Advertisement

ಸಾವಿರಾರು ಹಾವುಗಳನ್ನು ರಕ್ಷಿಸಿದ ಸ್ನೇಕ್ ಡ್ಯಾನಿಯಲ್‌ ನಾಗರ ಹಾವು ಕಚ್ಚಿ ಸಾವು

10:47 AM Dec 16, 2020 | sudhir |

ಬಾಗಲಕೋಟೆ: ನಗರದ ಖ್ಯಾತ ಉರಗ ಪ್ರೇಮಿ, ಜಲಚರ ಪ್ರಾಣಿಗಳ ರಕ್ಷಕ ಡ್ಯಾನಿಯಲ್‌ ನ್ಯೂಟನ್‌ (43) ಹಾವು ಕಡಿತದಿಂದಲೇ ಮಂಗಳವಾರ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಾದ್ಯಂತ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು. ಅತ್ಯಂತ ವಿಷಕಾರಿ ಹಾವುಗಳನ್ನು ಹಿಡಿದು ಜನರ ಪ್ರಾಣ ಉಳಿಸುವಲ್ಲಿ ಶ್ರಮಿಸಿದ್ದರು.

Advertisement

ಅಲ್ಲದೇ ಹಳೆಯ ಕಾಲದ ಬಾವಿಗಳಲ್ಲಿ ಎಮ್ಮೆ, ಆಡು, ಕುರಿ ಬಿದ್ದಾಗಲೂ ಜೀವದ ಹಂಗು ತೊರೆದು ಅವುಗಳ ರಕ್ಷಿಸಿದ್ದರು. ಮಂಗಳವಾರ ತಾಲೂಕಿನ ಶಿಗಿಕೇರಿ ಕ್ರಾಸ್‌ ಬಳಿಯ ಕೆಎಚ್‌ಬಿ ಕಾಲೋನಿ ಮನೆಯೊಂದರಲ್ಲಿ ಹಾವು ಬಂದಿದೆ ಎಂದು ಕರೆ ಬಂದಾಗ ಕೂಡಲೇ ಅಲ್ಲಿಗೆ ಧಾವಿಸಿದ್ದ ಡ್ಯಾನಿಯಲ್‌ ನಾಗರಹಾವು ಹಿಡಿದಿದ್ದರು. ಬಳಿಕ ಅದನ್ನು ಕಾಡಿಗೆ ಬಿಡಲೆಂದು
ಚೀಲದಲ್ಲಿ ಹಾಕುವ ವೇಳೆ ಹಾವು ಕಚ್ಚಿದ್ದರಿಂದ ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಅಸುನೀಗಿದ್ದಾರೆ.

ಡ್ಯಾನಿಯಲ್‌ ಈವರೆಗೆ 3411 ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದು, ಅದರಲ್ಲಿ 1026 ನಾಗರ ಹಾವುಗಳಿದ್ದವು. ಹಾವು ಹಿಡಿಯುವ ವೇಳೆ ಒಟ್ಟು 74 ಬಾರಿ ಅವರಿಗೆ ವಿವಿಧ ಜಾತಿಯ ಹಾವುಗಳು ಕಚ್ಚಿದ್ದವು. ಕಳೆದ ಆಗಸ್ಟ್‌ ತಿಂಗಳಲ್ಲೂ ಹಾವು ಹಿಡಿಯುವಾಗ ಮಿಡಿ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿದ್ದರು. ಆಗ ಸುಮಾರು ದಿನ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದು
ಮನೆಗೆ ಬಂದಿದ್ದರು.

ಇದನ್ನೂ ಓದಿ:ಪಾಂಟಿಂಗ್‌ ಸೆಂಚುರಿ ದಾಖಲೆ ಮುರಿಯುವತ್ತ ವಿರಾಟ್‌ ಕೊಹ್ಲಿ

ಎರಡು ತಿಂಗಳ ಹಿಂದೆ ಮದುವೆ: ಅಪ್ಪಟ ದೇಶಭಕ್ತಿ ಹೊಂದಿದ್ದ ಡ್ಯಾನಿಯಲ್‌, ಅಪಾರ ಅಧ್ಯಯನ ಕೂಡ ಮಾಡಿದ್ದರು. ಎರಡು ತಿಂಗಳ ಹಿಂದಷ್ಟೇ ತಾವು ಪ್ರೀತಿಸಿದ ಯುವತಿಯೊಂದಿಗೆ ಅಂತರ್ಜಾತಿ ವಿವಾಹ ಕೂಡ ಆಗಿದ್ದರು. ಹಾವುಗಳನ್ನು
ರಕ್ಷಿಸುತ್ತಿದ್ದ ಡ್ಯಾನಿಯಲ್‌ ಅದೇ ಹಾವು ಕಡಿತದಿಂದ ಮೃತಪಟ್ಟಿರುವುದು ದುರಂತ. ಡ್ಯಾನಿಯಲ್‌ ನಿಧನಕ್ಕೆ ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಡಾ|ಕೆ.ರಾಜೇಂದ್ರ, ವಿಕಲಚೇತನರ ಹೋರಾಟಗಾರ ಘನಶ್ಯಾಂ ಬಾಂಡಗೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next