕಿನ ಉರಗ ತಜ್ಞರಾಗಿ ಪ್ರಸಿದ್ಧರಾಗಿದ್ದಾರೆ.

ಧನ್ವಂತರಿ ಸದೃಶ್ಯರು
ಕೇವಲ ಹಾವುಗಳನ್ನು ಹಿಡಿಯುವುದಲ್ಲದೇ ನಾನಾ ಕಾರಣಗಳಿಂದ ಗಾಯಗೊಂಡ ವಿಷಪೂರಿತ ನಾಗರ ಹಾವುಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ಬದುಕಿಸುವುದರ ಮೂಲಕ ಧಾರ್ಮಿಕ ನಂಬಿಕೆಯ ಜನರಿಗೆ ಧನ್ವಂತರಿಯಾಗಿರುತ್ತಾರೆ. ಈಶ್ವರಿ ಬಳ್ಳಿ, ಚಂದನ, ಪಚ್ಚ ಕರ್ಪೂರ, ಹೆಬ್ಟಾಡಿ ಸೊಪ್ಪು ಮುಂತಾದ ಔಷಧ ದ್ರವ್ಯಗಳನ್ನು ಗಾಯಗೊಂಡ ಹಾವುಗಳಿಗೆ ಸವರಿ ಮನೆಯಲ್ಲೇ ಚಿಕಿತ್ಸೆ ನೀಡಿ ಅವುಗಳನ್ನು ಗುಣಪಡಿಸಿ ಸರಕಾರಿ ಸ್ವಾಮ್ಯದ ದಟ್ಟಾರಣ್ಯಕ್ಕೆ ಬಿಡುವ ಪ್ರವೃತ್ತಿ ಹೊಂದಿರುವ ಇವರ ಸಾಧನೆ ಅದ್ಭುತ.

Advertisement

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next